ಯುವಜನ/ಮಕ್ಕಳು

ಟೈಮ್ ಸೆನ್ಸ್

'ಮನೇಲಿ ಅಮ್ಮಂಗೆ ಕಣ್ಣು ಕಾಣ್ಸಲ್ಲ. ಎಲ್ಲಾ ಮನೆಗೆಲಸಗಳನ್ನೂ ಮುಗಿಸ್ಕೊಂಡು ಕಾಲೇಜಿಗೆ ಹೊರಡ್ಬೇಕು ಮೇಡಂ. ಏನಿಲ್ಲಾ ಅಂದರೂ ಒಂಬತ್ತುಗಂಟೆ ಆಗೇ ಅಗುತ್ತೆ. ಕಾಲೇಜು ತಲುಪುವಷ್ಟರಲ್ಲಿ ನಿಮ್ಮ ತರಗತಿ ಮುಗಿದಿರುತ್ತೆ, ನಾನೇನು ಮಾಡ್ಬೇಕು ಹೇಳಿ ಮೇಡಂ' ಅಂತ ಕಣ್ತುಂಬಿಕೊಂಡು ಕೇಳುತ್ತಾಳೆ ಶ್ರಾವ್ಯ, ಮೂರನೇ ಸೆಮಿಸ್ಟರ್ ವಿದ್ಯಾರ್ಥಿನಿ.
ನಮ್ಮ ತಂದೆ ಯಾವುದೋ ಕಾರಣಕ್ಕೆ ಜಗಳ ಮಾಡ್ಕೊಂಡು ಮನೆಯಿಂದ ಆಚೆ ಹೋದವರು ಎರಡು ದಿನಗಳಾದರೂ ವಾಪಸ್ ಬಂದಿಲ್ಲ ಮೇಡಂ. ನಮ್ಮಮ್ಮಂಗೆ ಥೈರಾಯಿಡ್ ಸಮಸ್ಯೆ. ಕೈಕಾಲೆಲ್ಲಾ ಊದಿ ನಡೆಯಲೂ ಆಗದ ಹಾಗಾಗಿತ್ತು. ಮನೆಲಿ ಮತ್ಯಾರೂ ಇಲ್ಲ. ಅಮ್ಮನ್ನ ಆಸ್ಪತ್ರೆಗೆ ಅಡ್ಮಿಟ್ ಮಾಡಿ ಒಂದಿನ ಕ್ಲಾಸ್ ಅಟೆಂಡ್ ಮಾಡಿದೆ ಮೇಡಂ. ದಯವಿಟ್ಟು ನನ್ನ ಪರಿಸ್ಥಿತಿನ ಅರ್ಥ ಮಾಡ್ಕೊಳ್ಳಿ. ನನ್ಮೇಲೆ ಕೋಪಿಸ್ಕೋಬೇಡಿ, ಪ್ಲೀಸ್... ಕ್ಷಮ್ಸಿದೀನಿ ಅಂತ ಹೇಳಿ ಮೇಡಂ... ಎಂದು ಬಿಕ್ಕಳಿಸುತ್ತಾಳೆ ಅದೇ ತರಗತಿಯ ಸುಧಾ.
ಮೇಡಂ, ನಮ್ಮನೇಲಿ ಅದೇನೇನೋ ಸಮಸ್ಯೆಗಳು. ನಮ್ಮೂರು ತುಂಬಾ ದೂರ ಬೇರೆ. ಅದಕ್ಕೇ ಇಲ್ಲಿ ನಮ್ಮ ಸಂಬಂಧಿಕರ ಮನೆಲಿದ್ದೀನಿ. ನಿಮಗೇ ಗೊತ್ತಲ್ಲ ಮೇಡಂ, ದುಡ್ಡಿಲ್ಲದೋರಿಗೆ ವಿದ್ಯೆ ಅನ್ನೋದು ಗಗನಕುಸುಮ. ನನಗೆ ಚೆನ್ನಾಗಿ ಓದಿ ಒಂದು ಒಳ್ಳೆ ಪತ್ರಿಕೇಲಿ ರಿಪೋರ್ಟರ್ ಆಗಿ ಕೆಲಸ ಮಾಡಬೇಕು ಅಂತ ಆಸೆ. ಅದಕ್ಕೇ ಒಂದು ಪುಟ್ಟರೂಂ ಬಾಡಿಗೆಗೆ ತಗೊಂಡು ನನ್ನ ಪಾಡಿಗೆ ನಾನಿರೋದಕ್ಕೆ ಹಣ ಇಲ್ಲ. ಇಲ್ಲಿ ನಾನು ಬೆಳಗ್ಗೆದ್ದು ಬಾಗಿಲು ತೊಳೆದು ರಂಗೋಲಿ ಹಾಕ್ತೀನಿ. ನಾನು ಹುಡುಗ, ಇವೆಲ್ಲಾ ಕೆಲಸ ಮಾಡ್ಬಾರ್ದು ಅಂತ ನಂಗೇನಿಲ್ಲ. ಈ ಎಲ್ಲ ಅಡಾವುಡಿಗಳ ನಡುವೆ ನಾನು ಕಾಲೇಜು ತಲುಪೋದು ಹತ್ತುಗಂಟೆ ಆಗೇ ಆಗುತ್ತೆ. ಇದೆಲ್ಲಾ ಯಾರ ಹತ್ರ ಹೇಳ್ಕೊಳ್ಳಿ ಮೇಡಂ...ಹೇಳುತ್ತ ಕಣ್ಣು ತುಂಬಿಕೊಳ್ಳುತ್ತಾನೆ ಗಣೇಶ.
ಸ್ನಾತಕೋತ್ತರ ವಿದ್ಯಾರ್ಥಿಗಳಾಗಿದ್ದುಕೊಂಡು ತರಗತಿಗಳಿಗೆ ಯಾಕೆ ಸಮಯಕ್ಕೆ ಸರಿಯಾಗಿ ಬರುವುದಿಲ್ಲ, ಸಮಯ ಪ್ರಜ್ಞೆಯನ್ನು ಯಾವಾಗ ಮೈಗೂಡಿಸಿಕೊಳ್ಳುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಸಿಕ್ಕಿದ ಉತ್ತರಗಳ ಪೈಕಿ ಕೆಲವು ಮಾದರಿಗಳು ಇವು. ಇವುಗಳನ್ನು ಕೇಳಿಸಿಕೊಂಡ ಮೇಲೂ ಆ ವಿದ್ಯಾರ್ಥಿಗಳ ಮೇಲೆ ಕೋಪಿಸಿಕೊಳ್ಳುವುದಂತೂ ಸಾಧ್ಯವಿಲ್ಲ. ಆದರೆ ಇಂತಹ ಸಮಸ್ಯೆಗಳೆಲ್ಲದರ ನಡುವೆಯೂ ತರಗತಿ, ಹಾಜರಾತಿಯ ಮಹತ್ವ, ಎಲ್ಲಕ್ಕೂ ಮುನ್ನ ಸಮಯಕ್ಕೆ ಸರಿಯಾಗಿ ತರಗತಿಯಲ್ಲಿರುವುದು... ಮುಂತಾದುವುಗಳ ಅನಿವಾರ್ಯತೆಯನ್ನು ಪ್ರಜ್ಞಾವಂತ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಬಗೆ ಹೇಗೆ? ಅದರಲ್ಲೂ ಸಮೂಹ ಸಂವಹನ ವಿದ್ಯಾರ್ಥಿಗಳು ಅಂದರೆ ಸಮಯ ಪಾಲನೆಯಲ್ಲಿ ನೂರಕ್ಕೆ ನೂರು ಶಿಸ್ತಿನ ಸಿಪಾಯಿಗಳಾಗಬೇಕು. ಮುಂದೆ ಡೆಡ್‌ಲೈನ್ ವೀರರಾಗುವುದು ಇವೇ ವಿದ್ಯಾರ್ಥಿಗಳಲ್ಲವೇ? ಹಾಗೆಂದು ಕೆಲಸಕ್ಕೆ ಸೇರಿದ ನಂತರ ಮೇಲ್ಕಂಡ ಯಾವುದೇ ಕಾರಣಗಳಿಗಾಗಿಯಾದರೂ ಅವರು ಮೇಲಿಂದ ಮೇಲೆ ರಜೆ ತೆಗೆದುಕೊಳ್ಳುವುದು ಸಾಧ್ಯವಿಲ್ಲ ಅಥವಾ ಇಂದು ಕೊಡಬೇಕಾಗಿರುವ ವರದಿಯನ್ನು ಏನೋ ತೊಂದರೆಯಾಯಿತೆಂದು ಮರುದಿನ ಕೊಡಲು ಸಾಧ್ಯವಾಗುವುದಿಲ್ಲ.
ಹಾಗೆ ನೋಡಿದರೆ ನಾಳೆ ಎಂದದ್ದನ್ನು ಇಂದು, ಇಂದು ಎಂದದ್ದನ್ನು ಈಗ ಬೇಕು ಎನ್ನುವ ಕ್ಷೇತ್ರ ಪತ್ರಿಕೋದ್ಯಮ. ಅಂಥದ್ದರಲ್ಲಿ ನೂರೆಂಟು ನೆಪಗಳಿಗಾಗಿ ತರಗತಿ ತಪ್ಪಿಸಿಕೊಳ್ಳುವುದು ವಿದ್ಯಾರ್ಥಿಗಳಿಗಾಗಿ ತಮಗಿರುವ ಅವಕಾಶ ಎಂದೇ ಭಾವಿಸಿದರೆ ಮುಂದೆ ಇವರಿಗೆ ಪತ್ರಿಕೋದ್ಯಮದ ಒತ್ತಡಗಳನ್ನು ಸಹಿಸುವುದು ಸಾಧ್ಯವಾದೀತೇ? ಉದ್ಯೋಗ, ಮದುವೆ, ಸಂಸಾರ ಎಂದಾದಾಗ ಇತ್ತನಿಂದ ಬದುಕಿನ ನಿರೀಕ್ಷೆಗಳೂ ಬಹಳವಿರುತ್ತವೆ. ಔದ್ಯೋಗಿಕ ಬದುಕಿನ ಡಿಮಾಂಡ್ ತುಂಬಾ ದೊಡ್ಡದೇ ಆಗಿರುತ್ತದೆ. ಅಲ್ಲಿ ಯಾವ ಕಾರಣಗಳಾಗಲಿ, ನೆಪಗಳಾಗಲಿ ನಡೆಯುವುದಿಲ್ಲ. ಸಮಯ, ಗಡಿಬಿಡಿ ಎರಡೇ ಪತ್ರಕರ್ತರ, ಪತ್ರಿಕೋದ್ಯಮಿಗಳ ಬದುಕು. ಅಷ್ಟರ ಮಟ್ಟಿಗೆ ಪತ್ರಿಕೋದ್ಯಮ ವಿದ್ಯಾರ್ಥಿಗಳು ತಯಾರಾಗುವುದು ಅನಿವಾರ್ಯ. ಹಾಗೆಂದು ತರಗತಿಗಳಿಗೆ ಹಾಜರಾಗುವಲ್ಲಿಯೇ ವಿದ್ಯಾರ್ಥಿಗಳು ಇವ್ಯಾವುವನ್ನೂ ಮನಗಾಣದೇ ಹೋದರೆ ಅವರ ಮುಂದಿನ ದಾರಿ ಮುಳ್ಳಿನ ಮೆಟ್ಟಿಲಾಗಿಬಿಡಬಹುದು.
ಸಾಮಾನ್ಯವಾಗಿ ಸ್ನಾತಕೋತ್ತರ ಹಂತಗಳಲ್ಲಿ ವಿದ್ಯಾರ್ಥಿಗಳು ಸರಿಯಾಗಿ ತರಗತಿಗೆ ಹಾಜರಾಗುತ್ತಿಲ್ಲ ಎಂದರೆ ಕಾರಣಗಳು ಪ್ರಾಧ್ಯಾಪಕರು ತರಗತಿ ತೆಗೆದುಕೊಳ್ಳುತ್ತಿಲ್ಲವೆಂದೋ, ಅವರು ಹೇಳುವ ವಿಷಯಗಳು ತಮ್ಮ ಅರ್ಥಗ್ರಹಿಕೆ ಸಾಮರ್ಥ್ಯವನ್ನು ಮೀರಿದೆಯೆಂದೂ ಅಥವಾ ತರಗತಿಯಲ್ಲಿ ಕುಳಿತು ಸಮಯ ವ್ಯರ್ಥ ಮಾಡುವುದಕ್ಕಿಂತ ಲೈಬ್ರರಿಗೆ ಹೋಗಿ ಓದಿಕೊಳ್ಳುವುದು ವಾಸಿಯೆಂದೋ ಇರುತ್ತವೆ.
ಆದರೆ ಪ್ರಾರಂಭದಲ್ಲಿ ಪ್ರಸ್ತಾಪಿಸಿದ ಎಲ್ಲ ಸಮಸ್ಯೆಗಳನ್ನು ಸಂಸ್ಥೆ ಬಗೆಹರಿಸಲು ಸಾಧ್ಯವಿಲ್ಲ. ಆ ಕೆಲಸವನ್ನು ಸ್ವತಃ ವಿದ್ಯಾರ್ಥಿಗಳೇ ಮಾಡಿಕೊಳ್ಳಬೇಕು. ಅವರಲ್ಲಿ ಅಷ್ಟರ ಮಟ್ಟಿನ ಪ್ರಬುದ್ಧತೆಯನ್ನು ಶಿಕ್ಷಣ- ಪತ್ರಿಕೋದ್ಯಮ ಕ್ಷೇತ್ರ ನಿರೀಕ್ಷಿಸುತ್ತದೆ ಕೂಡಾ. ವಿದ್ಯಾರ್ಥಿಗಳು ಅನುಭವಿಸುತ್ತಿರುವ ಕಷ್ಟ, ಅವರ ಓದಿನ ಆಸಕ್ತಿ ಗಮನಿಸಿ ಪರೀಕ್ಷೆ ತೆಗೆದುಕೊಳ್ಳಲು ಒಬ್ಬ ಹೃದಯವಂತ ಉಪನ್ಯಾಸಕ ಬಿಡಬಹುದು. ಆದರೆ ಅದರಿಂದ ವಿದ್ಯಾರ್ಥಿಗಳಿಗೆ ಆ ಕ್ಷಣಕ್ಕೆ ಸಹಾಯವಾದೀತು ವಿನಾ ಬದುಕಿಗಲ್ಲ.
ಸ್ನಾತಕೋತ್ತರ ಹಂತದಲ್ಲಿ ಸಮಯ ಪರಿಪಾಲನೆಯ ಪಾಠ ಸಾಧ್ಯವೇ ಅಥವಾ ಟೈಮ್ ಸೆನ್ಸ್ ಅನ್ನುವುದು ವ್ಯಕ್ತಿಯೊಬ್ಬನ ಅಂತರ್ಗತ ಅರ್ಹತೆಯೇ ಎಂದು ಪ್ರಶ್ನಿಸಹೊರಟರೆ ಉತ್ತರ ಸಿಗುವುದು ಕಷ್ಟ. ಟೈಮ್ ಮ್ಯಾನೇಜ್‌ಮೆಂಟ್ ಎಂಬುದನ್ನು ಮೃದು ಕೌಶಲ್ಯಗಳ ತರಬೇತಿ ಕಾರ್ಯಾಗಾರಗಳಲ್ಲಿ ತಕ್ಕಮಟ್ಟಿಗೆ ಮನದಟ್ಟು ಮಾಡಿಕೊಡಬಹುದೇ ಹೊರತು ಅದನ್ನು ರೂಢಿ ಮಾಡಿಕೊಳ್ಳುವುದು, ಆ ರೀತಿಯ ಶ್ರದ್ಧೆಯನ್ನು ಮೈಗೂಡಿಸಿಕೊಳ್ಳುವುದು ವಿದ್ಯಾರ್ಥಿಗಳ ವೈಯುಕ್ತಿಕ ಆಯ್ಕೆ.

= ಆರತಿ ಪಟ್ರಮೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!