ಪುಟ್ಟ ಕಣ್ಣು, ಪುಟಾಣಿ ಬಾಲ
ಚಿಂಟು ಆನೆಮರಿ
ಮುದ್ದು ಹೆಜ್ಜೆ ಮುದ್ದು ಆಟ
ಪಂಟರ್ ತುಂಟ ಮರಿ
ಕಾವಳ ಕವಿದ ಕಾಡಲಿ
ಮಬ್ಬು ಬೆಳಕಲ್ಲಿ
ಗಿಡಗಂಟೆಗಳ ದಾರೀಲಿ
ಅಮ್ಮನ ನೆರಳಲ್ಲಿ
ಸಕ್ರೆಬೈಲಿನ ಆನೆ ಶಿಬಿರವೇ
ಚಿಂಟು ಶಾಲೆಯು
ತುಂಗಾ ಸ್ನಾನದ ನಂತರವೇ
ಗುರುವಿನ ಪಾಠವೂ
ಮೊದಲನೆ ದಿನ
ಶಾಲೆಗೆ ಬರಲು
ಎಷ್ಟೊಂದ್ ರಂಪಾಟ
ಎಂತಹ ಪರದಾಟ
ಈಗೀಗಂತೂ ಭಾರೀ ಇಷ್ಟ
ಹೇಳಿಕೊಟ್ಟಿದ್ದೆಲ್ಲ ಕಲಿಯೋಕೆ
ಬೇಕೇಬೇಕು ಬೆಲ್ಲ, ತೆಂಗು
ಕಬ್ಬು ಮೆದ್ದು ಕುಣಿಯೋಕೆ
ಗೆಳೆಯರೊಂದಿಗೆ ಆಡಿದ್ದೇ ಆಟ
ಶಿಬಿರದ ಬಯಲಲ್ಲಿ
ಮರಳಲಿ ಓಟ, ಉರುಳಾಟ
ತುಂಗೆಯ ತಡದಲ್ಲಿ
ಸಂಜೆ ತಿರುಗಿ ಕಾಡಿನ ಮನೆಗೆ
ಮುದುಡಿ ಅಮ್ಮನ ಮಡಿಲಲ್ಲಿ
ಮತ್ತೆ ನಾಳೆ ಹೋಗುವೆ ಶಾಲೆಗೆ
ಎಂದು ಗುನುಗುತ ಕನಸಲ್ಲಿ
- ವಿಜಯಶ್ರೀ ಹಾಲಾಡಿ