ಪಿಟಿಐ, ನವದೆಹಲಿ, ಜು.8-
ಲೋಕಸಭೆಗೆ ಅವಧಿಗೆ ಮುನ್ನ ಚುನಾವಣೆ ನಡೆಯುವ ಸಾಧ್ಯತೆಗಳು ದಟ್ಟವಾಗಿದೆ. ಈ ಮಧ್ಯಂತರ ಚುನಾವಣೆಗೆ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಈಗಿನಿಂದಲೇ ಸಿದ್ಧತೆ ಆರಂಭಿಸಿವೆ. ಒಂದು ವೇಳೆ ಕಾಂಗ್ರೆಸ್ ಏನಾದರೂ ದಿಢೀರ್ ಚುನಾವಣೆ ದಾರಿ ಹಿಡಿದರೆ ಅದನ್ನು ಎದುರಿಸಲು ತಾನೂ ಸಿದ್ಧ ಎಂದು ಬಿಜೆಪಿಯೂ ಘೋಷಿಸಿದೆ.
ಮಧ್ಯಂತರ ಚುನಾವಣೆ ಸುಳಿವಿನ ಹಿನ್ನೆಲೆಯಲ್ಲೇ ಬಿಜೆಪಿಯ ಸಂಸದೀಯ ಮಂಡಳಿ ಸೋಮವಾರ ಮತ್ತೊಮ್ಮೆ ಸಭೆ ಸೇರಿ ಚರ್ಚೆ ನಡೆಸಿದೆ. ಉತ್ತಮ ಸರ್ಕಾರ ಹಾಗೂ ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗಲು ಪಕ್ಷವು ಅನುಸರಿಸಬೇಕಾದ ಕಾರ್ಯತಂತ್ರಗಳ ರೂಪುರೇಷೆ ಸಿದ್ಧಪಡಿಸಿದೆ. ನಾಲ್ಕು ದಿನಗಳ ಹಿಂದೆ ಚುನಾವಣಾ ತಂತ್ರಗಾರಿಕೆ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆ ಅಪೂರ್ಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಈ ಕುರಿತು ಮತ್ತಷ್ಟು ವಿಚಾರ ವಿಮರ್ಶೆಗಾಗಿ ಈಗ ಎರಡನೇ ಬಾರಿ ಸಭೆ ನಡೆಸಲಾಗಿದೆ.
ಸಭೆ ಬಳಿಕ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್, ದಿಢೀರ್ ಚುನಾವಣೆಗೆ ಬಿಜೆಪಿ ಸಿದ್ಧ ಎಂದು ಘೋಷಿಸಿದ್ದಾರೆ. ಪಕ್ಷವು ಚುನಾವಣೆಗಾಗಿ ಎರಡು ರೀತಿಯ ತಂತ್ರಗಾರಿಕೆ ಅಳವಡಿಸಿಕೊಂಡಿದೆ. ಮೊದಲನೆಯದು ರಾಜಕೀಯ ಆಂದೋಲನ, ಸಭೆಗಳನ್ನು ಆಯೋಜಿಸುವುದಾದರೆ ಎರಡನೆಯದು ಈ ಆಂದೋಲನಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪಕ್ಷದೊಳಗೆ ಸಮಿತಿಗಳನ್ನು ರಚಿಸುವುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜಾತಿ ವಿವರ ಸಂಗ್ರಹಕ್ಕೆ ಕಾಂಗ್ರೆಸ್ ಮುಂದು
ಚುನಾವಣಾ ರಾಜಕೀಯದಲ್ಲಿ ಜಾತಿಪ್ರಾಬಲ್ಯದ ಮಹತ್ವವನ್ನು ಅರಿತಿರುವ ಕಾಂಗ್ರೆಸ್ ಮುಂದಿನ ಲೋಕಸಭೆ ಚುನಾವಣೆಗೂ ಇದೇ ದಾಳವನ್ನು ಬಳಸುವ ಪ್ರಯತ್ನಕ್ಕೆ ಮುಂದಾಗಿದೆ. ಅದರ ಮೊದಲ ಹೆಜ್ಜೆಯಾಗಿ, ಎಲ್ಲ 543 ಲೋಕಸಭಾ ಕ್ಷೇತ್ರಗಳಲ್ಲಿನ ಜಾತಿವಾರು ವಿವರಗಳನ್ನು ನೀಡುವಂತೆ ಪ್ರತಿ ರಾಜ್ಯದ ಪ್ರದೇಶ ಕಾಂಗ್ರೆಸ್ ಸಮಿತಿ(ಪಿಸಿಸಿ) ಅಧ್ಯಕ್ಷರಿಗೆ ಸೂಚಿಸಲಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಅವರು ಈ ಬಗ್ಗೆ ಪಿಸಿಸಿ ಅಧ್ಯಕ್ಷರೊಂದಿಗೆ ರಹಸ್ಯ ಸಂದೇಶ ರವಾನಿಸಿದ್ದಾರೆ.
ಮೋದಿ, ರಾಜನಾಥ್ಗೆಸಮಿತಿ ರಚನೆ ಹೊಣೆ
ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದೊಳಗೆ ವಿವಿಧ ಸಮಿತಿಗಳನ್ನು ರಚಿಸಲೂ ಸಭೆಯಲ್ಲಿ ನಿರ್ಧರಿಸಲಾಯಿತು. ಇವುಗಳು ಚುನಾವಣಾ ಪ್ರಚಾರ, ಸಂಸದೀಯ ಚುನಾವಣೆ ಸಭೆಗಳು, ಯುಪಿಎ ಸರ್ಕಾರದ ವಿರುದ್ಧ ಚಾರ್ಜ್ಶೀಟ್ ಸಿದ್ಧಪಡಿಸುವುದು, ಅಭಿವೃದ್ಧಿ ಅಜೆಂಡಾ ಮತ್ತು ಇತರೆ ವಿಚಾರಕ್ಕೆ ಸಂಬಂಧಿಸಿದ ಹೊಣೆಯನ್ನು ನಿಭಾಯಿಸಲಿವೆ. ಈ ಸಮಿತಿಗಳನ್ನು ರಚಿಸುವ ಹೊಣೆಯನ್ನು ಸಂಸದೀಯ ಮಂಡಳಿಯು ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಹಾಗೂ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ನರೇಂದ್ರ ಮೋದಿ ಅವರಿಗೆ ವಹಿಸಿದೆ. ಪಕ್ಷದ ಹಿರಿಯರ ಅಭಿಪ್ರಾಯ ಪಡೆದುಕೊಂಡು ಅವರು ಸಮಿತಿ ರಚಿಸಬೇಕಿದೆ. ಈ ಕಾರ್ಯ 10 ದಿನಗಳಲ್ಲಿ ಪೂರ್ಣಗೊಳ್ಳಲಿದೆ.