ಪ್ರಧಾನ ಸುದ್ದಿ

192 ಟಿಎಂಸಿ ನಂತ್ರ ಲಭ್ಯ ನೀರು ನಮ್ದೆ

 ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಕಾವೇರಿ ನ್ಯಾಯಾಧಿಕರಣದ ಆದೇಶದಂತೆ ತಮಿಳುನಾಡಿಗೆ 192 ಟಿಎಂಸಿ ನೀರು ಹರಿಸಿದ ನಂತರ ಲಭ್ಯವಾಗುವ ನೀರನ್ನು ತನಗೆ ಬೇಕಾದಂತೆ ಬಳಸಿಕೊಳ್ಳಲು ಸಂಪೂರ್ಣ ಹಕ್ಕಿದೆ ಎಂದು ಕರ್ನಾಟಕ ಪ್ರತಿಪಾದಿಸಿದೆ. ಅದನ್ನು ಪ್ರಶ್ನಿಸುವ ಹಕ್ಕು ಕಾವೇರಿ ಮೇಲ್ವಿಚಾರಣಾ ಸಮಿತಿಗೂ ಇಲ್ಲವೆಂದು ರಾಜ್ಯ ಸ್ಪಷ್ಟ ಪಡಿಸಿದೆ.
ಕಾವೇರಿ ನಿರ್ವಹಣಾ ಮಂಡಳಿಗೆ ರೂಪಿಸಿರುವ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲು ಮುಂದಾಗಿರುವ ಕಾವೇರಿ ಮೇಲ್ವಿಚಾರಣಾ ಸಮಿತಿ ಆ ಮೂಲಕ ರಾಜ್ಯದ ಸ್ವಾಯತ್ತತೆಯನ್ನು ಅತಿಕ್ರಮಿಸುವ ಯತ್ನವಾಗಿದ್ದು ಅದನ್ನು ವಿರೋಧಿಸುತ್ತದೆ ಎಂದು ಕರ್ನಾಟಕ ತಿಳಿಸಿದೆ.
ಕಾವೇರಿ ಮೇಲ್ವಿಚಾರಣಾ ಸಮಿತಿ ಜೂನ್ 1 ರಂದು ನಡೆಸಿದ ಪ್ರಥಮ ಸಭೆಯಲ್ಲಿ ಪ್ರಸ್ತಾಪಿಸಿದ ವಿಷಯಗಳಿಗೆ ತನ್ನ ಪ್ರತಿಕ್ರಿಯೆ ಮತ್ತು ಸ್ಪಷ್ಟನೆಗಳನ್ನು ನೀಡಿರುವ ಕರ್ನಾಟಕ, ಕಾವೇರಿ ನ್ಯಾಯಾಧಿಕರಣವು ತನ್ನ ಅಂತಿಮ ತೀರ್ಪಿನಲ್ಲಿ ಯಾವುದೇ ರಾಜ್ಯಗಳು ತಮಗೆ ಹಂಚಿದ ನೀರನ್ನು ತಮ್ಮ ವ್ಯಾಪ್ತಿಯಲ್ಲಿ ಬಳಸಿಕೊಳ್ಳಲು ಸಂಪೂರ್ಣ ಸ್ವತಂತ್ರವಾಗಿವೆ. ನ್ಯಾಯಾಧಿಕರಣದ ಯಾವ ಆದೇಶವೂ ಅದನ್ನು ನಿರ್ಬಂಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ವಿವರಿಸಿದೆ. ಮೇಲುಸ್ತುವಾರಿ ಸಮಿತಿಯನ್ನು ನಿಯಮ 6ಎ ಅಡಿಯಲ್ಲಿ ರಚಿಸಿ ಅಧಿಸೂಚನೆ ಹೊರಡಿಸಿರುವ ಕ್ರಮವೇ ತಪ್ಪು ಎಂದು ಕರ್ನಾಟಕ ಪ್ರತಿಪಾದಿಸಿದೆ.
ನೀರು ಬಳಕೆಗೆ ಅನುಮತಿ ಬೇಡ: 192 ಟಿಎಂಸಿ ನೀರು ಹರಿಸಿದ ನಂತರ ಲಭ್ಯ ನೀರನ್ನು ಕುಡಿಯಲು ಬಳಸಿಕೊಳ್ಳುವುದಾಗಿಯೂ ಅದಕ್ಕೆ ಯಾರ ಅನುಮತಿ ಆದೇಶವೂ ಬೇಕಿಲ್ಲ ಎಂದೂ ತಿಳಿಸಿದೆ. ತಮಿಳುನಾಡಿಗೆ ಹರಿಸಬೇಕಾದ ನೀರಿನ ಪ್ರಮಾಣದ ಪೈಕಿ 36.18 ಟಿಎಂಸಿ ನೀರನ್ನು ಸೆಪ್ಟೆಂಬರ್ ನಂತರ ಹರಿಸಲು ಅನುವು ಮಾಡಿಕೊಡುವುದಾದರೆ ಮಾತ್ರ ಕರ್ನಾಟಕ ಮಾಸಿಕ ನಿಗದಿತ ನೀರು ಬಿಡುಗಡೆಗೆ ಒಪ್ಪುತ್ತದೆ. ಇಲ್ಲದಿದ್ದರೆ ಇಲ್ಲ ಎಂದು ಸ್ಪಷ್ಟ ಪಡಿಸಿದೆ.
ಕರ್ನಾಟಕ ಸಲ್ಲಿಸಿರುವ ಆಕ್ಷೇಪ ಮತ್ತು ಸ್ಪಷ್ಟನೆಗಳು: ಮೇಲುಸ್ತುವಾರಿ ಸಮಿತಿಯನ್ನು ಸುಪ್ರೀಂ ಕೋರ್ಟ್ ಆದೇಶದಂತೆ ರಚಿಸಲಾಗಿದ್ದು ಅದನ್ನು ನಿರ್ವಹಣಾ ಮಂಡಳಿ ಎಂದು ಪರಿಗಣಿಸುವಂತಿಲ್ಲ. ಈ ಸಮಿತಿಯನ್ನು ಸೆಕ್ಷನ್ 6ಎ ಅಡಿಯಲ್ಲಿ ರಚಿಸುವಂತಿಲ್ಲ. ಕೇಂದ್ರ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡುವವರೆಗೆ ಮಾತ್ರ ಕಾವೇರಿ ನ್ಯಾಯಾಧಿಕರಣವು ಫೆಬ್ರವರಿ 5, 2007ರಲ್ಲಿ ನೀಡಿದ ಆದೇಶವನ್ನು ಅನುಷ್ಠಾನಗೊಳಿಸುವುದಕ್ಕಷ್ಟೆ ಮೇಲುಸ್ತುವಾರಿ ಸಮಿತಿ ಕಾರ್ಯವ್ಯಾಪ್ತಿ ಸೀಮಿತವಾಗಿರಬೇಕು. ಮೇ 22ರಂದು ಹೊರಡಿಸಿರುವ ಅಧಿಸೂಚನೆ ಸುಪ್ರೀಂ ಕೋರ್ಟ್ ಆದೇಶಕ್ಕೆ ಪೂರಕವಾಗಿಲ್ಲ. ಸುಪ್ರೀಂ ಕೋರ್ಟ್ನ ಆದೇಶ ಮೀರಿ ಮೇ 22ರಂದು ಅಧಿಸೂಚನೆ ಹೊರಡಿಸಲಾಗಿದೆ. ಅಗತ್ಯ ಬಿದ್ದಾಗ ಸುಪ್ರೀಂ ಕೋರ್ಟ್ನ ಮಾರ್ಗದರ್ಶನ ಪಡೆಯಬಹುದೆಂದು ತಿಳಿಸಿದ್ದರೂ ಕೇಂದ್ರ ಸರ್ಕಾರ ಮಾರ್ಗದರ್ಶನ ಪಡೆದಿಲ್ಲ. ಅಲ್ಲದೇ ಕೇಂದ್ರ ಸರ್ಕಾರ ನಿಯಮ 6ಎ ಅಡಿಯಲ್ಲಿ ಅಧಿಸೂಚನೆ ಹೊರಡಿಸುವ ಮೂಲಕ ತನ್ನ ಅಧಿಕಾರದ ಮಿತಿ ಮೀರಿ ವರ್ತಿಸಿದೆ. ನ್ಯಾಯಾಧಿಕರಣ ಅಧಿಸೂಚನೆಯು ಸುಪ್ರೀಂ ಕೋರ್ಟ್ನಲ್ಲಿ ಕರ್ನಾಟಕ ಸಲ್ಲಿಸಿರುವ ಅರ್ಜಿಗಳ ತೀರ್ಪಿಗೆ ಬದ್ಧವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿರುವುದರಿಂದ ತಾತ್ಕಾಲಿಕ ಸಮಿತಿಯು ನ್ಯಾಯಾಧಿಕರಣದ ಶಿಫಾರಸುಗಳನ್ನು ಪಾಲಿಸುವಂತಿಲ್ಲ. ಸುಪ್ರೀಂ ಕೋರ್ಟ್ನಲ್ಲಿ ಇನ್ನು ಅರ್ಜಿಗಳು ಇತ್ಯರ್ಥವಾಗದೇ ಇರುವುದರಿಂದ ಕೇಂದ್ರ ಸರ್ಕಾರ ನಿಯಮ 6ಎ ಅಡಿಯಲ್ಲಿ ಮೇಲುಸ್ತುವಾರಿ ಸಮಿತಿ ರಚಿಸುವಂತಿಲ್ಲ. ಸಮಿತಿ ಕೇವಲ ತಾತ್ಕಾಲಿಕ ವ್ಯವಸ್ಥೆಯಾಗಿರಬೇಕು.
ಸಾಮಾನ್ಯ ವರ್ಷದಲ್ಲಿ 740 ಟಿಎಂಸಿ ನೀರು ಸಂಗ್ರಹವಾಗುತ್ತದೆಂಬ ಪರಿಕಲ್ಪನೆ ಅಡಿಯಲ್ಲಿ ನೀರು ಹಂಚಲಾಗಿದೆ. ಆದರೆ, ಈ ನೀರಿನ ಪ್ರಮಾಣ ತಿಳಿಯುವುದೇ ವರ್ಷಾಂತ್ಯಕ್ಕೆ. ಅಲ್ಲದೇ ನ್ಯಾಯಾಧಿಕರಣ ಪ್ರತಿ ತಿಂಗಳು ತಮಿಳುನಾಡಿಗೆ ನೀರು ಹರಿಸುವ ಪ್ರಮಾಣ ನಿಗದಿ ಮಾಡಿರುವುದಕ್ಕೆ ಯಾವುದೇ ಅಂಕಿ ಅಂಶಗಳ ಆಧಾರ ಇಲ್ಲದ ಕಾರಣ ಅದನ್ನು ಕರ್ನಾಟಕ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದೆ.
ಬೆಳೆಗನುಗುಣವಾಗಿ ಬಿಟ್ಟ ನೀರು: 2012-13 ಸಂಕಷ್ಟ ವರ್ಷವಾದರೂ ಸುಪ್ರೀಂ ಕೋರ್ಟ್ ಆಗಲೀ ಕಾವೇರಿ ನದಿ ಪ್ರಾಧಿಕಾರವಾಗಲೀ ಸಮ ಪ್ರಮಾಣದಲ್ಲಿ ಕೊರತೆ ಭರಿಸಬೇಕೆಂದು ಹೇಳಿಲ್ಲ. ಆದರೆ, ಬೆಳೆಗನುಗುಣವಾಗಿ ನೀರು ಬಿಡಲಾಗಿದೆ. ಆಯಾ ತಿಂಗಳಲ್ಲಿ ನಿಗದಿತ ಪ್ರಮಾಣದ ನೀರು ಹರಿಸಲು ಸಾಧ್ಯವಾಗದೇ ಇದ್ದಾಗ ಆ ಪ್ರಮಾಣದ ನೀರನ್ನು ಆಯಾ ಜಲವರ್ಷದ ಕೊನೆ ವೇಳೆಗೆ ಹರಿಸಬಹುದು ಎಂದು ನ್ಯಾಯಾಧಿಕರಣ ತನ್ನ ಆದೇಶದಲ್ಲಿ ತಿಳಿಸಿದೆ. ಹೀಗಾಗಿ ತಿಂಗಳು ನೀರು ಹರಿಸುವ ಪ್ರಮಾಣದ ಮೇಲೆ ಮೇಲುಸ್ತುವಾರಿ ಮೇಲ್ವಿಚಾರಣೆ ಮಾಡುವ ಅಗತ್ಯವಿಲ್ಲ. ಕಾವೇರಿ ನಿರ್ವಹಣಾ ಮಂಡಳಿ ಮಾರ್ಗಸೂಚಿಗಳು ಸ್ವೀಕಾರಾರ್ಹವಲ್ಲ. ಸುಪ್ರೀಂಕೋರ್ಟ್ ರಚಿಸಿರುವುದು ಕಾವೇರಿ ಮೇಲ್ವಿಚಾರಣಾ ಸಮಿತಿಯೇ ಹೊರತು ಕಾವೇರಿ ನಿರ್ವಹಣಾ ಮಂಡಳಿ ಅಲ್ಲ. ಆದ್ದರಿಂದ ಮೇಲ್ವಿಚಾರಣಾ ಸಮಿತಿ ತನ್ನ ಮಿತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ತಿಳಿಸಿದೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!