ಪಿಟಿಐ, ನವದೆಹಲಿ, ಜು.3
'ಪಂಜರದ ಗಿಳಿ'ಯಂತಿರುವ ಸಿಬಿಐಗೆ ಸ್ವಾಯತ್ತೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ವಿವಾದಕ್ಕೆ ಕಾರಣವಾಗುತ್ತಿದ್ದ ಸಿಬಿಐ ನಿರ್ದೇಶಕರ ನೇಮಕಾತಿಯನ್ನು ಹೊಸ ವ್ಯವಸ್ಥೆಯಡಿ ಪಾರದರ್ಶಕವಾಗಿ ನಡೆಸುವ ಹಾಗೂ ಸಂಸ್ಥೆಯ ತನಿಖೆಯಲ್ಲಿ ಹಸ್ತಕ್ಷೇಪಕ್ಕೆ ಅವಕಾಶ ಸಿಗದ ವಾತಾವರಣ ಸೃಷ್ಟಿಸಲು ಮುಂದಾಗಿದೆ. ಈ ವಿಚಾರವನ್ನು ಸುಪ್ರೀಂಕೋರ್ಟ್ಗೆ ಬುಧವಾರ ಸಲ್ಲಿಸಿದ 41 ಪುಟಗಳ ಅಪಿಢವಿಟ್ನಲ್ಲಿ ಸರ್ಕಾರ ಸ್ಪಷ್ಟಪಡಿಸಿದೆ. ಅಫಿಡವಿಟ್ ಕುರಿತ ಅಂತಿಮ ವಿಚಾರಣೆ ಜು.10ರಂದು ನಡೆಯಲಿದೆ.
ನಿರ್ದೇಶಕರ ಆಯ್ಕೆ ಹೇಗೆ?
ಇನ್ನು ಮುಂದೆ ನಿರ್ದೇಶಕರನ್ನು ಮೂರು ಸದಸ್ಯರ ಸಮಿತಿ ನೇಮಿಸಲಿದೆ. ಸಮಿತಿಯಲ್ಲಿ ಪ್ರಧಾನಿ, ಲೋಕಸಭೆ ಪ್ರತಿಪಕ್ಷ ನಾಯಕರು ಮತ್ತು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಇರಲಿದ್ದಾರೆ. ಪ್ರಧಾನಿ ಸಮಿತಿಯ ಅಧ್ಯಕ್ಷರಾಗಿರಲಿದ್ದಾರೆ. ಸಮಿತಿ ಶಿಫಾರಸಿನಂತೆ ರಾಷ್ಟ್ರಪತಿ ನಿರ್ದೇಶಕರನ್ನು ನೇಮಿಸಲಿದ್ದಾರೆ. ಐಪಿಎಸ್ ಅಧಿಕಾರಿಯೇ ಸಿಬಿಐ ನಿರ್ದೇಶಕರಾಗಲಿದ್ದಾರೆ. ಇವರ ಅಧಿಕಾರಾವಧಿ ಕನಿಷ್ಠ 2 ವರ್ಷ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಸಿಬಿಐ ತನಿಖೆ ನಡೆಸುವ ಎಲ್ಲಾ ಪ್ರಕರಣಗಳ ಮೇಲ್ವಿಚಾರಣೆಯನ್ನು ಸಿವಿಸಿ ನಡೆಸಲಿದೆ. ಆದರೆ, ಉಳಿದ ಪ್ರಕರಣಗಳಿಗೆ ಸಂಬಂಧಿಸಿ ಮೇಲ್ವಿಚಾರಣೆ ಅಧಿಕಾರ ಕೇಂದ್ರಕ್ಕಿರಲಿದೆ. ಇದಲ್ಲದೆ, ಅಧಿಕಾರಿಗಳ ವಿಚಾರಣೆಗೆ ಸಂಬಂಧಿಸಿ ಕೇಂದ್ರವು ಮೂರು ತಿಂಗಳೊಳಗೆ ಅನುಮತಿ ನೀಡಬೇಕು. ಈ ಅವಧಿ ಬಳಿಕ ಸಿಬಿಐ ಯಾವುದೇ ಅನುಮತಿ ಇಲ್ಲದೆ ಅಧಿಕಾರಿಗಳ ವಿಚಾರಣೆ ನಡೆಸುವ ಅಧಿಕಾರ ಪಡೆಯಲಿದೆ.
ನಿರ್ದೇಶರ ವಜಾ ಹೇಗೆ?
ಸಿಬಿಐ ನಿರ್ದೇಶಕರ ವಜಾ ಅಧಿಕಾರ ರಾಷ್ಟ್ರಪತಿ ಅವರಿಗಷ್ಟೇ ಇರಲಿದೆ. ನಿರ್ದೇಶಕರ ವಿರುದ್ಧ ದೂರುಗಳು ಕೇಳಿ ಬಂದರೆ ಕೇಂದ್ರ ವಿಚಕ್ಷಣಾ ಆಯೋಗ(ಸಿವಿಸಿ)ದ ವರದಿಯಂತೆ ವಜಾ ಮಾಡಬಹುದಾಗಿದೆ.
ನಿಬಂಧನೆಯೂ ಇದೆ...
ಸ್ವಾಯತ್ತೆ ಸಿಕ್ಕಿದೆ ಅಂದ ಮಾತ್ರಕ್ಕೆ ಸಿಬಿಐ ಅಧಿಕಾರಿಗಳು ಬೇಕಾಬಿಟ್ಟಿ ಕಾರ್ಯನಿರ್ವಹಿಸುವಂತಿಲ್ಲ. ಅಫಿಡವಿಟ್ ಪ್ರಕಾರ ಕೇಂದ್ರವು ಈಗಿರುವ ಕಾನೂನಿಗೆ ಎರಡು ಹೊಸ ನಿಬಂಧನೆಗಳನ್ನು ಸೇರ್ಪಡೆ ಮಾಡಿದೆ. ಇದು 'ಉತ್ತರದಾಯಿತ್ವ ಆಯೋಗ'ವನ್ನು ರಚನೆ ಮಾಡಲು ಅನುವು ಮಾಡಿಕೊಡಲಿದೆ. ಈ ಆಯೋಗ ಅಧಿಕಾರಿಗಳ ಮೇಲಿನ ಆರೋಪಗಳು, ದುರ್ನಡತೆ, ಅನರ್ಹತೆ ಕುರಿತು ವಿಚಾರಣೆ ನಡೆಸಲಿದೆ.
ಈ ಸಮಿತಿ ಮೂರು ಪೂರ್ಣಾವಧಿ ಸದಸ್ಯರನ್ನು ಹೊಂದಿರಲಿದೆ. ಇವರನ್ನು ರಾಷ್ಟ್ರಪತಿ ಅವರೇ ಆಯ್ಕೆ ಮಾಡಲಿದ್ದಾರೆ. ಸುಪ್ರೀಂ ಅಥವಾ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳು ಇದರ ಸದಸ್ಯರು. ಈ ನ್ಯಾಯಮೂರ್ತಿಗಳಲ್ಲಿ ಹಿರಿಯರು ಅಧ್ಯಕ್ಷರಾಗಲಿದ್ದಾರೆ. ಕೇಂದ್ರೀಯ ವಿಚಕ್ಷಣಾ ಆಯೋಗದ ಅಧ್ಯಕ್ಷರು ಪದನಿಮಿತ್ತ ಸದ್ಯಸರಾಗಿರಲಿದ್ದಾರೆ. ಪ್ರಧಾನಿ ಅಧ್ಯಕ್ಷತೆಯ ಸಮಿತಿಯ ಅನುಮತಿಯಿಲ್ಲದೆ ಸಿಬಿಐ ನಿರ್ದೇಶಕರನ್ನು ವರ್ಗಾವಣೆ ಮಾಡುವಂತಿಲ್ಲ.