ಅಗ್ರಹಾರಬಾಚಹಳ್ಳಿ (ಕೆ.ಆರ್.ಪೇಟೆ): ಅಸ್ಸಾಂನ ಭಾರತ-ಬಾಂಗ್ಲ ಗಡಿಯ ಸುರ್ಮಾ ನದಿಯಲ್ಲಿ ದೋಣಿ ಮಗುಚಿ ಮೃತಪಟ್ಟ ಗಡಿಭದ್ರತಾ ಪಡೆ ಯೋಧ ಜಯರಾಮೇಗೌಡ ಅವರ ಅಂತ್ಯಸಂಸ್ಕಾರ ಅವರ ಹುಟ್ಟುರಾದ ಅಗ್ರಹಾರ ಬಾಚಹಳ್ಳಿ ಗ್ರಾಮದಲ್ಲಿ ಶನಿವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಗ್ರಾಮದ ಹೊರವಲಯದ ಮಲ್ಲಸಮುದ್ರ ಕೆರೆ ಸಮೀಪದ ತೋಟದಲ್ಲಿ ಮಧ್ಯಾಹ್ನ 1.45ರ ಸಮಯದಲ್ಲಿ ಜಯರಾಮೇಗೌಡ ಅವರ ಪಾರ್ಥೀವ ಶರೀರ ಹೂಳುವುದಕ್ಕೂ ಮುನ್ನ ರಾಷ್ಟ್ರಧ್ವಜ ಹೊದಿಸಿ, ಗಡಿಭದ್ರತಾ ಪಡೆ ಯೋಧರು ಮೂರು ಸುತ್ತು ಕುಶಾಲುತೋಪು ಹಾರಿಸಿ ಸರ್ಕಾರಿ ಗೌರವ ಸೂಚಿಸಿದರು.