ಪ್ರಧಾನ ಸುದ್ದಿ

ಸಚಿವರ ಅಸ್ತು ಇಲ್ದೇ ವಾಸ್ತು ಬದಲು

ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಏನು ನಡೆಯುತ್ತಿದೆ ಎಂಬುದು ಸಚಿವರಿಗೇ ಗೊತ್ತಿಲ್ಲ.

ಕ.ಪ್ರ. ವಾರ್ತೆ  ಬೆಂಗಳೂರು  ಜೂ. 17
ಮಂತ್ರಿಗಳಿಗೇ ಗೊತ್ತಿಲ್ಲ ಅವರ ಕಚೇರಿ ನವೀಕರಣ...!
ಹೌದು, ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಏನು ನಡೆಯುತ್ತಿದೆ ಎಂಬುದು ಸಚಿವರಿಗೇ ಗೊತ್ತಿಲ್ಲ. ನಿಮ್ಮ ಕಚೇರಿ ನವೀಕರಣವಾಗುತ್ತಿದೆಯಲ್ಲ? ಇಷ್ಟೊಂದು ವೆಚ್ಚ ಅಗತ್ಯ ಇತ್ತಾ ಎಂಬ ಪ್ರಶ್ನೆ ಕೇಳಿ ನೋಡಿ. ಆಗ ಮಂತ್ರಿಮಹೋದಯರೇ ಹೇಳುತ್ತಾರೆ, 'ಇಲ್ಲಪ್ಪಾ, ನಾನು ನವೀಕರಣಕ್ಕೆ ಹೇಳೇ ಇಲ್ಲ. ಸುಣ್ಣ-ಬಣ್ಣ ಮಾಡಿಸಿಕೊಡುತ್ತೇನೆ ಎಂದಿದ್ದರು, ಅಷ್ಟೇ' ಎಂದು ಹೇಳಿ ನುಣುಚಿಕೊಳ್ಳುತ್ತಾರೆ. ಆದರೂ, ಪ್ರತಿಯೊಂದು ಕಚೇರಿಯ ನವೀಕರಣ ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ಇನ್ನೂ ಸಾಗುತ್ತಿದೆ.
ಸಚಿವರ ಅನುಮತಿ ಇಲ್ಲದೆ ಇಂತಹ ನವೀಕರಣ ನಡೆಯುತ್ತಾ ಎಂಬ ಮೂಲಭೂತ ಪ್ರಶ್ನೆಯನ್ನು ಅಧಿಕಾರಿಗಳಿಗೆ ಕೇಳಿದರೆ, ಅಸಹಾಯಕ ಭಾವ ವ್ಯಕ್ತವಾಗುತ್ತದೆ. ಹೌದು ಅಥವಾ ಇಲ್ಲ ಎನ್ನುವುದನ್ನು ಬಿಡಿ, ಹೂಂ... ಉಹೂಂ... ಎಂದೂ ಹೇಳದಂತಹ ಪರಿಸ್ಥಿತಿ ಅವರದು. ಹೌದು ಎಂದರೆ ಯಾರ ಅನುಮತಿಯೂ ಇಲ್ಲದೆ ಹೇಗೆ ಕೆಲಸ ಮಾಡಿದರು ಎಂಬ ಪ್ರಶ್ನೆ ಎದುರಾಗುತ್ತದೆ. ಇಲ್ಲ ಎಂದರೆ, ಸಚಿವರು ಒಪ್ಪಿಗೆ ನೀಡಿದ ದಾಖಲೆ ನೀಡಬೇಕಾಗುತ್ತದೆ.
ಸಚಿವರು ಮೌಖಿಕವಾಗಿ ನೀಡಿರುವ ಆದೇಶಕ್ಕೆ ದಾಖಲೆಯನ್ನು ಹೇಗೆ ನೀಡಲಾಗುತ್ತದೆ? ಹಾಗೆ ಮೌಖಿಕವಾಗಿ ಹೇಳಿದ್ದಾರೆ ಎಂದರೂ ಅಧಿಕಾರಿಗಳ ಮೇಲೆ ತಪ್ಪು ಬರುತ್ತದೆ. ಬರವಣಿಗೆಯಲ್ಲಿ ಕೊಡಿ ಎಂದು ಕಾನೂನು ಮಾತನಾಡಿದರೆ, ಸಚಿವರ ವಕ್ರದೃಷ್ಟಿ ಬೀಳುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿಧಾನಸೌಧದ ಎರಡು ಮತ್ತು ಮೂರನೇ ಮಹಡಿಯಲ್ಲಿ ಸಚಿವರ ಕೊಠಡಿಗಳಿವೆ. 29 ಸಚಿವರ ಕೊಠಡಿಗಳಲ್ಲಿ ನವೀಕರಣ ಬಿರುಸಾಗಿಯೇ ಸಾಗಿದೆ.  

ಕೊಠಡಿ ರಂಗೇ ಬರಲಾಗಿದೆ: ಸಚಿವರ ಕೊಠಡಿಯ ಬಣ್ಣ ಮಾತ್ರವಲ್ಲ, ವಿನ್ಯಾಸ, ಪೀಠೋಪಕರಣ ಹಾಗೂ ನೆಲಹಾಸೂ ಬದಲಾಗಿದೆ. ವಿಧಾನಸೌಧದ ಮೊಸಾಯಿಕ್ ನೆಲಹಾಸು ಮೇಲೆ ವಿಟ್ರಿಫೈಯ್ಡ್ ಟೈಲ್ಸ್ ಬಂದಾಗಿದೆ. ಶೌಚಾಲಯಕ್ಕೆ 'ಹೈಟೆಕ್ ಟಚ್‌' ಬಂದಿದೆ. ಕೆಲವು ಕೊಠಡಿಗಳಲ್ಲಿ ಗೋಡೆಗಳು ತೆರವಾಗಿ, ಪಾರ್ಟಿಕಲ್ ಬೋರ್ಡ್ ರಂಗುರಂಗಾಗಿ ಎದ್ದುನಿಂತಿದೆ. ಗೋಡೆಗಳು ಹಾಗೂ ಬಾಗಿಲುಗಳಿಗೆ ಪ್ರಕಾಶಿಸುವ ಬಣ್ಣ ಬಳಿದಾಗಿದೆ. ಲಕ್ಷಾಂತರ ರುಪಾಯಿ ಬೆಳೆಬಾಳುವ ಪೀಠೋಪಕರಣಗಳಂತೂ ಯಾವುದೇ ಎಂಎನ್‌ಸಿ ಕಂಪನಿಗೆ ಕಡಿಮೆ ಇಲ್ಲದಂತೆ ಬದಲಾಗಿವೆ. ಒಂದು ಕೊಠಡಿಗೆ ಇಷ್ಟೆಲ್ಲ ಮಾಡಲು ಕನಿಷ್ಠ ಎಂದರೂ ಮೂರರಿಂದ ನಾಲ್ಕು ಲಕ್ಷ ವೆಚ್ಚವಾಗುತ್ತದೆ. ಅಂದರೆ 29 ಸಚಿವರ ಕೊಠಡಿ ನವೀಕರಣ ಕೋಟಿ ಮೀರುತ್ತದೆ. ಇನ್ನು 'ಹೂವಿನ ಜತೆ ನಾರೂ ಸ್ವರ್ಗಕ್ಕೆ ಸೇರಿತು' ಎಂಬಂತೆ ಸಚಿವರ ಕೊಠಡಿ ಜತೆಗೆ ಅವರ ಆಪ್ತ ಕಾರ್ಯದರ್ಶಿಯವರ ಕೊಠಡಿಗಳೂ ರಂಗೇರಿವೆ. ಅದಕ್ಕೂ ಮತ್ತಷ್ಟು ಲಕ್ಷ ವೆಚ್ಚವಾಗಿದೆ.
ಕೊಠಡಿ ನವೀಕರಣ ಕೇವಲ ಹೈಟೆಕ್‌ಗೆ ಮಾತ್ರ ಮೀಸಲಾಗಿಲ್ಲ. ವಾಸ್ತುವಿಗೂ ಅತ್ಯಂತ ಹೆಚ್ಚಿನ ಪ್ರಾಶಸ್ತ್ಯ ಇಲ್ಲಿದೆ. ಸಚಿವರ ಕೊಠಡಿಯಲ್ಲಿ ಶೌಚಾಲಯ, ಖಾಸಗಿ ಕೋಣೆಗಳು ವಾಸ್ತುವಿಗೆ ಅನುಸಾರವಾಗಿ ಬದಲಾಗಿವೆ. ಕುಳಿತುಕೊಳ್ಳುವ ಆಸನ ಎಲ್ಲಿರಬೇಕು, ಹೇಗಿರಬೇಕು ಎಂಬುದಕ್ಕೂ ವಾಸ್ತುವೇ ಪ್ರೇರಣೆ.
ಅಂತೂ ಮಂತ್ರಿಮಹೋದಯರು ವಾಸ್ತು ಎಂಬ ಮೌಢ್ಯಕ್ಕೆ ಬಲಿಯಾಗಿ ವಿಧಾನಸೌಧದ ಕೊಠಡಿಗಳ ಚಿತ್ರಣವನ್ನೇ ಬದಲಿಸಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ಒಬ್ಬ ಸಚಿವರು ಅಲ್ಲ, ಸಚಿವ ದರ್ಜೆಯ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಇಂತಹ ಕೆಲಸ ಮಾಡಿದಾಗ ಕಾಂಗ್ರೆಸ್ ಒಗ್ಗಟ್ಟಾಗಿ ಪ್ರತಿಭಟಿಸಿತ್ತು. ಈಗ ಕಾಂಗ್ರೆಸ್ ಸರ್ಕಾರ ವಿಧಾನಸೌಧವನ್ನೇ ಬದಲಿಸಲು ಹೊರಟಿದೆ.
ಸಚಿವರ ಕೊಠಡಿಗಳು ಮಾತ್ರ ನವೀಕರಣಕ್ಕೆ ಸೀಮಿತವಾಗಿಲ್ಲ. ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಕೊಠಡಿಯೂ ನವೀಕರಣವಾಗುತ್ತಿದೆ. ಅಂದರೆ ಯಾರೂ ನವೀಕರಣಕ್ಕೆ ಹೊರತಲ್ಲ. ಹೀಗಾದ ಮೇಲೆ ಪ್ರಶ್ನಿಸುವವರು ಯಾರು? ಈ ಬಗ್ಗೆ ಸೊಲ್ಲೆತ್ತುವವರೇ ಇಲ್ಲದಂತಾಗಿದೆ.

ಆಷಾಢ'ಭೂತ' ಬಿಡಿಸುತ್ತಾರಾ ಸಿದ್ದರಾಮಯ್ಯ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 'ಆಷಾಢಭೂತ' ಬಿಡುತ್ತದೆಯೇ?
ಇಂತಹ ಒಂದು ಪ್ರಶ್ನೆ ಇದೀಗ ವಿಧಾನಸೌಧ ಸೇರಿದಂತೆ ಎಲ್ಲೆಡೆ ಚರ್ಚೆಯಲ್ಲಿದೆ. ಜುಲೈ ಎರಡನೇ ವಾರದಲ್ಲಿ ಬಜೆಟ್ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅದಕ್ಕಾಗಿ ಪೂರ್ವತಯಾರಿಯನ್ನೂ ಅವರು ಆರಂಭಿಸಿದ್ದಾರೆ. ಎರಡನೇ ವಾರದಲ್ಲಿ ಬಜೆಟ್ ಅಂದರೆ, ಜುಲೈ 8ರಿಂದ 13ರೊಳಗೆ ಬಜೆಟ್ ಮಂಡನೆಯಾಗಬೇಕು. ಜುಲೈ 8ರ ಸೋಮವಾರ ಅಮಾವಾಸ್ಯೆ. ನಂತರದ 9ರಿಂದ ಆಗಸ್ಟ್ 6ರವರೆಗೆ ಆಷಾಢ. ಈ ಆಷಾಢಭೂತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಟ್ಟಿ ನಿಲ್ಲುತ್ತಾರೆಯೇ ಎಂಬುದೇ ಕುತೂಹಲ. ಅವರ ಸಚಿವ ಸಂಪುಟದ ಸಹೋದ್ಯೋಗಿಗಳೆಲ್ಲ ಮೌಢ್ಯಕ್ಕೆ ಒಳಗಾಗಿ, ವಾಸ್ತುವಿಗಾಗಿ ತಮ್ಮ ಕಚೇರಿ ಗೋಡೆಯನ್ನೇ ಕೆಡವುತ್ತಿದ್ದಾರೆ. ಕುಳಿತುಕೊಳ್ಳುವ ದಿಕ್ಕನ್ನೇ ಬದಲಿಸುತ್ತಿದ್ದಾರೆ. ಹೀಗಿರುವಾಗ, ವರ್ಷಗಟ್ಟಲೆ ಮುಚ್ಚಿದ್ದ ಮುಖ್ಯಮಂತ್ರಿ ಕೊಠಡಿಯ ದಕ್ಷಿಣ ದ್ವಾರವನ್ನು ತೆರೆಸಿದ ಸಿದ್ದರಾಮಯ್ಯ ಮೌಢ್ಯ ನನಗಲ್ಲ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಆದರೂ, ಮೌಢ್ಯವೇ ಹೆಚ್ಚಿರುವ, ವಾಸ್ತುವೇ ಆವರಿಸಿರುವ ಮಂತ್ರಿಮಂಡಲದ ಸದಸ್ಯರು ಆಷಾಢದಲ್ಲಿ ಬಜೆಟ್‌ಗೆ ಸಮ್ಮತಿಸುತ್ತಾರಾ? ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಇತಿಹಾಸ ಬರೆಯುತ್ತಾರಾ ಎಂಬ ಕೌತುಕ ಗೂಡುಕಟ್ಟಿದೆ. ಸಿದ್ದರಾಮಯ್ಯ ಜುಲೈ ಎರಡನೇ ವಾರದಲ್ಲೇ ಬಜೆಟ್ ಮಂಡಿಸಿದರೆ ಸ್ಪಷ್ಟ ಉತ್ತರ ಸಿಗುತ್ತದೆ.

- ಕೆರೆ ಮಂಜುನಾಥ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ