ಯೂನಿವರ್ಸಿಟಿ ಆಫ್ ಚಿಕಾಗೋ ಸ್ಕೂಲ್ ಆಫ್ ಬ್ಯುಸಿನೆಸ್ನಲ್ಲಿ ಓದಬಯಸುವ ಭಾರತೀಯ ವಿದ್ಯಾರ್ಥಿಗಳಿಗೊಂದು ಸಿಹಿ ಸುದ್ದಿ. ಖ್ಯಾತ ಹೂಡಿಕೆದಾರ ರಾಮಕೃಷ್ಣನ್ರ 3 ದಶಲಕ್ಷ ಡಾಲರ್ ನೆರವಿನೊಂದಿಗೆ ಭಾರತೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಚಿಕಾಗೋ ಬೂತ್ನಲ್ಲಿ ದಾಖಲಾಗುವ ಮೂವರು ಭಾರತೀಯ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನದ ಲಾಭ ಪಡೆದುಕೊಳ್ಳಬಹುದು. ಅದರಂತೆ ವಿದ್ಯಾರ್ಥಿಗಳಿಗೆ ಎರಡು ವರ್ಷಕ್ಕೆ 50 ಸಾವಿರ ಡಾಲರ್ ಆರ್ಥಿಕ ನೆರವು ಸಿಗಲಿದೆ. ಚೆನ್ನೈ ಮೂಲದವರಾದ ಗುರು ರಾಮಕೃಷ್ಣನ್ ಅವರು ಇದೇ ವಿವಿಯ ಹಳೇ ವಿದ್ಯಾರ್ಥಿಯೂ ಹೌದು. ಸದ್ಯ ಮೇರು ಕ್ಯಾಪಿಟಲ್ನ ಮುಖ್ಯ ಹೂಡಿಕೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಪತ್ನಿ ಅನುಪಮಾ ಅವರೂ ಭಾರತದಲ್ಲಿ ಅನೇಕ ದಾನ, ದತ್ತಿಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಚಿಕಾಗೋ ಬೂತ್ನಲ್ಲಿ ಓದಲು ದೊಡ್ಡ ಸಂಖ್ಯೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆ. ಈ ರೀತಿಯ ವಿದ್ಯಾರ್ಥಿ ವೇತನಗಳಿಂದ ಅವರ ಕನಸು ನನಸು ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎನ್ನುತ್ತಾರೆ ಚಿಕಾಗೋ ಬೂತ್ನ ಮುಖ್ಯಸ್ಥ ಸುನಿಲ್ ಕುಮಾರ್.