ಸಿಯೋಲ್/ವಾಷಿಂಗ್ಟನ್: ವಿಶ್ವದ ದೊಡ್ಡಣ್ಣನಿಗೆ ಸಡ್ಡು ಹೊಡೆಯುತ್ತಲೇ ಬಂದಿರುವ ಉತ್ತರ ಕೊರಿಯಾ ಈಗ ಅಮೆರಿಕದ ವಿರುದ್ಧ ಸಮರಕ್ಕೆ ಸನ್ನದ್ಧವಾಗಿದೆ. ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿರಿಸಿ ತನ್ನ ರಾಕೆಟ್‌ಗಳನ್ನು ನಿಯೋಜಿಸಿದೆ.
ಅಮೆರಿಕವು ಅಣ್ವಸ್ತ್ರಸಜ್ಜಿತ ಯುದ್ಧವಿಮಾನಗಳನ್ನು ದಕ್ಷಿಣ ಕೊರಿಯಾದಲ್ಲಿ ಹಾರಾಟ ನಡೆಸಿದ ಬೆನ್ನಲ್ಲೇ ಉತ್ತರ ಕೊರಿಯಾ ಇಂಥದ್ದೊಂದು ಕ್ರಮಕ್ಕೆ ಮುಂದಾಗಿದೆ. ಈ ಸಂಬಂಧ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್- ಉನ್ ಅವರು ಗುರುವಾರ ರಾತ್ರಿ ಉನ್ನತ ಮಿಲಿಟರಿ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಕ್ಷಿಪಣಿ ನಿಯೋಜನೆ ಆದೇಶಕ್ಕೆ ಸಹಿಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರದಿಂದಲೇ ಅಮೆರಿಕದ ನೌಕಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿಗಳನ್ನು ನಿಯೋಜಿಸಲಾಗಿದೆ.
ಬಿ-2 ಬಾಂಬರ್: ಮಿತ್ರರಾಷ್ಟ್ರವಾದ ದಕ್ಷಿಣ ಕೊರಿಯಾಗೆ ಉತ್ತರ ಕೊರಿಯಾದಿಂದ ಬೆದರಿಕೆ ಹೆಚ್ಚಿದ ಹಿನ್ನಲೆಯಲ್ಲಿ ಅಮೆರಿಕವು ಇದೇ ಮೊದಲ ಬಾರಿಗೆ ಬಿ-2 ಸ್ಪಿರಿಟ್ ಬಾಂಬರ್‌ಗಳನ್ನು ಗುರುವಾರ ದಕ್ಷಿಣ ಕೊರಿಯಾಗೆ ಕಳುಹಿಸಿತ್ತು. ಅಮೆರಿಕದಿಂದ ಹೊರಟ ಬಿ- 2 ಯುದ್ಧವಿಮಾನ ದಕ್ಷಿಣ ಕೊರಿಯಾಗೆ ತೆರಳಿ ತನ್ನ ಶಕ್ತಿಪ್ರದರ್ಶನ ನಡೆಸಿತ್ತು.
ಅಮೆರಿಕದ ಈ ಕ್ರಮದಿಂದ ತೀವ್ರ ಕೆಂಡಾಮಂಡಲವಾದ ಉತ್ತರ ಕೊರಿಯಾ ಹವಾಯಿ, ಗುವಾಮ್ ಮತ್ತು ದಕ್ಷಿಣ ಕೊರಿಯಾದಲ್ಲಿರುವ ಅಮೆರಿಕದ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು ಕ್ಷಿಪಣಿಗಳನ್ನು ನಿಯೋಜಿಸಿದೆ. ಒಂದು ವೇಳೆ ಅಮೆರಿಕವೇನಾದರೂ ದಾಳಿ ನಡೆಸಿದರೆ ತಾನೂ ಯುದ್ಧಕ್ಕೆ ಸಿದ್ಧ ಎನ್ನುವ ಸ್ಪಷ್ಟ ಸಂದೇಶ ರವಾನಿಸಿದೆ.
ಉತ್ತರ ಕೊರಿಯಾದ ಬಳಿ ಇರುವ ಕ್ಷಿಪಣಿಗಳು ಸೋವಿಯತ್ ಕಾಲದ್ದಾಗಿದ್ದು, ಅವುಗಳು ಕೇವಲ ದಕ್ಷಿಣ ಆಫ್ರಿಕಾವನ್ನಷ್ಟೇ ತಲುಪಲು ಸಾಧ್ಯ. ಆದರೆ, ದೀರ್ಘವ್ಯಾಪ್ತಿಯ ಕ್ಷಿಪಣಿಗಳ ಪ್ರಯೋಗವೇ ನಡೆದಿಲ್ಲ ಎಂಬುದು ಮಿಲಿಟರಿ ತಜ್ಞರ ಅಭಿಪ್ರಾಯ.