-ಸಹಜ, ಸಾಮಾಜಿಕ ನ್ಯಾಯ ಸೂತ್ರಕ್ಕೆ ಕಾಂಗ್ರೆಸ್ ವರಿಷ್ಠರ ಚಿಂತನೆ
ನವದೆಹಲಿ: ಮೊದಲ 30 ತಿಂಗಳಿಗೆ ಸಿದ್ದರಾಮಯ್ಯ ಮತ್ತು ನಂತರದ 30 ತಿಂಗಳಿಗೆ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ!
- ಇಂಥದೊಂದು ಸೂತ್ರವನ್ನು ಕಾಂಗ್ರೆಸ್ ಹೈಕಮಾಂಡ್ ಹೆಣೆಯುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಸಹಜ ಮತ್ತು ಸಾಮಾಜಿಕ ನ್ಯಾಯ. ಈ ಎರಡೂ ತತ್ವವನ್ನು ಪಾಲಿಸಲು ಮುಂದಾಗಿರುವುದರಿಂದ ಸಹಜ ನ್ಯಾಯದಡಿಯಲ್ಲಿ ಸಿದ್ದರಾಮಯ್ಯ ಅವರಿಗೆ ಸಿಎಂ ಆಗುವ ಯೋಗ ಒದಗಿ ಬಂದರೆ, ಸಾಮಾಜಿಕ ನ್ಯಾಯದಡಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಕುರ್ಚಿ ಲಭ್ಯವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಾಯಕತ್ವ ಗೊಂದಲಕ್ಕೆ ತೆರೆ ಎಳೆಯಲು ನಿರ್ಧರಿಸುವ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮಾಡಲು ನಿರ್ಧರಿಸಿದೆ.
ಈ ಹೊಸ ಸೂತ್ರದ ಅಡಿಯಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲೂ ನಿರ್ಣಾಯಕ ಗೆಲವು ದಕ್ಕಿಸಿಕೊಳ್ಳುವುದು ಹೈಕಮಾಂಡ್ನ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.
ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಸೋತಿರುವುದರಿಂದ ಮುಖ್ಯಮಂತ್ರಿ ಹುದ್ದೆಗೆ ಅವರನ್ನು ಪರಿಗಣಿಸುತ್ತಿಲ್ಲ. ಹೀಗಾಗಿ ಇದುವರೆಗೆ ಪ್ರತಿಪಕ್ಷ ನಾಯಕರಾಗಿ ಕಾರ್ಯ ನಿರ್ವಹಿಸಿರುವ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು. ಅದು ಸಹಜ ನ್ಯಾಯ.
ಬರೀ ಮೇಲ್ವರ್ಗದವರೇ ಅನುಭವಿಸುತ್ತಿರುವ ಮುಖ್ಯಮಂತ್ರಿ ಹುದ್ದೆಯನ್ನು ಸಮಾಜದ ಅವಕಾಶ ವಂಚಿತ ಸಮುದಾಯಕ್ಕೆ ನೀಡುವುದು ಸಾಮಾಜಿಕ ನ್ಯಾಯ. ಕಾಂಗ್ರೆಸ್ ಸಾಮಾಜಿಕ ನ್ಯಾಯ ಪಾಲಿಸಲೇ ಬೇಕೆಂದಾದರೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಲೇಬೇಕು.
ಏಕಕಾಲಕ್ಕೆ ಇಬ್ಬರಿಗೂ ಇರುವ ಒಂದೇ ಒಂದು ಹುದ್ದೆ ನೀಡಲಾಗದು. ಒಬ್ಬರಿಗೆ ನೀಡಿ ಈ ನಿರ್ಣಾಯಕ ಹಂತದಲ್ಲಿ ಹಿಂದುಳಿದ ವರ್ಗದ ಅಥವಾ ದಲಿತ ಸಮುದಾಯದ ವಿರೋಧ ಕಟ್ಟಿಕೊಳ್ಳಲು ಕಾಂಗ್ರೆಸ್ ತಯಾರಿಲ್ಲ.
ಪರಸ್ಪರ ಬೆಂಬಲ ನೀಡಬೇಕು: ನೂತನ ಸೂತ್ರದಂತೆ ಇದುವರೆಗೆ ಪ್ರತಿ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಮೊದಲ ಮುಖ್ಯಮಂತ್ರಿ ಹುದ್ದೆಗೆ ಏರುತ್ತಾರೆ. ಅವರಿಗೆ ಮತ್ತೊಬ್ಬ ಆಕಾಂಕ್ಷಿ ಮಲ್ಲಿಕಾರ್ಜುನ ಖರ್ಗೆ ಅವರು ಸಂಪೂರ್ಣ ಬೆಂಬಲ ನೀಡುತ್ತಾರೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಉಭಯ ನಾಯಕರೂ ಒಟ್ಟಾಗಿ ಶ್ರಮಿಸಿ ಕರ್ನಾಟಕದಿಂದ 20ಕ್ಕೂ ಹೆಚ್ಚು ಕಾಂಗ್ರೆಸ್ ಲೋಕಸಭಾ ಸದಸ್ಯರನ್ನು ಆಯ್ಕೆ ಮಾಡಿಕಳಿಸುವ ಜವಾಬ್ದಾರಿ ಹೊರುತ್ತಾರೆ.
ಈ ಸೂತ್ರದಿಂದ ಮುಖ್ಯಮಂತ್ರಿ ಹುದ್ದೆಗೆ ಅತ್ಯಂತ ಅರ್ಹರಾಗಿರುವ ಇಬ್ಬರಿಗೂ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಜತೆಗೆ ಸಹಜ ನ್ಯಾಯ ಮತ್ತು ಸಾಮಾಜಿಕ ನ್ಯಾಯ ಎರಡನ್ನೂ ಪಾಲಿಸಿದಂತಾಗುತ್ತದೆ ಎಂಬ ಲೆಕ್ಕಾಚಾರ ಹೈಕಮಾಂಡ್ನದ್ದು. ಈ ಸೂತ್ರವನ್ನು ಬಹಿರಂಗಪಡಿಸಿ ಹೊಸದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಸಿದ್ದರಾಮಯ್ಯ ಮತ್ತು ಖರ್ಗೆ ಜತೆ ಅನೌಪಚಾರಿಕ ಮೌಖಿಕ ಒಪ್ಪಂದ ಮಾಡಿಕೊಳ್ಳಲಿದೆ ಹೈಕಮಾಂಡ್.
ಮುನ್ಸೂಚನೆ: ಈ ಬಗ್ಗೆ ಹೈಕಮಾಂಡ್ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಹುದ್ದೆ ಪ್ರಬಲ ಆಕಾಂಕ್ಷಿ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಮುನ್ಸೂಚನೆ ನೀಡಿದೆ. ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿರುವ ಅರ್ಧ ಡಜನ್ ಪ್ಲಸ್ ನಾಯಕರಿಗೂ ದೆಹಲಿಗೆ ಬಾರದಂತೆಯೂ, ಈಗಾಗಲೇ ದೆಹಲಿಗೆ ಬಂದಿರುವ ಅತ್ಯುತ್ಸಾಹಿ ಆಕಾಂಕ್ಷಿಗಳಿಗೆ ಬೆಂಗಳೂರಿಗೆ ಹಿಂತಿರುಗುವಂತೆಯೂ ಹೈಕಮಾಂಡ್ ಸೂಚಿಸಿದೆ.
ಸಿದ್ದು ಶಾಸಕಾಂಗ ಪಕ್ಷದ ನಾಯಕ
ಪ್ರತಿಪಕ್ಷ ನಾಯಕನಾಗಿ ಕಾರ್ಯ ನಿರ್ವಹಿಸುತ್ತಿರುವ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲು ಮುಂದಾಗಿರುವ ಹೈಕಮಾಂಡ್, ಶುಕ್ರವಾರ ಬೆಂಗಳೂರಿನಲ್ಲಿ ನಡೆಯುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನ ಆಯ್ಕೆ ಮಾಡುವ ಔಪಚಾರಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ.
ಈ ಕಾರ್ಯಕ್ಕಾಗಿ ಪಕ್ಷದ ಚುನಾವಣಾ ವೀಕ್ಷಕರಾಗಿರುವ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ, ಮಧುಸೂದನ್ ಮಿಸ್ತ್ರಿ ಮತ್ತು ಅಂಬಿಕಾ ಸೋನಿ ಶುಕ್ರವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮಧ್ಯಾಹ್ನ 12ಕ್ಕೆ ನಿಗದಿಯಾಗಿದೆ. ಈ ಸಭೆಯಲ್ಲಿ ವೀಕ್ಷಕರು ಶಾಸಕರ ಅಭಿಪ್ರಾಯ ಪಡೆದು ವಾಪಾಸಾಗಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ವರದಿ ಸಲ್ಲಿಸುತ್ತಾರೆ.
ಕೋರ್ ಕಮಿಟಿ ಸಭೆ ನಂತರ ಸೋನಿಯಾ ಗಾಂಧಿಅವರೇ ಕರ್ನಾಟಕದ ನೂತನ ಮುಖ್ಯಮಂತ್ರಿಯನ್ನು ಪ್ರಕಟಿಸಲಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟವಾಗುತ್ತಲೇ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸತತ ಸಂಪರ್ಕದಲ್ಲಿರುವ ಹೈಕಮಾಂಡ್ ಅಳೆದೂ ತೂಗಿ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಮಾಡಲು ನಿರ್ಧರಿಸಿದೆ.
ಸೋನಿಯಾ ಜತೆ ಚರ್ಚೆ: ಗುರುವಾರ ಕರ್ನಾಟಕಕ್ಕೆ ತೆರಳುವ ಮುನ್ನ ಹೈಕಮಾಂಡ್ನ ಚುನಾವಣಾ ವೀಕ್ಷಕರಾದ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ, ಕರ್ನಾಟಕ ಉಸ್ತುವಾರಿ ಮಧುಸೂದನ್ ಮಿಸ್ತ್ರಿ ಹಾಗೂ ಅಂಬಿಕಾ ಸೋನಿ ಅವರು ಸೋನಿಯಾ ಗಾಂಧಿ ಅವರೊಂದಿಗೆ ಸುಮಾರು 40 ನಿಮಿಷ ಸಮಾಲೋಚಿಸಿದರು. ಗೊಂದಲ, ಅತೃಪ್ತಿ, ಅಸಮಾಧಾನಗಳಿಲ್ಲದಂತೆ ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿಕೊಂಡು ಬರಲು ಸೋನಿಯಾ ಗಾಂಧಿ ಸೂಚಿಸಿದ್ದಾರೆ. ನಂತರ ಸರ್ಕಾರ ರಚನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ವೀಕ್ಷಕರ ತಂಡ ಮತ್ತೊಂದು ಸುತ್ತು ಬೆಂಗಳೂರಿಗೆ ತೆರಳಲಿದೆ.
ಸಿದ್ದರಾಮಯ್ಯ ಕೇಂದ್ರ ಸಚಿವರಾಗಬಹುದು!
ಸಿದ್ದರಾಮಯ್ಯ ಮೂವತ್ತು ತಿಂಗಳ ಕಾಲ ಮುಖ್ಯಮಂತ್ರಿಯಾಗಲಿದ್ದಾರೆ. ಅದಾದ ನಂತರ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗುತ್ತಾರೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದರೆ, ಮುಖ್ಯಮಂತ್ರಿ ಸ್ಥಾನ ತೊರೆಯುವ ಸಿದ್ದರಾಮಯ್ಯ ಕೇಂದ್ರ ಸಚಿವರಾಗಬಹುದು. ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿರುವ ಅವರು ರಾಜ್ಯಸಭೆಗಾದರೂ ಪ್ರವೇಶ ಪಡೆಯಬಹುದು. ಆ ಆಯ್ಕೆ ಸಿದ್ದರಾಮಯ್ಯ ಅವರಿಗೆ ಸೇರಿದ್ದು.
ರೇಣುಕಾಪ್ರಸಾದ್ ಹಾಡ್ಯ