ಅದು ಮಕ್ಕಳು ಸೃಷ್ಟಿಸಿದ ಚಿತ್ರಲೋಕ. ಜಲವರ್ಣ, ಪೇಸ್ಟಲ್ ಹಾಗೂ ಗ್ವಾಷ್ ಮಾಧ್ಯಮಗಳೆಲ್ಲ ಅಲ್ಲಿವೆ. ವಿಶುಯಲ್ ಆರ್ಟ್ ವರ್ಕ್‌ಶಾಪ್ ಮತ್ತು ಅನನ್ಯ ದೃಶ್ಯ ಸಹಯೋಗದಲ್ಲಿ ಜು.6ರ ಸಂಜೆ 4.30ಕ್ಕೆ ಈ ಸೃಜನಶೀಲ ವರ್ಣಚಿತ್ರಗಳ ಹಾಗೂ ಕಲ್ಪಿತ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ. ಖ್ಯಾತ ಕಲಾವಿದ ಎಸ್.ಜಿ. ವಾಸುದೇವ್ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪ್ರೊ. ಎಂ.ಎಚ್. ಕೃಷ್ಟಯ್ಯ ಪಾಲ್ಗೊಳ್ಳುವರು. 6ರಿಂದ 9ರವರೆಗೆ ಬೆಂಗಳೂರಿನ ವೆಂಕಟಪ್ಪ ಚಿತ್ರಶಾಲೆಯಲ್ಲಿ ಪ್ರದರ್ಶನ ನಡೆಯಲಿದೆ.
ಮೇನಲ್ಲಿ ನಡೆದ 15ನೇ ವಾರ್ಷಿಕ ಸೃಜನಶೀಲ ಚಿತ್ರಕಲೆ ಹಾಗೂ ಛಾಯಾಚಿತ್ರ ಕಾರ್ಯಾಗಾರದಲ್ಲಿ 6ರಿಂದ 16 ವರ್ಷದ ಶಿಬಿರಾರ್ಥಿಗಳು ರಚಿಸಿರುವ ಕೃತಿಗಳು ಇವು. ಮಕ್ಕಳ ಈ ಕೃತಿಗಳಲ್ಲಿ ಸ್ವಂತ ಅಭಿವ್ಯಕ್ತಿಗೆ ಅವಕಾಶ ನೀಡಲಾಗಿದೆ. ಶಿಬಿರದ ನಿರ್ದೇಶನವನ್ನು ಕಲಾವಿದ ಆರ್. ರಾಜಾ ನಿರ್ವಹಿಸಿದರು. ಕಲಾವಿದರಾದ ಆರ್. ವೈದೇಹಿ, ಸಿ.ಪಿ. ಚಂದ್ರಮೋಹನ್ ಮತ್ತು ಭರತ್‌ರ ಮಾರ್ಗದರ್ಶನವನ್ನು ಮರೆಯುವಂತಿಲ್ಲ.
ವರ್ಣಚಿತ್ರಗಳಲ್ಲದೆ ಮನೆಯಲ್ಲೇ ಸಿಗುವ ಬೆಂಕಿಕಡ್ಡಿ, ಹೊಗೆಬತ್ತಿ, ರಟ್ಟು, ಬಟ್ಟೆಗಳಂಥ ವಸ್ತುಗಳನ್ನು ಬಳಸಿ ಛಾಯಾಚಿತ್ರದೊಳಗೆ ವಿಶಿಷ್ಟ ಲೋಕಗಳನ್ನೇ ಸೃಷ್ಟಿಸಿದ್ದಾರೆ. ಎಲ್ಲ ಮಕ್ಕಳ ಚಿತ್ರಗಳು, ಛಾಯಾಚಿತ್ರಗಳು ಸೃಜನಶೀಲತೆಯ ಗುಣಮಟ್ಟದಲ್ಲಿ ಕಡಿಮೆ ಇಲ್ಲವೆಂದು ಸಾರುತ್ತವೆ. ಪ್ರದರ್ಶನವು ಬೆಳಗ್ಗೆ 11ರಿಂದ ಸಂಜೆ 7ರ ವರೆಗೆ ಸಾರ್ವಜನಿಕರಿಗಾಗಿ ತೆರೆದಿರುತ್ತದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ, ಮೊ. 9480451524.