ಸಂಸ್ಕೃತವೆಂದರೆ ಕಬ್ಬಿಣದ ಕಡಲೆ ಎಂದು ದೂರ ಸರಿಯುವವರೇ ಹಲವರು. ಇನ್ನು ಆ ಭಾಷೆಯ ಮೇಲೆ ಪ್ರಭುತ್ವ ಸಾಧಿಸುವುದು ದೂರದ ಮಾತು. ಇತ್ತೀಚಿನ ದಿನಗಳಲ್ಲಿ ಸಂಸ್ಕೃತದಲ್ಲಿ ಪ್ರೌಢ ಶಾಸ್ತ್ರಗ್ರಂಥಗಳನ್ನು ಬರೆದವರಂತೂ ಅತಿವಿರಳ ಎಂದೇ ಹೇಳಬಹುದು. ಇಂತಹ ಅತಿವಿರಳರಲ್ಲಿ ಉಡುಪಿ ಸಂಸ್ಕೃತ ಕಾಲೇಜಿನ ಅಲಂಕಾರಶಾಸ್ತ್ರ ಪ್ರಾಧ್ಯಾಪಕ ಡಾ.ಎನ್. ಲಕ್ಷ್ಮೀನಾರಾಯಣ ಭಟ್ಟರೂ ಒಬ್ಬರು.
ಶಿಷ್ಯವಲಯದಲ್ಲಿ ಎನ್.ಎಲ್.ಬಿ. ಎಂದೇ ಪ್ರಸಿದ್ಧರಾಗಿರುವ ಭಟ್ಟರು ಅಲಂಕಾರಶಾಸ್ತ್ರದಲ್ಲಿ ವಿಶೇಷ ಪಾಂಡಿತ್ಯ ಪಡೆದಿದ್ದು, 'ಸಾಹಿತ್ಯವಲ್ಲರೀ' ಎಂಬ ಪ್ರೌಢಕೃತಿಯನ್ನು ಬರೆದು ಪ್ರಕಾಶಿದ್ದಾರೆ. ಇದರಲ್ಲಿ ಆನಂದವರ್ಧನ, ಮಮ್ಮಟ, ಅಪ್ಪಯದೀಕ್ಷಿತ, ಜಗನ್ನಾಥ ಮೊದಲಾದ ಆಲಂಕಾರಿಕರ ಮತಗಳನ್ನು ಕೂಲಂಕಷವಾಗಿ ವಿಮರ್ಶಿಸಿ ತಮ್ಮ ಮತವೇನು ಎಂಬುದನ್ನು ನಿರೂಪಿಸುವ ಮೂಲಕ ಶಾಸ್ತ್ರದ ವಿಷಯದಲ್ಲಿ ತನ್ನ ಕ್ರಿಯಾಶೀಲತೆಯಿಂದ ಆಧುನಿಕ ಆಲಂಕಾರಿಕರಿಗೆ ಮಾರ್ಗದರ್ಶಿಯಾಗಿದ್ದಾರೆ. ಸಾಹಿತ್ಯವಲ್ಲರೀ ಕೃತಿಗೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ 2012ರಲ್ಲಿ ಪ್ರೊ. ಎಂ. ಹಿರಿಯಣ್ಣ ಗ್ರಂಥಪುರಸ್ಕಾರವನ್ನಿತ್ತು ಗೌರವಿಸಿದೆ.
ಶಿಕ್ಷಣ
1961ರಲ್ಲಿ ಕುಂದಾಪುರ ತಾಲೂಕಿನ ನರಸೀಪುರ ಎಂಬ ಊರಿನಲ್ಲಿ ಸತ್ಯಭಾಮಾ ಮತ್ತು ವೆಂಕಟಸುಬ್ಬ ಭಟ್ಟರ ಪುತ್ರರಾಗಿ ಜನಿಸಿದ ಭಟ್ಟರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಊರಿನಲ್ಲಿಯೇ ಮುಗಿಸಿದರು. ಬಳಿಕ 1975ರಲ್ಲಿ ಉಡುಪಿಗೆ ಬಂದು ಎಸ್.ಎಮ್.ಎಸ್.ಪಿ. ಸಂಸ್ಕೃತ ಕಾಲೇಜಿನಲ್ಲಿ ಕಾವ್ಯ, ಸಾಹಿತ್ಯ ತರಗತಿಗಳಲ್ಲಿ ಉತ್ತೀರ್ಣರಾಗಿ ಅಲಂಕಾರ ವಿದ್ವತ್ ಪದವಿ ಪಡೆದರು. 1982ರಿಂದ ಅದೇ ಶಾಲೆಯಲ್ಲಿ ಅಲಂಕಾರಶಾಸ್ತ್ರ ಬೋಧಿಸುತ್ತಾ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.
ಲಕ್ಷ್ಮೀನರಸಿಂಹಭಟ್ಟರ ಮಾರ್ಗದರ್ಶನದಲ್ಲಿ 'ಅಪ್ಪಯದೀಕ್ಷಿತಸ್ಯ ಸಾಹಿತ್ಯಶಾಸ್ತ್ರೀಯ ಕೃತೀನಾಂ ವಿಮರ್ಶಾತ್ಮಕಂ ಅಧ್ಯಯನಮ್' ಎಂಬ ವಿಷಯದಲ್ಲಿ ಇವರು ನಡೆಸಿದ ಸಂಶೋಧನೆಗೆ 2000ನೆಯ ಇಸವಿಯಲ್ಲಿ ತಿರುಪತಿಯ ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠದಿಂದ ವಿದ್ಯಾವಾರಿಧಿ (ಪಿಎಚ್.ಡಿ) ಪದವಿ ಪ್ರಾಪ್ತವಾಗಿದೆ.
ನವದೆಹಲಿಯ ರಾಷ್ಟ್ರಿಯ ಸಂಸ್ಕೃತ ಸಂಸ್ಥಾನದ ದೂರಶಿಕ್ಷಣಯೋಜನೆಗಾಗಿ ಅಲಂಕಾರಶಾಸ್ತ್ರದ ಸ್ನಾತಕೋತ್ತರ ಪದವಿಗೆ ಸಂಬಂಧಿಸಿದ ಪಾಠ್ಯಪುಸ್ತಕಗಳನ್ನು ಬರೆದುಕೊಟ್ಟಿದ್ದಾರೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಅಂಗವಾದ ಸಂಸ್ಕೃತ ನಿರ್ದೇಶನಾಲಯವು ನವೀಕರಿಸುತ್ತಿರುವ ಸಾಹಿತ್ಯ ತರಗತಿಯ ಪಾಠ್ಯಪುಸ್ತಕಗಳ ರಚನೆಯಲ್ಲಿಯೂ ಮುಖ್ಯಪಾತ್ರ ವಹಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದ ಪದವಿಯ ಸಂಸ್ಕೃತ ಪಾಠ್ಯದಲ್ಲಿ ಇವರು ಬರೆದ 'ಯೋಗಸೂತ್ರವ್' ಎಂಬ ಪ್ರಬಂಧ ಹಾಗೂ ಕರ್ನಾಟಕ ಸಂಸ್ಕೃತ ವಿ.ವಿ. ಯ ವಿದ್ವತ್ತಿನ ಪಾಠ್ಯದಲ್ಲಿ 'ಮರ್ಕಟೋಪದೇಶ' ಎಂಬ ಕಾವ್ಯವಿರುವುದನ್ನೂ ಇಲ್ಲಿ ನೆನೆಯಬಹುದು.
ಭಟ್ಟರಿಗೆ ಅಲಂಕಾರಶಾಸ್ತ್ರದಂತೆ ವ್ಯಾಕರಣಶಾಸ್ತ್ರವೂ ಕರತಲಾಮಲಕ. ಸ್ವರ್ಣವಲ್ಲಿ, ಧಾರವಾಡ, ತಿರುಪತಿ, ಸತಾರಾ, ಪುಣೆ, ಕೇರಳ ಮೊದಲಾದ ಕಡೆಗಳಲ್ಲಿ ನಡೆದ ಅಲಂಕಾರ ಹಾಗೂ ವ್ಯಾಕರಣಶಾಸ್ತ್ರಗಳ ವಿದ್ವದ್ಗೋಷ್ಠಿಗಯಲ್ಲಿ ಭಾಗವಹಿಸಿದ ಇವರ ಪಾಂಡಿತ್ಯವನ್ನು ಪಂಡಿತರೆಲ್ಲರೂ ಮನಃಪೂರ್ವಕವಾಗಿ ಮೆಚ್ಚಿದ್ದಾರೆ. ಇದಲ್ಲದೆ ಬೆಂಗಳೂರಿನಲ್ಲಿ ವಿಶ್ವ ಸಂಸ್ಕೃತ ಸಮ್ಮೇಳನ, ಶೃಂಗೇರಿ, ಬೆಳಗಾವಿ, ಕುಮಟಾ, ಕಟೀಲು ಮೊದಲಾದ ಕಡೆಗಳಲ್ಲಿ ಅನೇಕ ಉಪನ್ಯಾಸ ನೀಡಿದ್ದಾರೆ.
ಇವರೇ ಬರೆದು ಪ್ರಕಾಶಿಸಿದ 'ಕಾದಂಬಿನೀ' ಎಂಬ ಸಂಸ್ಕೃತ ಕಾವ್ಯಸಂಕಲನದಲ್ಲಿ 8 ಲಘುಕಾವ್ಯಗಳಿವೆ. 6 ಕಾವ್ಯಗಳಿಗೆ ಅನ್ವಯ, ಅನ್ವಯಾರ್ಥ, ವ್ಯಾಕರಣ ವಿಶೇಷ ಇತ್ಯಾದಿಗಳಿಂದ ಕೂಡಿದ 'ಮುಕ್ತಾವಲೀ' ಎಂಬ ವ್ಯಾಖ್ಯಾನವನ್ನು ಹಾಗೂ 2 ಕಾವ್ಯಗಳಿಗೆ ಮಲ್ಲಿನಾಥನ ಶೈಲಿಯಲ್ಲಿ ಸೌರಭಮ್ ಎಂಬ ವ್ಯಾಖ್ಯಾನವನ್ನು ಬರೆದಿದ್ದಾರೆ.
ಇಷ್ಟಲ್ಲದೆ ಗೋಭಾಷಿತಮ್, ಕಾಶೀಯಾತ್ರಾ, ಧೂರ್ತತಂತ್ರಮ್, ಉಪದೇಶವಿಕ್ರಯ ಮೊದಲಾದ ಸಣ್ಣಕತೆಗಳನ್ನೂ ಸಂಸ್ಕೃತದಲ್ಲಿ ಬರೆದಿದ್ದಾರೆ. ಅಭೀಷ್ಟಯಾಚನಮ್, ನಂದನೈಪುಣಮ್, ಕರ್ಮೋಪದೇಶಃ, ತರುಭಾಷಿತಮ್ ಮೊದಲಾದ ಗೇಯಪದ್ಯಗಳನ್ನೂ ರಚಿಸಿದ್ದಾರೆ.
ಕಾವ್ಯಶಾಸ್ತ್ರಯೋ- ವೈಲಕ್ಷ್ಯಣ್ಯಮ್ ಎಂಬ ವಿಷಯ ಕುರಿತು ಇವರು ಮಾಡಿದ ಉಪನ್ಯಾಸವನ್ನು ಸಂಸ್ಕೃತ ಭಾರತಿಯವರು ವೀಡಿಯೋ ಸಿಡಿ ರೂಪದಲ್ಲಿ ಹೊರತಂದಿದ್ದಾರೆ.
= ಮಹೇಶ ಭಟ್ಟ ಆರ್., ಹಾರ್ಯಾಡಿ