ಬರವಣಿಗೆಯಲ್ಲಿ ಆಸಕ್ತಿಯಿದ್ದ ಆತ ತನ್ನ ಪ್ರೇಮದ ಬಗ್ಗೆ ಭಾವನಾತ್ಮಕ ಬರಹವೊಂದನ್ನು ಬರೆದು ಪತ್ರಿಕೆಗೆ ಕಳುಹಿಸಿದ. ಪ್ರಕಟಗೊಂಡ ಪತ್ರಿಕೆಯ ಪುಟದ ಪ್ರತಿಯನ್ನೂ ಸೇರಿದಂತೆ ಸಿಹಿ ತಿಂಡಿಯ ಪೊಟ್ಟಣವನ್ನು ಜನ್ಮದಿನದ ಉಡುಗೊರೆಯ ರೂಪದಲ್ಲಿ ಸರ್ಪ್ರೈಸಾಗಿ ಆಕೆಗೆ ನೀಡಿದ. ಆದರೆ ಅದನ್ನು ಸ್ವೀಕರಿಸಿದ ಆಕೆ ಸಿಹಿತಿಂಡಿಯನ್ನು ಬಾಯಿಚಪ್ಪರಿಸಿ ತಿಂದು ಪತ್ರಿಕೆಯ ಪುಟವನ್ನು ಅಪ್ಪಿತಪ್ಪಿ ಕೂಡ ನೋಡದೆ ಅದೇ ಪೇಪರ್ನ್ನು ಹರಿದು ಕೈಒರೆಸಿ ಎಸೆದಳು.
ಆತ ರೇಲ್ವೇ ಸ್ಟೇಷನ್ನಲ್ಲಿ ತಡರಾತ್ರಿಯ ರೈಲಿಗಾಗಿ ಕಾಯುತ್ತಾ ಒಬ್ಬನೇ ಕಲ್ಲುಬೆಂಚಿನ ಮೇಲೆ ಕುಳಿತಿದ್ದ. ಆತನ ಪಕ್ಕದಲ್ಲೇ ಸೂಟ್ಕೇಸ್ ಇರಿಸಿ ಶೌಚಾಲಯಕ್ಕೆಂದು ಕೊಂಚ ದೂರ ಹೋದ ಸಹಪ್ರಯಾಣಿಕ ಅರೆಗಳಿಗೆಯಲ್ಲಿಯೇ ಹಿಂದಿರುಗಿ, ಆತನೆಡೆಗೆ ಸಂಶಯಭರಿತ ದೃಷ್ಟಿ ಹಾಯಿಸಿ ತನ್ನ ಸೂಟ್ಕೇಸ್ ಅನ್ನು ಎತ್ತಿಕೊಂಡು ನಡೆದ !
ಧನಿಕನೋರ್ವನ ಶ್ರಾದ್ಧ ನಡೆಯುತ್ತಿತ್ತು. ಆ ಪ್ರಯುಕ್ತ ಬಗೆ ಬಗೆಯ ಭಕ್ಷಗಳ ಭೋಜನದ ಎಡೆ ಇಟ್ಟು ಸಂಪ್ರದಾಯದಂತೆ ಕಾಗೆಗಳು ಅದನ್ನು ತಿನ್ನಲೆಂದು ಅಗಲಿದವರ ಬಂಧು ಬಳಗದವರು ಕಾಯುತ್ತಿದ್ದರು. ಸ್ಮಶಾನದ ಪಕ್ಕದ ಪಾಳು ಜೋಪಡಿಯ ನಿರ್ಗತಿಕ ಬಾಲಕನೊಬ್ಬ ಹಸಿವಿನಿಂದ ಆಸೆ ಕಂಗಳಿನೊಂದಿಗೆ ಅವರು ಬಡಿಸಿಟ್ಟ ಊಟದ ಎಲೆಯ ಕಡೆಗೆ ಓಡಿಬಂದಾಗ ಎಲ್ಲರೂ ಅರಚಾಡಿ ಅವನನ್ನು ಬೆದರಿಸಿ ದೂರ ಕಳುಹಿಸಿದರು.
ಸಂದೇಶ್ ಎಚ್. ನಾಯ್ಕ್ ಹಕ್ಲಾಡಿ