ಯುವಜನ/ಮಕ್ಕಳು

ಕಂಪನಿ ಬಿಡ್ತಿದ್ದೀರಾ?

ಆಧುನಿಕ ಜಗತ್ತು ಒಂದು ರೀತಿಯಲ್ಲಿ ರೇಸ್ ಇದ್ದಂತೆ. ಯಾವಾಗ್ಲೂ ಗೆಲ್ಲುವ ಕುದುರೆಗೇ ಮಣೆ. ಈ ಜಗತ್ತಿನಲ್ಲಿ ನಾವು ಚಾಲ್ತಿಯಲ್ಲಿರಬೇಕಾದರೆ ನಾವೂ ಓಡುವುದನ್ನು ಕಲಿಯಬೇಕು ಎನ್ನುವುದು ಬಹುತೇಕ ಯುವಕರ ನಂಬಿಕೆ. ಅದು ನಿಜ ಕೂಡ. ಇಂದು ಜೀವನ ನಡೆಯಬೇಕಾದರೆ ಕೆಲಸ ಎಂಬ ಕುದುರೆಯ ಹಿಂದೆ ಓಡಲೇಬೇಕು. ಕಾಸಿಗೆ ತಕ್ಕಂತೆ ಕಜ್ಜಾಯ ಎನ್ನುವ ಜಗತ್ತಿಗೆ ನೀವು ಹೊಂದಿಕೊಳ್ಳಲೇಬೇಕು...


ಉದ್ಯೋಗ ಬದಲಾವಣೆ ಈಗಿನ ಯುವಜನರಲ್ಲಿ ಬೆಳೆಯುತ್ತಿರುವ ಹೊಸ ಟ್ರೆಂಡ್. ಒಳ್ಳೆಯ ವೇತನ, ಉತ್ತಮ ಕೆಲಸದ ವಾತಾವರಣದ ನಿರೀಕ್ಷೆಯೊಂದಿಗೆ ಬಹುತೇಕ ಯುವಜನರು ಕಂಪನಿ ಅಥವಾ ಉದ್ಯೋಗ ಬದಲಾಯಿಸುತ್ತಾರೆ. ಕೆಲವರು ಐದು ವರ್ಷಗಳಲ್ಲಿ ಎರಡ್ಮೂರು ಕಂಪನಿ ಬದಲಾಯಿಸುವುದೂ ಉಂಟು. ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಜಿಗಿಯುವುದರಿಂದ ಆಗುವ ಬಹುಮುಖ್ಯ ಲಾಭ ವೇತನಕ್ಕೆ ಸಂಬಂಧಿಸಿದ್ದು. ಒಂದೇ ಕಂಪನಿಯಲ್ಲಿ 10 ವರ್ಷ ಕೆಲಸ ಮಾಡಿದವರಿಗಿಂತ ಕಂಪನಿಯಿಂದ ಕಂಪನಿಗೆ ಜಿಗಿದವರ ವೇತನ ದುಪ್ಪಟ್ಟಾಗಿರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಹಾಗಂತ ಬಹುತೇಕರು ವೇತನ ಹೆಚ್ಚಳದ ಆಸೆಯಿಂದಲೇ ಕಂಪನಿ ಬದಲಾಯಿಸುತ್ತಾರೆಂದೇನೂ ಇಲ್ಲ.
ಯಾವ ವಿಚಾರ ಮುಖ್ಯ?
ಕಂಪನಿ ಬದಲಾಯಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ನಿಜ. ಹಾಗಂತ ಕಂಪನಿಯಿಂದ ಕಂಪನಿಗೆ ಜಿಗಿಯುವುದು ಸುಲಭವೆ? ಖಂಡಿತಾ ಇಲ್ಲ. ಕೆಲವೊಮ್ಮೆ ಅದು ಸುಲಭ ಎನಿಸಬಹುದಾದರೂ ಇಲ್ಲಿ ಕೆಲವೊಂದು ವಿಚಾರಗಳು ಪ್ರಾಮುಖ್ಯವೆನಿಸುತ್ತವೆ. ವೇತನ ಹೆಚ್ಚಳಕ್ಕೆ ಮುಖ್ಯವಾಗಿ ವಿದ್ಯಾರ್ಹತೆ, ಕೌಶಲ್ಯ ಮತ್ತು ಇತ್ತೀಚಿನ ನಿಮ್ಮ ಕೆಲಸದ ಬೆಳವಣಿಗೆಯನ್ನೇ ಮಾನದಂಡವಾಗಿ ಪರಿಗಣಿಸಲಾಗುತ್ತದೆ ಎನ್ನುತ್ತದೆ 42 ದೇಶಗಳಲ್ಲಿ ಮ್ಯಾನ್ ಪವರ್ ಬಗ್ಗೆ ನಡೆಸಿದ ಒಂದು ಸಮೀಕ್ಷೆ.
ರಾಜಿ ಮಾಡಿಕೊಳ್ಳಬೇಕಾ?
ತಾವು ಬಯಸಿದ ಕಂಪನಿಯಲ್ಲಿ ಕೆಲಸ ಎಲ್ಲಿ ಕೈ ಜಾರುವುದೋ ಎಂಬ ಕಾರಣಕ್ಕೆ ಬಹುತೇಕರು ಹೆಚ್ಚಿನ ಜನ ಹೆಚ್ಚು ಸಂಬಳ ಕೇಳಲು ಹಿಂಜರಿಯುತ್ತಾರೆ. ಸಂಬಳದ ವಿಚಾರ ಬಂದಾಗ ಆತ್ಮವಿಶ್ವಾಸದಿಂದ ಮುನ್ನುಗ್ಗುವವನಷ್ಟೇ ಉದ್ಯೋಗ ಮಾರುಕಟ್ಟೆಯಲ್ಲಿ ಗೆಲ್ಲುತ್ತಾನೆ ಎನ್ನುತ್ತದೆ ಸಮೀಕ್ಷೆಗಳು.
2010ರಲ್ಲಿ ನಡೆದ ಸಮೀಕ್ಷೆ ಹೇಳುವ ಹಾಗೆ ಶೇ.51ರಷ್ಟು ಉದ್ಯೋಗಿಗಳು ಸಂಧಾನದ ಮೂಲಕ ಸದ್ಯ ಇರುವ ಸಂಬಳ ಹೆಚ್ಚಿಸಿಕೊಳ್ಳಲು ಇಷ್ಟಪಡುತ್ತಾರೆ. ಅದೇನೇ ಇದ್ದರೂ ಸದ್ಯ ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ನೆಮ್ಮದಿಯಾಗಿದ್ದರೆ ಒಂದು ವಿಚಾರವನ್ನಂತು ನೀವು ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕು. ಹೆಚ್ಚಿನ ಸಂಬಳ ಕೇಳುವ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲೇಬಾರದು. ನಿಮ್ಮ ಸಹೋದ್ಯೋಗಿಗಳಲ್ಲದೆ ಬೇರೆಡೆಯಿಂದ ಅವಕಾಶ ನಿಮ್ಮ ಮನೆಯ ಬಾಗಿಲು ಬಡಿದರೆ ಮುಲಾಜಿಲ್ಲದೆ ಒಪ್ಪಿಕೊಳ್ಳಿ. ಅವಕಾಶ ನೀಡಲು ಸಂಧಾನಕ್ಕೆ ಒಬ್ಬಂಟಿಯಾಗಿಯೇ ಆಹ್ವಾನಿಸಿದ್ದಾರೆಂದರೆ ಅವರು ನಿಮ್ಮ ಸಾಮರ್ಥ್ಯವನ್ನು ಗುರುತಿಸಿದ್ದಾರೆಂದೇ ಅರ್ಥ. ಆದರೆ, ಸಂದರ್ಶನದ ವೇಳೆ ನಿಮ್ಮ ಹಿಂದಿನ ಕೆಲಸದ ಬಗ್ಗೆ ವಿವರಿಸುವಲ್ಲಿ ತೋರುವ ಬುದ್ಧಿವಂತಿಕೆಯೂ ನೀವು ಬಯಸಿದ ಸಂಬಳ ಪಡೆಯಲು ನೆರವಾಗಬಲ್ಲದು ಎನ್ನುವುದು ಗೊತ್ತಿರಲಿ.

ಗಟ್ಟಿ ನಿರ್ಧಾರ
ಸಂಬಳದ ಬಗ್ಗೆ ಮಾತುಕತೆಗೆ ಹೋದ ಸಂದರ್ಭದಲ್ಲಿ ಸಕಾರಾತ್ಮಕವಾಗಿ ನಡೆದುಕೊಳ್ಳಿ. ಯಾವುದೇ ಅಳುಕಿಲ್ಲದೆ ಧೈರ್ಯವಾಗಿ ಮಾತನಾಡಿ. ಅವಕಾಶ ಸಿಕ್ಕ ತಕ್ಷಣ ಕೆಲಸ ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳಬೇಡಿ. ಎಚ್ಚರಿಕೆಯ ನಡೆ ಮತ್ತು ತಾಳ್ಮೆ ನಿಮ್ಮನ್ನು ಎತ್ತರದ ಸ್ಥಾನಕ್ಕೆ ಕರೆದೊಯ್ಯುತ್ತದೆ ಎನ್ನುವುದು ನೆನಪಿರಲಿ.

ಕಂಪನಿಯ ಹಿನ್ನೆಲೆ
ಸಂದರ್ಶನಕ್ಕೆ ಕರೆದಿರುವ ಸಂಸ್ಥೆಯ ಹಿನ್ನೆಲೆಯ ಕುರಿತು ಮಾಹಿತಿ ಕಲೆಹಾಕಿ. ಸಾಕಷ್ಟು ವಿಚಾರ ವಿಮರ್ಶೆ ನಡೆಸಿಯೇ ಮುನ್ನಡೆಯಿರಿ. ನಿಮ್ಮ ಸಿದ್ಧಾಂತ, ಆಲೋಚನೆ, ಆಸಕ್ತಿಗಳಿಗೆ ಅಲ್ಲಿ ಬೆಲೆ ಸಿಗುತ್ತದೆಯೇ ಎಂಬುದನ್ನು ಅದೇ ಕಂಪನಿಯೊಳಗೆ ಕೆಲಸ ಮಾಡುವವರ ಮೂಲಕ ತಿಳಿದುಕೊಳ್ಳಿ.

ತಜ್ಞರಿಂದ ಸಲಹೆ
ಸಂದರ್ಶನ ಎದುರಿಸಲು ವೃತ್ತಿಯಲ್ಲಿ ಅನುಭವ ಹೊಂದಿರುವ ತಜ್ಞರಿಂದ ಸಲಹೆ ಪಡೆಯುವುದು ಉತ್ತಮ. ಅವರಿಗೆ ಮಾರುಕಟ್ಟೆಯ ಟ್ರೆಂಡ್ ಕುರಿತು ಮಾಹಿತಿ ಇರುತ್ತದೆ.

ಮೊದಲ ಸಂಬಳ ಮುಖ್ಯವಲ್ಲ
ಇನ್ನೊಂದು ಕಂಪನಿಗೆ ಜಿಗಿಯುವಾಗ ನಿಮ್ಮ ಮೊದಲ ಸಂಬಳವನ್ನು ಮರೆತುಬಿಡಿ. ಮೊದಲ ಕೆಲಸದ ವೇಳೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಸಂಬಳ ಕೇಳುವುದು ಸಾಧ್ಯವಾಗಿರುವುದಿಲ್ಲ. ಆದರೆ, ಈಗ ನೀವು ಬೆಳೆದಿದ್ದೀರಿ ಎನ್ನುವುದು ನೆನಪಿರಲಿ.

ಪ್ರತಿಭೆ ಪ್ರದರ್ಶನ
ಜ್ಞಾನ, ಕೌಶಲ, ಅನುಭವದ ಜತೆಗೆ ಕಂಪನಿ ಮಾಲೀಕರು ನಿಮ್ಮಲ್ಲಿ ಸಂಘಟನಾ ಸಾಮರ್ಥ್ಯವನ್ನೂ ಹುಡುಕುತ್ತಾರೆ. ಇದರ ಜತೆಗೆ ನಿಮ್ಮ ಜ್ಞಾನ, ಕೌಶಲ್ಯ, ಅನುಭವದ ಪರಿಗಣನೆಯ ಕೆಲಸವೂ ನಡೆಯುತ್ತದೆ. ಸಿಬ್ಬಂದಿಯಾಗಿ ನಿಮಗೆ ನೀಡಿರುವ ಸ್ಥಾನ ಏನು? ಅದಕ್ಕೆ ತಕ್ಕುದಾದ ಸಾಮರ್ಥ್ಯ ನಿಮ್ಮಲ್ಲಿದೆಯೇ ಎಂಬುದನ್ನು ವಿಶ್ಲೇಷಿಸಿ. ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳಿ.


= ಎನ್.ಎಲ್. ಶಿವಮಾದು
shivamadhu2009@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!

ಯುವ ಜನತೆಯ ಆಕ್ರೋಶ ತಡೆಯಲು ಸಾಧ್ಯವಿಲ್ಲ, ಇಡೀ ದೇಶ ಜಂತರ್ ಮಂತರ್ ಆಗಲಿದೆ: ಪ್ರಕಾಶ್ ರಾಜ್

ಸೆಪ್ಟೆಂಬರ್‌ನಲ್ಲಿ ನಿರೀಕ್ಷೆ ಮೀರಿ ಹೆಚ್ಚಿದ ಭಾರತದ ಸಗಟು ಹಣದುಬ್ಬರ: ಶೇ.11.4ಕ್ಕೆ ಏರಿಕೆ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!