ಯುವಜನ/ಮಕ್ಕಳು

ಬ್ರೇಕ್ ಅಪ್

ಪ್ರೀತಿಗೆ ಇಂದಿನ ಪ್ರಂಪಂಚದಲ್ಲಿ ಯಾವ ಅರ್ಥವೂ ಇಲ್ಲ, ಬೆಲೆಯೂ ಇಲ್ಲ. ಅಮರ ಪ್ರೇಮಿಗಳಂತೆ ನಾಲ್ಕಾರು ದಿನ ಓಡಾಡುವ ಪ್ರೇಮಿಗಳು ಕೊನೆಗೆ ಕ್ಷುಲ್ಲಕ ಕಾರಣಕ್ಕೆ ಬೇರಾಗುವ ನಿರ್ಣಯ ಮಾಡಿಬಿಡುತ್ತಾರೆ ಅಥವಾ ಬೇರೆಯಾಗಬೇಕೆಂದೇ ಪ್ರೀತಿ ಮಾಡಹೊರಡುತ್ತಾರೆ. ಯುವಜನರು ವಯಸ್ಸಿನ ಉದ್ವೇಗಕ್ಕೆ ಒಳಗಾಗಿ ಪ್ರೀತಿ ಅರಸುವುದು ಸರ್ವೇ ಸಾಮಾನ್ಯ ಎಂಬಂತಾಗಿಬಿಟ್ಟಿದೆ.
ಜವಾಬ್ದಾರಿ ಇಲ್ಲದ, ನಾಳೆಗಳ ಬಗ್ಗೆ ಅರಿವಿಲ್ಲದ ವಯಸ್ಸಿನಲ್ಲೇ ಮನಸ್ಸು ಹೆಚ್ಚಾಗಿ ಎಗ್ಗಿಲ್ಲದೆ ಓಡುತ್ತದೆ. ಆಗಲೇ ಸ್ನೇಹಿತರ ಅನುಕರಣೆ ಮಾಡಲು ಹೋಗಿ ನನಗೂ ಒಬ್ಬ ಗೆಳೆಯ/ಗೆಳತಿ ಬೇಕು ಎನ್ನುವ ನಿರ್ಣಯಕ್ಕೆ ಬಂದು ಬಿಡುತ್ತದೆ. ಬಣ್ಣದ ಚಿಟ್ಟೆಯಾದ ಮನಸ್ಸು ಎಲ್ಲೆಂದರಲ್ಲಿ ಹರಿದು ಇಬ್ಬರಲ್ಲಿ ಒಬ್ಬರನ್ನು ಇದೇ ನಿಜವಾದ ಪ್ರೀತಿ ಎನ್ನುವಂತೆ ಭಾವಿಸಲು ಪ್ರೇರೇಪಿಸುತ್ತದೆ. ಕಾಟಾಚಾರಕ್ಕೆ ಸುತ್ತಿದ ಪ್ರೇಮಿ ದೂರಾದಾಗ ಇದನ್ನೇ ನಿಜವಾದ ಪ್ರೀತಿ ಎಂದುಕೊಂಡಿದ್ದ ಸಂಗಾತಿಯ ಮನದ ಮಡಿಲ ನಿಷ್ಕಲ್ಮಶ ಭಾವನೆಗಳಿಗೆ ಪೆಟ್ಟು ಬಿದ್ದು ಮೂರು ಹೊತ್ತೂ ಕಣ್ಣೀರ ಕಡಲಲಿ ಮೀಯುವಂತೆ ಮಾಡುತ್ತದೆ. ಪದೇ ಪದೆ ನಾನು ಮಾಡಿದ ಯಾವ ತಪ್ಪಿಗೆ ಈ ಶಿಕ್ಷೆ ಎಂದು ಕೊರಗುವುದಕ್ಕೆ ಎಡೆ ಮಾಡಿಕೊಡುತ್ತದೆ. ಬಾರದ ಪ್ರೇಮಿ ಹಿಂತಿರುಗಿ ಬಂದಾನು ಎನ್ನುವ ಭ್ರಮೆಯೇ ಕನಸಾಗಿ ಬಿಡುತ್ತದೆ. ಆ ಕನಸು ಈಡೇರದಿದ್ದಾಗ ಕಣ್ಣೀರೇ ಬದುಕಾಗುತ್ತದೆ. ಸತ್ಯದ ಅರಿವಿದ್ದರೂ ಮನಸ್ಸು ಅದನ್ನು ಅರಗಿಸಿಕೊಳ್ಳಲು ತಯಾರೇ ಇರುವುದಿಲ್ಲ. ಪ್ರೀತಿ ಕಳೆದುಕೊಂಡ ಮನಸು ಇನ್ನು ನನಗೆ ಬದುಕೇ ಇಲ್ಲ ಎಂದು ನಿರ್ಧರಿಸಿ ಖಿನ್ನತೆಗೆ ಜಾರಿ ಬೀಳುತ್ತದೆ.
ಅಂಥ ಪರಿಸ್ಥಿತಿಯಿಂದ ಹೊರಬಂದು 'ನಾಳೆಗಳಿಗಾಗಿ ನಾನು' ಎಂದು ಮತ್ತೆ ಮನಕ್ಕೆ ನಗು ಕಲಿಸಲೇಬೇಕು. ಹಳೆಯದೆಲ್ಲವ ಮರೆತು ಮುಂದಿನ ಭವಿತವ್ಯದ ಬಗ್ಗೆ ಯೋಚಿಸಬೇಕು. ಮನಸೋ ಇಚ್ಛೆ ಒಮ್ಮೆ ಅತ್ತು ಬಿಟ್ಟು ಹೋದ ವ್ಯಕ್ತಿಗೆ ಶ್ರಾದ್ಧ ಮಾಡಿ ಮುಗಿಸಿದೆ ಇನ್ನು ವಾಪಸು ಬರಲು ಸಾಧ್ಯವೇ ಇಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕು. ಅಂತ್ಯ ಕಂಡ ಪ್ರೀತಿಯ ಪುಟಗಳಿಗೆ ಬದುಕಿನ ಸಾವಿರ ಪುಟಗಳ ಪರಿಚಯಿಸಲು ಸನ್ನದ್ಧರಾಗಬೇಕು. ನಿಮಗಿಷ್ಟವಾದ ಕೆಲಸಗಳತ್ತ ಹೆಚ್ಚು ಗಮನ ಹರಿಸಬೇಕು. ನೆನಪುಗಳನ್ನು ಮರೆಸಲು ಸ್ನೇಹಿತರೊಟ್ಟಿಗೆ ಹೆಚ್ಚು ಕಾಲ ಕಳೆಯಲು ಅನುವಾಗಬೇಕು. ನಿಮ್ಮ ಮನದಾಳವ ಅವರಲ್ಲಿ ಬಿಚ್ಚಿಟ್ಟು ಮುರಿದ ಪ್ರೀತಿಯ ಹಾಳೆಯ ಕಸದ ಬುಟ್ಟಿಗೆ ಎಸೆಯಲು ಸಲಹೆ ಮತ್ತು ಸಹಾಯ ಪಡೆದುಕೊಳ್ಳಬೇಕು. ಅವನ/ಅವಳ ನೆನಪು ತರುವ ಎಲ್ಲಾ ವಸ್ತುಗಳನ್ನು ನಿಮ್ಮ ಮನದ ಮತ್ತು ಮನೆಯಿಂದ ಹೊರಹಾಕಬೇಕು.
ಬ್ರೇಕ್ ಅಪ್ ನೋವಿನ ಸಂತೆಯಿಂದ ದೂಡಿಕೊಂಡು ಹೊರಬರುವುದು ತುಂಬಾ ಕಷ್ಟ ನಿಜ. ಆದರೆ ಅದೇ ನೋವಿನೊಂದಿಗೆ ಬದುಕುವುದು ಅದಕ್ಕಿಂತಲೂ ಕಷ್ಟದ ಕೆಲಸ. ನಿಮ್ಮನ್ನು ದೂರ ತಳ್ಳಿ ತನ್ನ ಜೀವನದಲ್ಲಿ ಆ ವ್ಯಕ್ತಿ ಖುಷಿಯಾಗಿಯೇ ಇರುವಾಗ ನೀವೇಕೆ ಆ ವ್ಯಕ್ತಿಯ ನೆನಪಿನಲ್ಲೇ ಇರಬೇಕು. ನೀವೂ ಕೂಡ ನಿಮ್ಮ ಬದುಕನ್ನು ಆನಂದಿಸ ಬೇಕಲ್ಲವೇ? ಒಮ್ಮೆ ಯೋಚಿಸಿ ನೋಡಿ... ನಿಮ್ಮಷ್ಟೇ ಆ ವ್ಯಕ್ತಿಯೂ ಪ್ರೀತಿಯಲ್ಲಿದ್ದನೆಂದರೆ ಬ್ರೇಕ್ ಅಪ್ ಆಗುತ್ತಿರಲಿಲ್ಲ ಅಲ್ವೇ?
ಇದೊಂದು ಪ್ರಶ್ನೆಗೆ ನಿಮ್ಮ ಬುದ್ಧಿ ನೀಡುವ ಉತ್ತರವನ್ನು ಅರಗಿಸಿಕೊಂಡರೆ ಸಾಕು. ಮತ್ತೆ ನೀವು ಪುಟಿದೆದ್ದು ನಿಂತು ಮೊದಲಿನಂತಾಗುವಿರಿ.
ಆಲ್ ದಿ ಬೆಸ್ಟ್.

= ಜಮುನಾ ರಾಣಿ ಎಚ್.ಎಸ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!