ನನ್ನ ಪ್ರೀತಿಯ ಇನಿಯ, ಅದೇಕೋ ಗೊತ್ತಿಲ್ಲ ಕಣೋ, ನೀ ನನಗೆ ಬರೀ ಸ್ನೇಹಿತನಲ್ಲ. ಕೇವಲ ನನ್ನ ಭಾವನೆಗಳಿಗೆ ಸ್ಪಂದಿಸುವ, ಎನ್ನ ಮನದ ಒಡಲಾಳದಲ್ಲಿ ಬೆಚ್ಚಗೆ ಕುಳಿತಿರುವ ಪ್ರಿಯತಮನಲ್ಲ. ಅವೆಲ್ಲಕ್ಕಿಂತಲೂ ಹೆಚ್ಚು ನೀ ನನಗ. ಅದಕ್ಕಾಗಿಯೇ ಅಚ್ಚುಮೆಚ್ಚು ನೀ ಎನಗೆ. ಆದರೆ ಅದ್ಯಾವ ಕೆಟ್ಟ ದೃಷ್ಟಿ ಎಡತಾಕಿತೋ ನಮ್ಮ ಪ್ರೀತಿಯ ಮೇಲೆ... ಪರಿಣಾಮ ನಾವಿಂದು ಎಂದೂ ಸಂದಿಸದ ಎರಡು ದಿಕ್ಕುಗಳಂತಾಗಿದ್ದೇವೆ.
ಹೌದು, ಅಂದು ನನ್ನನ್ನು ನೀನು ಆ ಕಣ್ಣನೋಟದಲ್ಲಿ ಸೆಳೆದೆ. ಆ ನೋಟವೇ ನಮ್ಮಿಬ್ಬರ ಪ್ರೀತಿಗೆ ಅಡಿಪಾಯವಾಯಿತು. ಹೃದಯಗಳು ಬೆಸೆಯಲು ಕಾರಣವಾಯಿತು. ಮುಂದೆ ನಮ್ಮ ಪ್ರೀತಿ ಹೆಮ್ಮರವಾಗಿ ಬೆಳೆಯಿತು. ಆ ಮರಕ್ಕೆ ನೀನು ಒಲವಿನ ನೀರೆರೆದೆ. ಭಾವಗಳ ಬಂಧ ಬೆಸೆದೆ. ಆದರೆ ಆ ಪ್ರೇಮ ಬೆಸುಗೆ ಇಷ್ಟು ಬೇಗ ಸಡಿಲಗೊಂಡಿತೆ? ಆಡಿದ ಮಾತು, ಕೊಟ್ಟ ವಚನ ಮರೆತುಹೋದವೆ? ನನ್ನ ಹೃದಯದಲ್ಲಿ ನೀನು ನೆಟ್ಟ ಪ್ರೀತಿಯ ಸಸಿ ಇಂದು ಹೆಮ್ಮರವಾಗಿದೆ. ಅದನ್ನು ಬುಡಸಮೇತ ಕಿತ್ತು ಹಾಕುವ ಹಕ್ಕು ಯಾರಿಗಿದೆ? ನಿನ್ನ ಹೊರತು!? ನೀನೇ ಕಿತ್ತು ಹಾಕುವೆಯಾ? ದಯಮಾಡಿ ಉತ್ತರಿಸು...
ನನ್ನ ಪ್ರತೀ ಹುಸಿಮುನಿಸುಗಳಿಗೂ, ಕಣ್ಣಂಚಿನ ಸಣ್ಣ ಕೋಪಕ್ಕೂ ಕಾರಣ ಕೇಳುತ್ತಿದ್ದ ನೀನು, ನನಗೇಕೆ ಕಾರಣ ನೀಡದೇ ಹೊರಡುತ್ತಿರುವೆ? ನಮ್ಮ ಪ್ರೀತಿಯ ಮಹಾನತೆಯ ಮುಂದೆ ಇಡೀ ಜಗತ್ತೇ ಕುಬ್ಜ ಎನ್ನುತ್ತಿದ್ದ ನಿನ್ನ ಆ ಮಾತುಗಳು ಇನ್ನೂ ಕಿವಿಯಲ್ಲಿ ಗುಂಯ್ ಗುಡುತ್ತಿವೆ. ನೋಡು ಗೆಳೆಯಾ, ನಿನ್ನೆಲ್ಲಾ ಸಮಸ್ಯೆಗಳು ನನ್ನ ಕಣ್ಣಲ್ಲೇ ಕರಗಿ ಹೋಗುವ ಸಮಯ ಹತ್ತಿರವೇ ಇತ್ತು. ನಿನ್ನ ಬಾಳಿನಲ್ಲಿ ನಾನು ಬೆಳಕಾಗಿ ಬರುವೆ. ಖುಷಿಯ ದಿನಗಳು ಮುಂದಿವೆ. ಅಲ್ಲಿ ನಿನಗೆ ಶುಭಕೋರಲು ಈ ಹೃದಯ ಕಾದಿದೆ. ಆದರೆ ನಿನ್ನ ಏಳಿಗೆ ಬಯಸುವ ನನ್ನ ಮನಸಿನ ಪಿಸುಮಾತುಗಳು ನಿನಗೆ ಅರ್ಥವಾಗದೇ ಹೋದವೆ? ಉತ್ತರಿಸು...
ನಮ್ಮ ಪ್ರೀತಿಯ ಪರಿ ಕಂಡು ಕೊರಗಿದವರೆಷ್ಟು? ಮರುಗಿದವರೆಷ್ಟು? ಹಿಂದೆ ಮಾತನಾಡಿಕೊಂಡವರೆಷ್ಟು ಜನ? ಅದ್ಯಾವುದಕ್ಕೂ ಜಗ್ಗದ ನೀನು ಇಂದು ಅದ್ಯಾವ ಒತ್ತಡಕ್ಕೆ ಬಗ್ಗುತ್ತಿರುವೆ? ಉತ್ತರ ಬರಲಿ. ನಿನಗೆ ನಾ ಜಾಸ್ತಿ ಹೇಳಲಾರೆ. ಪೀಡಿಸಲಾರೆ. ನೀನೇ ಕಟ್ಟಿದ ಪ್ರೀತಿಯ ಗೂಡಿನಿಂದ ನನ್ನ ಒಬ್ಬಳನ್ನೇ ಬಿಟ್ಟು ಹೊರಡುತ್ತಿವೆ ಸುಖವನರಿಸಿಕೊಂಡು...
ಅಪರಿಚಿತನೇ, ಮನೆಯವರು ನೋಡಿದ ಹುಡುಗಿಯೊಂದಿಗೆ ಕೆಲವೇ ದಿನಗಳಲ್ಲಿ ದಾಂಪತ್ಯದ ಹೆಜ್ಜೆ ಹಾಕುವ ಹೊಂಗನಸಿನಲ್ಲಿ ಮುಳುಗಿದ್ದೀಯಾ ಎಂದು ಇದೀಗ ತಾನೆ ಸುದ್ದಿ ತಲುಪಿತು. ಸಂಕಟವಾಯಿತು. ಎದೆಯೊಡೆಯಿತು. ಸಮಾಧಾನ ಆಗುವಷ್ಟು ಅತ್ತು ಹಗುರಾದೆ. ಇರಲಿ ಬಿಡು... ಮುಂಬರುವ ದಿನಗಳಲ್ಲಿ ನಿನ್ನ ಜೀವನ ಚೆನ್ನಾಗಿರಲಿ ಎಂದು ಆ ದೇವರನ್ನು ಕೋರುವೆ.
ಚೆನ್ನಾಗಿರು...
ಆದರೆ ಹೊರಡುವ ಮುನ್ನ ನನ್ನನ್ನು ಬಿಡಲು ಕಾರಣ ಏನು ಎಂದು ಹೇಳಿ ಹೊರಡು.ಅದೇ ನೀ ನನಗೆ ಕೊಡುವ ಪ್ರೇಮದ ಕಾಣಿಕೆ.
ಇಂತಿ ನಿನ್ನವಳಾಗಬಯಸಿದ್ದ...
= ಮೈನಾವತಿ ನಾಯಕ್