ಇಂಥ ಘಟನೆಗಳು ನನ್ನ ಜೀವನದಲ್ಲಿ ಮಾತ್ರ ನಡೆಯುತ್ತಾ ಅಥವಾ ಎಲ್ಲರಿಗೂ ಈ ರೀತಿಯ ಅನುಭವ ಆಗುತ್ತಾ? 'ನಾನು ಒಂಟಿ ಗೂಬೆ. ಬೇರೆಯವರೆಲ್ಲ ಜೋಡಿ ಹಕ್ಕಿಗಳು..' ಎಂಬ ಭಾವನೆ ನನಗೊಬ್ಬನಿಗೇ ಮಾತ್ರ ಅನಿಸುತ್ತಾ... ವಯಸ್ಸಿನ ಪ್ರಭಾವವೋ ಅಥವಾ ನನಗೆ ಎದುರಾಗುವ ಜನರೇ ಹಾಗೆನೋ...? ಅದೂ ಗೊತ್ತಿಲ್ಲ. ಬೇರೆಯವರು ಇಂಥ ಘಟನೆಗಳ ಕುರಿತು ಬಹಿರಂಗವಾಗಿ ಹೇಳಿಕೊಳ್ಳದೇ ಇರಬಹುದು ಆದರೆ ನಾವು ಊರಿಗೆ ದೊಡ್ಡವರು ನೋಡಿ (ಬೇಕಿದ್ರೆ ಮೂರು ಬಿಟ್ಟವರು ಅಂತ ಓದಿಕೊಳ್ಳಬಹುದು). ಅದಕ್ಕೆ ಎಲ್ಲ ಇಲ್ಲಿ ಹೇಳಿಕೊಂಡಿದ್ದೇನೆ...
ದೃಶ್ಯ 1
ಈಗಂತೂ ಮೀಸೆ ಚಿಗುರದ ಹುಡುಗರೂ ಬೈಕ್, ಕಾರ್ ಓಡಿಸುತ್ತಾರೆ. ಹೀಗಿರುವಾಗ ಎರಡು ಕತ್ತೆಗೆ ಆಗುವ ವಯಸ್ಸು ಆದರೂ ನನಗೆ ಕಾರ್ ಓಡಿಸೋಕೆ ಗೊತ್ತಿರಲಿಲ್ಲ. ಡ್ರೈವಿಂಗ್ ಕಲಿತು ಲೈಸೆನ್ಸ್ ಮಾಡಿಕೊಂಡು ನನ್ನ ವಯಸ್ಸಿನ ಹುಡುಗರು ಮಾಡುವ ಕೆಲಸ ಮಾಡೋಣ ಅಂದುಕೊಂಡು ಮನೆಪಕ್ಕದ ಡ್ರೈವಿಂಗ್ ಕ್ಲಾಸ್ ಸೇರಿಕೊಂಡಿದ್ದೆ. ಡ್ರೈವಿಂಗ್ ಕಲಿಸುವಾತ ಬಲು ಬೇಗ ಆತ್ಮೀಯನಾದ. ಕ್ಲಾಸ್ ಮಧ್ಯ ಚಹಾ ಹೀರುವಾಗ ಪರಸ್ಪರ ಕಷ್ಟನಷ್ಟಗಳನ್ನು ಹಂಚಿಕೊಳ್ಳುತ್ತಿದ್ದೆವು. ಹೀಗೆ ಒಂದು ದಿನ ಐದನೇ ಗೇರಿನಲ್ಲಿ ಕಾರ್ ಓಡಿಸುವುದು ಕಲಿಯುತ್ತಿದ್ದಾಗ ಆತ ಕೇಳಿದ. 'ಸರ್... ನಿಮಗೆ ಗರ್ಲ್ಫ್ರೆಂಡ್ ಇದಾರಾ?'. ತಕ್ಷಣ ಐದನೇ ಗೇರಿನಲ್ಲಿ ಓಡಿಸುತ್ತಿದ್ದವನು ನಾಲ್ಕನೇ ಗೇರಿಗೆ ಬಂದೆ. 'ಇಲ್ಲಾ' ಅಂದೆ. ಅದಕ್ಕವನು 'ಏನ್ ಸಾರ್? ಚೆನ್ನಾಗಿ ಓದಿಕೊಂಡಿದೀರಾ, ಒಳ್ಳೆ ಕೆಲ್ಸ ಇದೆ... ಕೆಂಪು ಕೆಂಪು ಬೇರೆ ಇದೀರಾ, ನೋಡೋಕೆ ಚೈನೀಸ್ ಥರ ಇದ್ರೂ ಒಂದು ರೇಂಜಿಗೆ ಪರವಾಗಿಲ್ಲ. ನಿಮ್ಮ ಕಂಪನಿಯಲ್ಲಿ ಹುಡುಗಿಯರಿಗೇನು ಕೊರತೆನಾ? ನಿಮಗೆ ಗರ್ಲ್ಫ್ರೆಂಡ್ ಇಲ್ವಾ? ಸುಳ್ಳು ಹೇಳ್ಬೇಡಿ' ಎಂದ. ಆತನ ಮಾತಿನಿಂದ ಸ್ಟೇಜ್ ಹತ್ತಿಸಿ ಹಾರ ತುರಾಯಿ ಹಾಕಿಸಿಕೊಂಡು ಸಭಿಕರ ಕೈಯಲ್ಲಿ ಮೊಟ್ಟೆಯಿಂದ ಹೊಡೆಸಿಕೊಂಡಂತಾಗಿತ್ತು ನನ್ನ ಸ್ಥಿತಿ!
'ಇಲ್ಲಾ ಸರ್...' ಅಂತ ಮತ್ತೆ ಅಂದೆ. ನಾನು ಮತ್ತೆ ಮೂರನೇ ಗೇರಿಗೆ ಬಂದಿದ್ದೆ. 'ನಿಮಗೆ ಇದ್ದಾರಾ?' ಅಂತ ಮರು ಪ್ರಶ್ನೆ ಎಸೆದೆ. 'ಇದ್ಲು ಸಾರ್... ಆದರೆ, ಈಗ ಬೇರೆಯವರನ್ನು ಮದುವೆ ಆಗಿದ್ದಾಳೆ. ಈಗ ಪಕ್ಕದ ಬೀದೀಲೇ ಇದ್ದಾಳೆ' ಅಂದ. ನನಗೆ ಶಾಕ್. ಡ್ರೈವಿಂಗ್ ಕ್ಲಾಸ್ನ ಕೊನೆ ದಿನ ನನಗೆ ಆತ ಈ ವಿಚಾರದಲ್ಲಿ ಬೇಜಾರು ಮಾಡಿಕೊಳ್ಳಬೇಡಿ ಅಂತ ಸಮಾಧಾನ ಬೇರೆ ಮಾಡಿ ಕಳುಹಿಸಿದ್ದ! ಮುಫತ್ತಾಗಿ ಕೆಲವು ಟಿಪ್ಸ್ ಕೂಡ ಕೊಟ್ಟಿದ್ದ... ಚೆನ್ನಾಗಿ ಓದಿ, ಕೈ ತುಂಬಾ ಸಂಬಳ ತರುವ ಕೆಲಸದಲ್ಲಿದ್ದು ಪ್ರತಿ ಸಲವೂ ಓಟು ಹಾಕಿ ಒಳ್ಳೆಯ ಪ್ರಜೆಯ ರೀತಿ ಸಾರ್ಥಕ ಜೀವನ ನಡೆಸುತ್ತಿದ್ದೇನೆ ಎಂದು ಅಂದುಕೊಂಡಿದ್ದ ನಾನು ಆವತ್ತು ಮಾತ್ರ ಡ್ರೈವರ್ ಮುಂದೆ ನಿಷ್ಟ್ರಯೋಜಕನಂತೆ ಕಂಡೆ... ಯಾಕೆ?
ದೃಶ್ಯ 2
ಮೈಸೂರಿನಿಂದ ಹರಿಹರಕ್ಕೆ ಮನೆಗೆ ಬಸ್ಸಿನಲ್ಲಿ ಹೋಗುತ್ತಿದ್ದೆ. ಪಕ್ಕದಲ್ಲಿ ಹುಡುಗಿ ಕೂತಿದ್ದಳು. ಕನಿಷ್ಠ 2 ಗಂಟೆ ಫೋನ್ನಲ್ಲಿ ಮಾತನಾಡಿರಬಹುದು ಆಕೆ. ನಾನು ನನ್ನಷ್ಟಕ್ಕೆ ಯಾವುದೋ ಪುಸ್ತಕ ಓದುತ್ತಿದ್ದೆ. ಆದರೂ ಹಾಳಾದ ಕಿವಿಗೆ ಅವಳ ಮಾತು ಕೇಳಿಸುತ್ತಿತ್ತು. ಅವಳು ಆ ಎರಡು ಗಂಟೆಯಲ್ಲಿ ಹೇಳುತ್ತಿದ್ದುದು ಒಂದೇ ಮಾತು. 'ನೀನು ಊಟ ಮಾಡಿದ್ಯಾ? ನೀನು ಉಂಡರಷ್ಟೆ ನಾನು ಉಣ್ಣೋದು...' ಈ ಮಾತನ್ನು ಬಹುಶಃ ಆಕೆ ನೂರು ಸಲ ರಿಪೀಟ್ ಮಾಡಿರಬಹುದು. ಸಿಗ್ನಲ್ ಕಟ್ಟಾಯ್ತು ಅನಿಸುತ್ತೆ. ತುಸು ಹೊತ್ತಿನ ಬಳಿಕ ನನ್ನ ಜತೆಗೆ ಹರಟೆ ಶುರುವಿಟ್ಟುಕೊಂಡ್ಲು. ಓದು, ಮನೆ, ಕುಲಗೋತ್ರ ಪರಿಚಯ ಆಗುತ್ತಿದ್ದಂತೆ ತನ್ನ ಲವ್ಸ್ಟೋರಿ ಬಿಚ್ಚಿಟ್ಲು. ಎಲ್ಲ ಆದ್ಮೇಲೆ ಮತ್ತದೇ ಪ್ರಶ್ನೆ. 'ನಿಮಗ್ಯಾರೂ ಗರ್ಲ್ಫ್ರೆಂಡ್ ಇಲ್ವಾ?' ತಲೆ ಅಡ್ಡಡ್ಡ ಅಲ್ಲಾಡಿಸಿದೆ. ಆಗ ಅವಳು ಹೇಳಿದ್ದೇನು ಗೊತ್ತಾ? 'ಕೆಲ್ಸಕ್ಕೆ ಬಾರದ ಪುಸ್ತಕ ಓದುತ್ತಿರುವಾಗಲೇ ಅಂದುಕೊಂಡೆ'!
ನನಗೆ ನನ್ನ ಹವ್ಯಾಸಗಳ ಬಗ್ಗೆ ಒಂದು ರೀತಿ ಹೆಮ್ಮೆ ಇತ್ತು. ನಾನು ಏನೋ ದೊಡ್ಡ ಸಾಧನೆ ಮಾಡುತ್ತಿದ್ದೇನೆ ಎಂದು ಅಂದುಕೊಂಡಿದ್ದೆ. ಆದರೆ ಅವಳ ಮಾತು, ನಗು ಅದನ್ನೆಲ್ಲ ತಲೆಕೆಳಗು ಮಾಡಿತು.
ದೃಶ್ಯ 3
ಫೆ.14 ನಮಗೆ ಅಂದರೆ ನಮ್ಮಂಥ ಸಿಂಗಲ್ ಹುಡುಗರಿಗೆ ಡ್ರೈ ಡೇ. ಜೋಡಿಗಳು ಹಬ್ಬವನ್ನು ಆಚರಿಸುವುದು ನೋಡಿ ಹೊಟ್ಟೆ ಉರಿದುಕೊಳ್ಳುತ್ತಾ, ನಮ್ಮ ಸಂಸ್ಕೃತಿ ಹಾಳು ಮಾಡೋಕೆ ಹುಟ್ಟಿದ್ದಾರೆ ಅಂತ ಬಯ್ಯುತ್ತಾ ಕೂರುವುದೇ ನಮ್ಮ ಕೆಲಸ. ಹೀಗೆ ಒಂದು ವ್ಯಾಲೆಂಟೈನ್ಸ್ ದಿನ ಸಾಂಯಕಾಲ ಗೋಲಗಪ್ಪಾ ತಿನ್ನಲುಹೋಗಿದ್ದೆ. ಅಂಗಡಿಯಾತ ಪರಿಚಿತ. ಗೋಲಗೊಪ್ಪಾ ಕೊಡುತ್ತಾ, 'ಏನ್ ಸಾರ್... ಇವತ್ತೇನೂ ಸ್ಪೆಷಲ್ ಇಲ್ವಾ?' ಅಂತಂದ. 'ಏನಿಲ್ಲ ಮಾಮೂಲು' ಎಂದವನೇ ಸುಮ್ಮನೆ ಆತನನ್ನು ಕಿಚಾಯಿಸೋಣ ಅಂತ 'ನಿಂದೇನಪ್ಪಾ ವಿಶೇಷ?' ಅಂದೆ. ಆವತ್ತು ಅವನು ಪ್ರೇಯಸಿಯನ್ನು ಊಟಕ್ಕೆ ಕರೆದುಕೊಂಡು ಹೋಗೋ ಪ್ಲಾನ್ ಹಾಕಿದ್ದ! ಇಷ್ಟೊಳ್ಳೆ ಕೆಲಸದಲ್ಲಿದ್ರೂ ನಾನಿನ್ನೂ ಒಂಟಿಯಾಗಿ ಓಡಾಡುವಾಗ ಗೋಲಗೊಪ್ಪಾ ಅಂಗಡಿ ಇಟ್ಕೊಂಡ್ರೂ ಲವ್ ಗಿವ್ ಅಂತ ಜಾಲಿಯಾಗಿದ್ದಾನಲ್ಲಾ ಅಂತ ಹೊಟ್ಟೆಯುರಿದು ಬಿಟ್ತು. ಯಾಕೋ ಮತ್ತದೇ ನೋವು ಕಾಡಲು ಶುರುವಾಯ್ತು. ಎಲ್ಲರೂ ಜೋಡಿಗಳು ನಾನೊಬ್ಬನೇ ಒಂಟಿ...!
ನನ್ನ ಜೀವನ ಶೈಲಿ, ನನ್ನ ಹವ್ಯಾಸಗಳು, ನನ್ನ ಒಂಟಿತನ ಬೇರೆಯವರಿಗೆ ನಗೆ ತರಿಸಬಹುದು. ಮಟನ್ ತಿನ್ನುವವ ಅನ್ನ ಸಾಂಬಾರು ತಿನ್ನುವವನನ್ನು ನೋಡಿ ಅದರಲ್ಲೇನಿದೆ ಎಂದು ನಗಬಹುದು. ಅದೆಲ್ಲ ಅವರವರ ಭಾವಕ್ಕೆ ಅವರವರ ಭಕುತಿಗೆ ನಿಜ. ಆದರೂ ಕೆಲವೊಮ್ಮೆ ನನ್ನ ಬಾಳು ಖಾಲಿ ಖಾಲಿ ಅನಿಸುವುದುಂತೂ ನಿಜ. ಅಷ್ಟಕ್ಕೂ ಗರ್ಲ್ಫ್ರೆಂಡ್ ಇದ್ದರೆ ಮಾತ್ರ ಯಶಸ್ವಿ ವ್ಯಕ್ತಿನಾ? 25 ವರ್ಷ ಆದ್ರೂ ಒಂದು ಗರ್ಲ್ಫ್ರೆಂಡ್ ಮಾಡಿಕೊಳ್ಳಲಾಗದ ನಾನು ವೇಸ್ಟ್ ಫೆಲೋನಾ..? ಯೋಚನೆ ಮಾಡಿದಾಗಲೆಲ್ಲ ತಲೆ ಗೊಂದಲಕ್ಕೆ ಬೀಳುತ್ತೇನೆ...
-ಆರ್. ಶ್ರವಣ್ ನಾರಾಯಣ್ ಐತಾಳ್