ಪ್ರಧಾನ ಸುದ್ದಿ

ಶತಮಾನ ಶಾಲೆಗಳ ದಾಖಲೀಕರಣ ಎಂದು?

ಕ.ಪ್ರ. ವಾರ್ತೆ  ಧಾರವಾಡ  ಮೇ 13
ನಾಡು ನುಡಿಯಲ್ಲಿ ಅಕ್ಷರ ಕ್ರಾಂತಿಯನ್ನುಂಟು ಮಾಡಿ ನೂರು ವಸಂತಗಳನ್ನು ಪೂರೈಸಿ ಇಂದಿಗೂ ಜ್ಞಾನ ದಾಸೋಹದ ಕೈಂಕರ್ಯದಲ್ಲಿ ಮುನ್ನಡೆದಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಹೆಜ್ಜೆ ಗುರುತುಗಳ ದಾಖಲೀಕರಣದ ಕಾರ್ಯ ನೆನೆಗುದಿಗೆ ಬಿದ್ದಿದೆ.
ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ಶೈಕ್ಷಣಿಕ ವಲಯದ ಅಧೀನದಲ್ಲಿನ ಶತಮಾನ ಕಂಡ ಒಂಬತ್ತು ಶೈಕ್ಷಣಿಕ ಜಿಲ್ಲೆಗಳಲ್ಲಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಚರಿತ್ರೆಯನ್ನು ದಾಖಲೀಕರಿಸುವ ಯೋಜನೆ ಕಳೆದ 2011ರಿಂದಲೇ ಆರಂಭವಾಗಿದ್ದು, ಇನ್ನೂ ಮುಕ್ತಾಯದ ಹಂತಕ್ಕೆ ಬಂದಿಲ್ಲ. ಜನಮನದಲ್ಲಿ ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸಲು ಹಾಗೂ ನಿರಂತರ ಕನ್ನಡ ಶಾಲೆಗಳನ್ನು ತೆರೆಯಲು ಡೆಪ್ಯೂಟಿ ಚೆನ್ನಬಸಪ್ಪನವರು ತಮ್ಮ ಕೊನೆಯ ಕ್ಷಣಗಳವರೆಗೂ ಶ್ರಮವಹಿಸಿದ್ದೀಗ ಇತಿಹಾಸ. ಆ ನೆಲೆಯಲ್ಲಿ ಹುಟ್ಟಿಕೊಂಡ ಶಾಲೆಗಳೆಲ್ಲವೂ ಈಗ ಶತಮಾನ ಪೂರೈಸಿವೆ.

ಸ್ಥಗಿತಗೊಂಡಿದೆ: ಈ ನಿಟ್ಟಿನಲ್ಲಿ ಬಿಜಾಪುರ, ಬಾಗಲಕೋಟೆ, ಬೆಳಗಾವಿ, ಕಾರವಾರ, ಹಾವೇರಿ, ಗದಗ ಮತ್ತು ಧಾರವಾಡ ಸೇರಿದಂತೆ ಚಿಕ್ಕೋಡಿ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಗಳಲ್ಲಿಯ ಪ್ರತಿಯೊಂದೂ ಶತಮಾನ ಪೂರೈಸಿದ ಶಾಲೆಗಳ ಕುರಿತು ಪ್ರತಿ ತಾಲೂಕಿಗೆ ಒಂದು ಚಾರಿತ್ರಿಕ ದಾಖಲಾತಿ ಗ್ರಂಥವನ್ನು ಹೊರತರಲು ಇಲಾಖೆಯ ಅಪರ ಆಯುಕ್ತರಾಗಿದ್ದ ವೆಂಕಟೇಶ ಮಾಚಕನೂರ ಅವರು 2011ರ ಜನವರಿ 9ರಂದು ಸುತ್ತೋಲೆ ಹೊರಡಿಸಿದ್ದರು. ಅಂತೆಯೇ, ಈ ವಲಯದಲ್ಲಿ ಒಟ್ಟು 1,324 ಪ್ರಾಥಮಿಕ ಹಾಗೂ 20ಕ್ಕೂ ಹೆಚ್ಚು ಪ್ರೌಢಶಾಲೆಗಳು ಶತಮಾನ ಪೂರೈಸಿವೆ ಎಂದು ಉಪ ನಿರ್ದೇಶಕರು ಮಾಹಿತಿ ನೀಡಿದ್ದರು. ಮೊದಲ ಹಂತದಲ್ಲಿ ಪ್ರತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದ ಸಮಿತಿಯು ಶತಮಾನ ಕಂಡ ಶಾಲೆಗಳ ಸಮಗ್ರ ಮಾಹಿತಿ ಸಂಗ್ರಹಿಸಿದ್ದು, 9 ಜಿಲ್ಲೆಗಳ 59 ತಾಲೂಕುಗಳಿಗೆ ಪ್ರತ್ಯೇಕ ಶತಮಾನ ಕಂಡ ಶಾಲೆಗಳ ದಾಖಲೀಕರಣ ಗ್ರಂಥವನ್ನು ಹೊರ ತರಲು ಚಿಂತಿಸಲಾಗಿತ್ತು. ಎಲ್ಲ ಗ್ರಂಥಗಳಿಗೂ ಏಕರೂಪದ ಮುಖಪುಟವನ್ನು ಸಿದ್ಧಗೊಳಿಸಲು ಸಹ ಆಯುಕ್ತರು ಯೋಚಿಸಿದ್ದರು. ಶಾಲೆಯ ಇತಿಹಾಸ, ಶಾಲೆಯನ್ನು ಮುನ್ನಡೆಸಿದ ಶಿಕ್ಷಕ ವೃಂದ ಹಾಗೂ ಶಾಲೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಉಪಾಧ್ಯಾಯರು, ಜತೆಗೆ ವಿದ್ಯಾರ್ಥಿಗಳು ಇಂದಿಗೂ ನೆನೆಸುತ್ತಿರುವ ಆದರ್ಶ ಶಿಕ್ಷಕರು, ಶಾಲೆಗಾಗಿ ಆಸ್ತಿ, ಇತ್ಯಾದಿ ದಾನ ಮಾಡಿದ ಗಣ್ಯ ನಾಗರಿಕರು, ಶಾಲೆಯಲ್ಲಿ ಕಲಿತು ಈಗ ಉನ್ನತ ಸ್ಥಾನದಲ್ಲಿರುವ ವಿದ್ಯಾರ್ಥಿಗಳು, ಶಾಲೆಯ ಬಗ್ಗೆ ಹಿರಿಯರು, ಊರ ನಾಗರಿಕರ ಅನಿಸಿಕೆಗಳು ಹಾಗೂ ಶಾಲೆಯ ಇಂದಿನ ಸ್ಥಿತಿಗತಿ ಅಂಶಗಳ ಕುರಿತು ದಾಖಲೀಕರಣವನ್ನು ಕೈಕೊಳ್ಳಲು ಮತ್ತು ಪ್ರತಿಯೊಂದು ಶಾಲೆಯ ಬಗೆಗೆ 10 ರಿಂದ 12 ಪುಟಗಳಷ್ಟು ಪರಿಪೂರ್ಣ ಮಾಹಿತಿ ಒದಗಿಸಲೂ ಆಯುಕ್ತರು ಆದೇಶಿಸಿದ್ದರು. ಇಲ್ಲಿ ಐತಿಹಾಸಿಕವೆನಿಸುವ ದಾಖಲೆಗಳನ್ನು, ಛಾಯಾ ಚಿತ್ರಗಳನ್ನು ಸಂಗ್ರಹಿಸಿ ಪ್ರಕಟಿಸುವ ಕಾರ್ಯವೂ ನಡೆದಿತ್ತು. ಆದರೆ, ವೆಂಕಟೇಶ ಮಾಚನಕೂರ ಅವರು ನಿವೃತ್ತಿಯಾದ ನಂತರ ಈ ಮಹತ್ತರ ಕಾರ್ಯ ಸ್ಥಗಿತಗೊಂಡು ಬಿಟ್ಟಿದೆ.
ಡಯಟ್‌ನ 150ನೇ ವರ್ಷಾಚರಣೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್, ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶತಮಾನ ಕಂಡ ಶಾಲೆಗಳ ದಾಖಲೀಕರಣ ಕಾರ್ಯ ಪೂರ್ತಿಗೊಳಿಸಲು ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದ್ದರು. ಆದರೆ, ಈ ಕೆಲಸ ಮಾತ್ರ ನೆನೆಗುದಿಗೆ ಬಿದ್ದಿದೆ. ಪ್ರಸ್ತುತ ಇರುವ ಅಪರ ಆಯುಕ್ತ ಎ.ಎನ್. ಪಾಟೀಲರಾದರೂ ಈ ಕುರಿತು ಮುತುವರ್ಜಿ ವಹಿಸಿ ಈ ಯೋಜನೆಗೆ ಮರು ಜೀವನ ನೀಡುವ ಅಗತ್ಯವಿದೆ.
ನೂರು ವರ್ಷ ಕಂಡ ಶಾಲೆಗಳು ನಡೆದು ಬಂದ ದಾರಿ ಹಾಗೂ ಈ ಶಾಲೆಗಳಲ್ಲಿ ಕೆಲಸ ನಿರ್ವಹಿಸಿದ ಶ್ರದ್ಧಾವಂತ ಅನೇಕ ಸೃಜನಶೀಲ ಶಿಕ್ಷಕರ ಸೇವೆಯನ್ನು ಸ್ಮರಿಸಿಕೊಳ್ಳುವ ಆವಶ್ಯಕತೆಯಿದೆ. ನಮ್ಮ ಹಿಂದಿನ ಪೀಳಿಗೆಯ ಶಿಕ್ಷಕರ ಶ್ರದ್ಧೆ, ದುಡಿಮೆ, ಅವರ ಕ್ರಿಯಾಶೀಲ-ಸೃಜನಶೀಲ ಬೋಧನೆಯ ಕಾರ್ಯ ಚಟುವಟಿಕೆ ಹಾಗೂ ಶಾಲೆಯ ಅಂತರಂಗ-ಬಹಿರಂಗಗಳನ್ನು ಕಟ್ಟಿ ಬೆಳೆಸುವಲ್ಲಿ ಅವರು ವಹಿಸಿದ ಪಾತ್ರ ಹೊಸ ಪೀಳಿಗೆಗೆ ಮಾದರಿ ಆಗಬೇಕಿದೆ. ಶಿಕ್ಷಣ ಸಂವರ್ಧನೆಯ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮಹನೀಯರಿಗೆ, ಸದಾ ವಿದ್ಯಾರ್ಥಿಗಳಾಗಿರಬೇಕಾದ ಅಧ್ಯಾಪಕ ಬಳಗಕ್ಕೆ, ಜೊತೆಗೆ ಸಂಶೋಧನಾ ದೃಷ್ಟಿಯಿಂದ ವಿದ್ಯಾರ್ಥಿ ಸಮುದಾಯಕ್ಕೆ ಈ ಶತಮಾನ ಕಂಡ ಶಾಲೆಗಳ ಹೊತ್ತಿಗೆಗಳು ಮಾರ್ಗದರ್ಶಿಯಾಗಲಿವೆ. ಆದ್ದರಿಂದ ಈ ದಾಖಲೀಕರಣ ಕೆಲಸ ಆದಷ್ಟೇ ಬೇಗ ಆಗಲಿ.
- ವೆಂಕಟೇಶ ಮಾಚಕನೂರ, ನಿವೃತ್ತ ಅಪರ ಆಯುಕ್ತರು

- ಬಸವರಾಜ ಹಿರೇಮಠ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್