ನವದೆಹಲಿ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ 'ಗೇಮ್ ಚೇಂಜರ್' ಎಂದೇ ಪರಿಗಣಿಸಲ್ಪಟ್ಟಿರುವ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆ ಆ. 20ರಂದು ಜಾರಿಯಾಗಲಿದೆ. ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಜನ್ಮದಿನಾಚರಣೆಯಂದೇ ದೆಹಲಿಯಲ್ಲಿ ಯೋಜನೆಗೆ ಚಾಲನೆ ದೊರೆಯಲಿದೆ.
ಶನಿವಾರ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು, ಮುಖ್ಯಮಂತ್ರಿಗಳು ಹಾಗೂ ಪಿಸಿಸಿ ಮುಖ್ಯಸ್ಥರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೋನಿಯಾರ ನಿವಾಸದಲ್ಲಿ ಒಂದು ಗಂಟೆಗಳ ಕಾಲ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಸೋನಿಯಾ, ಕಾಂಗ್ರೆಸ್ ಆಡಳಿತದಲ್ಲಿರುವ ಎಲ್ಲ ರಾಜ್ಯಗಳೂ ಬೇಗನೆ ಉತ್ಸಾಹದಿಂದ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು. ಯೋಜನೆ ಸಂಪೂರ್ಣ ಅನುಷ್ಠಾನಗೊಳ್ಳಲು ಕನಿಷ್ಠ 3 ತಿಂಗಳಾದರೂ ಬೇಕು ಎಂದು ಸರ್ಕಾರ ಹೇಳಿದೆ. 2009ರಲ್ಲಿ ಉದ್ಯೋಗ ಖಾತ್ರಿ ಹಾಗೂ ಸಾಲ ಮನ್ನಾ ಯೋಜನೆ ಯುಪಿಎಗೆ ವರವಾದಂತೆ, ಈ ಬಾರಿ ಖಾತೆಗೆ ಸಬ್ಸಿಡಿ ನೇರ ವರ್ಗಾವಣೆ, ಆಹಾರ ಭದ್ರತೆ ಯೋಜನೆಯ ಮೂಲಕವಾದರೂ ಅಧಿಕಾರ ಗಳಿಸಬೇಕೆಂಬುದು ಕಾಂಗ್ರೆಸ್ ಇರಾದೆ ಎನ್ನಲಾಗಿದೆ.