ಅವರು ಫ್ರೆಷರ್ಸ್. ಕಾಲೇಜಿನ ಪದವಿಯನ್ನು ಈಗ ತಾನೆ ಮುಗಿಸಿ ಬಂದ ಹೊಸಬರು. ಕಣ್ಣೊಳಗೆ ಕೆಲಸದ ಕನಸುಗಳನ್ನೇ ತುಂಬಿಕೊಂಡು ಎಲ್ಲ ಹೋರಾಟಕ್ಕೂ ಸಜ್ಜಾದವರು. 'ಕಚೇರಿ' ಎಂಬ ಯುದ್ಧಭೂಮಿಗೆ ಜಿಗಿಯಲೇಬೇಕು, ಜಿಗಿದು ಜಯಿಸಲೇಬೇಕು ಎಂಬ ಎಲ್ಲಿಲ್ಲದ ಹಠದ ತೋರಣವನ್ನು ಅಂತರಂಗದ ಬಾಗಿಲಿಗೆ ತೂಗಿಸಿಕೊಂಡವರು.
ಅವರಿಗೊಂದು ಕೆಲಸ ಬೇಕು. ಅದಕ್ಕೂ ಮುನ್ನ ಅವರು ಮೊದಲ ಸಂದರ್ಶನಕ್ಕೆ ಮುಖವೊಡ್ಡಬೇಕು. ಎದುರಿಗೆ ಕೂತ ಬಾಸು ಏನೇನು ಪ್ರಶ್ನೆ ಬಿಸಾಕುತ್ತಾನೋ ಎಂಬ ಭಯವನ್ನು ಮೆಟ್ಟಿ, ಮುಂದಡಿ ಇಡಬೇಕು.
ಹಾಗಾದರೆ, ಸಂದರ್ಶನಕ್ಕೆ ಹೋಗುವ ಮುನ್ನ, ಹೋದ ಮೇಲೆ ಹೇಗಿರಬೇಕು ಹಾಗೂ ಅಲ್ಲಿ ಸಂದರ್ಶನಕಾರರು ಯಾವ ಪ್ರಶ್ನೆಗಳನ್ನು ಕೇಳಬಹುದು ಎಂಬ ಕುರಿತು ಹೊಸಬರಿಗೊಂದು ಧೈರ್ಯದ ಕ್ಲಾಸ್ ಇಲ್ಲಿದೆ...
ನೀವು ಈ ಕೆಲಸ ಆರಿಸಿಕೊಳ್ಳಲು ಏನು ಕಾರಣ?
ಇದು ಸಂದರ್ಶನದ ವೇಳೆ ಸಾಮಾನ್ಯ ಪ್ರಶ್ನೆ. ಇದಕ್ಕೆ ನೀವು ನೀಡುವ ಉತ್ತರದ ಆಧಾರದ ಮೇಲೆ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕೋ, ಬೇಡವೋ ಎನ್ನುವುದನ್ನು ಬಹುತೇಕರು ನಿರ್ಧರಿಸುತ್ತಾರೆ. ಹಾಗಾಗಿ ಈ ಪ್ರಶ್ನೆಗೆ
ಸ್ಪಷ್ಟ ಉತ್ತರ ನೀಡಿ. ಕೆಲಸದ ಬಗ್ಗೆ ತುಂಬಾ ಸೀರಿಯಸ್ಸಾಗಿದ್ದೀರಿ ಎಂಬುದನ್ನು ಮನದಟ್ಟು ಮಾಡಿಕೊಡಿ.
ನಿಮ್ಮ ಬಲ ಮತ್ತು ಬಲಹೀನತೆ ಏನು?
ಈ ಪ್ರಶ್ನೆ ಬಂದಾಗ ನಿಮ್ಮ ಬಲಹೀನತೆಗಿಂತ ಶಕ್ತಿಯ ಬಗ್ಗೆ ಹೆಚ್ಚು ಮಾತನಾಡಿ. ನಾಯಕತ್ವ ಗುಣಗಳ ಬಗ್ಗೆ ವಿವರಿಸಿ.
ಹಾಗಂತ ಅತಿ ಆತ್ಮವಿಶ್ವಾಸ ಬೇಡ. ಕೆಲವು ವಿಚಾರಗಳ ಕುರಿತ ನಿಮ್ಮ ಬಲಹೀನತೆಯನ್ನು ಹೇಗೆ ಹೋಗಲಾಡಿಸಿಕೊಂಡಿದ್ದೀರಿ ಎಂದು ಹೇಳಿ.
ನಿಮ್ಮ ಬಗ್ಗೆ ಹೇಳಿ...
ಇದು ತುಂಬಾ ಸುಲಭದ ಪ್ರಶ್ನೆ. ನಿಮ್ಮ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ, ನಿಮ್ಮ ಹವ್ಯಾಸ- ಸಾಹಸದ ಬಗ್ಗೆ ವಿವರಿಸಿ. ನೀವು ಹೇಳುವ ಉತ್ತರ ಸಂದರ್ಶಕರಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಇಂಪ್ರೆಶನ್ ಮೂಡುವಂತಿರಬೇಕು.
ನಿಮ್ಮ ಸಾಧನೆಗಳೇನು?
ನಿಮ್ಮ ವೈಯಕ್ತಿಕ ಸಾಧನೆಗಳನ್ನು ಹೇಳಿಕೊಳ್ಳುವುದು ಆದಷ್ಟೂ ಕಡಿಮೆ ಮಾಡಿ. ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಸಾಧನೆಗಳಿದ್ದರೆ ಅದನ್ನು ಮೊದಲು ತಿಳಿಸಿ.
ಯಾಕಾಗಿ ನಿಮ್ಮನ್ನು ಆಯ್ಕೆ ಮಾಡಬೇಕು?
ಇದು ಸಾಮಾನ್ಯವಾಗಿ ಕೇಳುವ ಪ್ರಶ್ನೆ. ಈ ಕೆಲಸಕ್ಕೆ ಬೇಕಾದ ಎಲ್ಲ ಅರ್ಹತೆ ನಿಮ್ಮಲ್ಲಿದೆ ಎಂದು ಅವರಿಗೆ ಮನವರಿಕೆ ಮಾಡಿಸಿ.
ಎಷ್ಟು ಸಂಬಳ ನಿರೀಕ್ಷಿಸುತ್ತೀರಿ?
ನೀವು ಈಗಾಗಲೇ ಯಾವುದಾದರೂ ಕಂಪನಿಯಲ್ಲಿ ಕೆಲಸ ಮಾಡಿದ್ದರೆ ನಿಮ್ಮ ಸಂಬಳ ಎಷ್ಟಿತ್ತು ಎಂಬುದನ್ನು ತಿಳಿಸಿ. ಕೆಲಸದ ಬದಲಾವಣೆ ವೇಳೆ ಪ್ರತಿಯೊಬ್ಬರು ಹೆಚ್ಚಿನ ಸಂಬಳ ನಿರೀಕ್ಷಿಸುವುದು ಸಹಜ. ಹಾಗಂತ ಇಷ್ಟೇ ಸಂಬಳ ಬೇಕೆಂದು ಪಟ್ಟು ಹಿಡಿಯುವುದು ಸರಿಯಲ್ಲ.
ನಮ್ಮ ಸಂಸ್ಥೆಯ ಬಗ್ಗೆ ನಿಮಗೇನು ಗೊತ್ತು?
ನೀವು ಸಂದರ್ಶನಕ್ಕೆ ತೆರಳುವ ಮೊದಲೇ ಸಂಸ್ಥೆಯ ಪೂರ್ವಾಪರಗಳ ಬಗ್ಗೆ ಅರಿತುಕೊಂಡಿರಿ. ಕಂಪನಿಯ ಸಾಧನೆ, ಭವಿಷ್ಯದ ಯೋಜನೆ, ಕಾರ್ಯನಿರ್ವಹಣೆ ಕುರಿತು ಪೂರ್ಣ ಮಾಹಿತಿ ನಿಮ್ಮಲ್ಲಿರಲಿ.
ಸಕ್ಸಸ್ ಆಗಿಯೇ ಆಗ್ತೀರ...
ಸಂದರ್ಶನದಲ್ಲಿ ನೀವು ಕೊಡುವ ಉತ್ತರದಿಂದಷ್ಟೇ ನಿಮ್ಮ ಉದ್ಯೋಗ ನಿರ್ಧಾರವಾಗದು. ಇದರೊಂದಿಗೆ ನಿಮ್ಮ ಹಾವ-ಭಾವ, ಡ್ರೆಸ್ಕೋಡ್ ಕೂಡಾ ಮುಖ್ಯವಾಗುತ್ತದೆ. ಪ್ರಶ್ನೋತ್ತರದ ಜೊತೆ ಜೊತೆಗೆ ಇವುಗಳನ್ನೂ ಸಂದರ್ಶಕರು ಪರಿಶೀಲಿಸುತ್ತಿರುತ್ತಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಸಂದರ್ಶನ ನಡೆಯುವುದು ನಾಲ್ಕು ಗೋಡೆಯ ಕೋಣೆಯೊಳಗೆ ನಿಜ. ಆದರೆ, ನಿಜವಾಗಿಯೂ ನಿಜವಾದ ಸಂದರ್ಶನ ನೀವು ಆ ಕೋಣೆಗೆ ಹೋಗುವ ಮೊದಲೇ ಶುರುವಾಗುತ್ತದೆ. ನೀವು ಆ ಕೋಣೆ ಹೊರಗೆ ನಿಂತಿರುವಾಗಲೇ ಅವರು ನಿಮ್ಮನ್ನು ಗಮನಿಸಬಹುದು. ಹಾಗಾಗಿ ಯಾವುದೇ ಕಾರಣಕ್ಕೂ ನೀವು ನರ್ವಸ್ ಆಗಿದ್ದೀರಿ ಎಂಬುದನ್ನು ತೋರಿಸಿಕೊಡಬೇಡಿ. ಆತ್ಮವಿಶ್ವಾಸದಿಂದ ನಡೆದುಕೊಳ್ಳಿ. ಕೂರುವಾಗ ಬೆನ್ನು ನೇರವಾಗಿರಲಿ. ಮಾತಿನಲ್ಲಿ ಸ್ಥಿರತೆಯಿರಲಿ. ಹೇಳಿದ ಮಾತನ್ನು ಸಮರ್ಥಿಸಿಕೊಳ್ಳುವ ಸಾಮರ್ಥ್ಯವಿರಲಿ. ಪ್ರಶ್ನೆಗಳನ್ನು ಸರಿಯಾಗಿ ಆಲಿಸಿ. ಸಮಾಧಾನದಿಂದ ಉತ್ತರಿಸಿ. ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ, ಸೌಜನ್ಯದಿಂದ ವರ್ತಿಸಿ. ಇವಿಷ್ಟನ್ನು ಸರಿಯಾಗಿ ಪಾಲಿಸಿದ್ದೇ ಆದಲ್ಲಿ ನಿಮಗೆ ಕೆಲಸ ಸಿಗುವುದು ಕಷ್ಟವೇನಲ್ಲ. ಹಾಗಂತ ಇವೆಲ್ಲವೂ ಸಂದರ್ಶನಕ್ಕಷ್ಟೇ ಸೀಮಿತವಾಗದಿರಲಿ. ಜೀವನದುದ್ದಕ್ಕೂ ಈ ನಿಯಮ ಪಾಲಿಸಿದರೆ ಯಶಸ್ಸು ಕಷ್ಟವೇನಲ್ಲ.
- ದೀಪ್ತಿ ಉಜಿರೆ