ಪ್ರಯೋಗ ಕ್ಲಾಸ್
ಮಗು ನಿನಗೆ ದೊಡ್ಡವರನ್ನೂ ಬೆರಗಾಗಿಸಬೇಕು ಎಂಬ ಆಸೆ ಅಲ್ವಾ? ಹಾಗಿದ್ರೆ ಒಂದು ಮ್ಯಾಜಿಕ್ ಹೇಳಿಕೊಡ್ತೀನಿ. ಮಾಡ್ತೀಯಾ? ಇಲ್ಲಿ ಓದಿದ್ದು ಅಂತ ಹೇಳ್ಬೇಡ. ನಾನೇ ಮಾಡಿದ್ದು ಅಂತ ಹೇಳು ಆಯ್ತಾ!
ಒಂದು ಬಿಳಿಯ ಹಾಳೆ, ಗಾಜಿನ ಲೋಟ, ಒಂದು ಪಾತ್ರೆಯಲ್ಲಿ ನೀರು, ಬಣ್ಣದ ಪೆನ್ನು ತೆಗೆದುಕೋ. ಹಾಳೆಯನ್ನು ಲೋಟದಷ್ಟೇ ಎತ್ತರವಿರುವಂತೆ ಕತ್ತರಿಸಿಕೋ. ಹಾಳೆಯಲ್ಲಿ ಎಡಕ್ಕೆ ತೋರಿಸುವ ಎರಡು ಬಾಣದ ಗುರುತನ್ನು ಒಂದರ ಕೆಳಗೆ ಒಂದರಂತೆ ಬರೆದಿಡು. ಹಾಳೆಯನ್ನು ಲಂಬವಾಗಿರುವಂತೆ ಗೋಡೆ ಮೇಲೆ ಒರಗಿಸಿಡು. ಖಾಲಿ ಗಾಜಿನ ಲೋಟವನ್ನು ಹಾಳೆಯ ಮುಂದಿಡು. ಈಗ ನಿನ್ನ ಅಪ್ಪ ಅಮ್ಮನನ್ನು ಬರಲು ಹೇಳು. ಅವರಿಗೆ ಲೋಟದ ಮುಖಾಂತರ ಬಾಣದ ಗುರುತನ್ನು ನೋಡುವಂತೆ ಹೇಳ್ಬೇಕು. ಎರಡೂ ಬಾಣಗಳು ಎಡಬದಿಯನ್ನೇ ಸೂಚಿಸುತ್ತಿರುತ್ತವೆ. 'ಹಾಳೆಯ ಮೇಲೆ ಬಲಕ್ಕೆ ಸೂಚಿಸಿರುವ ಎರಡು ಚಿಹ್ನೆಗಳಿವೆ. ಅದರಲ್ಲಿ ಕೆಳಗಿನ ಚಿಹ್ನೆ ಬಲಕ್ಕೆ ತಿರುಗುವಂತೆ ಮಾಡುತ್ತೇನೆ!' ಎಂದು ಸವಾಲು ಹಾಕು. ಗಾಜಿನ ಲೋಟದ ಅರ್ಧ ಭಾಗ ತುಂಬುವಷ್ಟು ನೀರನ್ನು ಸುರಿ. ಮ್ಯಾಜಿಕ್! ಕೆಳಗಿನ ಚಿಹ್ನೆ ಬಲಕ್ಕೆ ತಿರುಗಿರುತ್ತದೆ. ಈಗ ಪೂರ್ತಿ ನೀರು ಸುರಿ. ಎರಡೂ ಚಿಹ್ನೆಗಳು ಬಲಕ್ಕೆ ತಿರುಗಿರುತ್ತವೆ.
ಅಲ್ಲಿ ಏನಾಗುತ್ತದೆ?
ಇಲ್ಲಿ ವಕ್ರೀಭವನ ಪ್ರಕ್ರಿಯೆ ನಡೆದಿರುತ್ತದೆ. ಗಾಜಿನ ಲೋಟ ಭೂತಕನ್ನಡಿಯಂತೆ ಕೆಲಸ ಮಾಡಿರುತ್ತದೆ. ಮೆಗ್ನಿಫೈಯಿಂಗ್ ಗ್ಲಾಸ್‌ನ ಒಳಗೆ ಪ್ರವೇಶಿಸುವ ಬೆಳಕು ಕೇಂದ್ರ ಬಿಂದುವಿನತ್ತ ಹರಿಯುತ್ತದೆ. ಕೇಂದ್ರಬಿಂದುವಿನ ಹಿಂದೆ ವ್ಯತಿರಿಕ್ತವಾಗಿ ಕಾಣಿಸುತ್ತದೆ. ಹಾಗಾಗಿ ಎಡಕ್ಕೆ ತಿರುಗಿದ್ದ ಚಿಹ್ನೆ ಬಲ ಮುಖವಾಗಿ ಬದಲಾಗುತ್ತದೆ.