ಕನ್ನಡಪ್ರಭ ವಾರ್ತೆ ಬೆಂಗಳೂರು ಮೇ 17
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ 29 ಸದಸ್ಯರ ಸಚಿವ ಸಂಪುಟ ಶನಿವಾರ ಅಸ್ತಿತ್ವಕ್ಕೆ ಬರಲಿದೆ. ಅಳೆದು- ತೂಗಿ ಸಚಿವರ ಪಟ್ಟಿಯನ್ನು ಅಖೈರುಗೊಳಿಸಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಸಂಪುಟದಿಂದ ಹೊರಗೆ ಉಳಿಯಲು ನಿರ್ಧರಿಸಿದ್ದಾರೆ.
ಇದರೊಂದಿಗೆ ಸಿದ್ದರಾಮಯ್ಯ ಸಂಪುಟದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾಗುತ್ತದೆ ಎಂಬ ಊಹಾಪೋಹಕ್ಕೆ ಕೊನೆಗೂ ತೆರೆ ಬಿದ್ದಿದೆ. ಶನಿವಾರ ಬೆಳಗ್ಗೆ 10.30ಕ್ಕೆ ರಾಜಭವನದಲ್ಲಿರುವ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಖಾತೆ ಹಂಚಿಕೆ ಸಾಹಸಕ್ಕೆ ಸಿಎಂ ಸಿದ್ದರಾಮಯ್ಯ ಕೈ ಹಾಕಲಿದ್ದಾರೆ.
ಯಾರ್ಯಾರಿಗೆ ಯಾವ್ಯಾವ ಖಾತೆ ನೀಡಬೇಕೆಂಬುದಕ್ಕೂ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಸಿದ್ದರಾಮಯ್ಯನವರಿಗೆ ಸಂಪೂರ್ಣ ಜವಾಬ್ದಾರಿ ನೀಡಿದ್ದು, 'ವಲಸಿಗ' ಕಾಂಗ್ರೆಸ್ಸಿಗರೇ ಈ ಬಾರಿ ಪ್ರಮುಖ ಖಾತೆಗಳನ್ನು ಪಡೆಯುವ ಸಾಧ್ಯತೆ ಇದೆ. 'ಕನ್ನಡಪ್ರಭ'ಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಬೆಂಗಳೂರಿನ ನಾಲ್ವರು ಶಾಸಕರಿಗೆ ಈ ಬಾರಿ ಸಚಿವರಾಗುವ ಅವಕಾಶ ಒದಗಿ ಬಂದಿದೆ.
ಕಾಗೋಡು ಮುನಿಸು: ಕಾಗೋಡು ತಿಮ್ಮಪ್ಪ ಸಚಿವ ಸಂಪುಟದಲ್ಲಿ ತಮಗೆ ಸ್ಥಾನ ಸಿಗದೇ ಇರುವ ಬಗ್ಗೆ ಮುನಿಸಿಕೊಂಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಚಿವರಾಗುವ ಆಕಾಂಕ್ಷೆ ವ್ಯಕ್ತಪಡಿಸಿದ್ದ ಅವರನ್ನು ಸ್ಪೀಕರ್ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ವ್ಯಕ್ತಪಡಿಸಿದ್ದಾರೆ.ಇದಕ್ಕೆ ವಯಸ್ಸು ಹಾಗೂ ಆರೋಗ್ಯದ ಕಾರಣ ನೀಡಿರುವ ಕಾಗೋಡು ತಿಮ್ಮಪ್ಪ ಸಂಪುಟದಲ್ಲಿ ಅವಕಾಶ ನೀಡುವುದಾದರೆ ನೀಡಿ. ಆದರೆ ಸ್ಪೀಕರ್ ಹುದ್ದೆ ಬೇಡ ಎಂದು ಹೇಳಿದ್ದಾರೆ. ಆದಾಗಿಯೂ ಅವರನ್ನು ಓಲೈಸುವ ಕಾರ್ಯ ಮುಂದುವರಿದಿದೆ. ಒಂದು ವೇಳೆ ಕಾಗೋಡು ಸ್ಪೀಕರ್ ಹುದ್ದೆ ಒಪ್ಪದಿದ್ದರೆ, ಮುದ್ದೇಬಿಹಾಳ್ ಶಾಸಕ ಸಿ.ಎಸ್. ನಾಡಗೌಡ ಅವರನ್ನು ಸ್ಪೀಕರ್ ಹುದ್ದೆ ಮೇಲೆ ಕುಳ್ಳಿರಿಸಬಹುದು. ಕಾಗೋಡು ಸಮಾಧಾನಕ್ಕಾಗಿ ನಾಡಗೌಡರು ಸಚಿವ ಸ್ಥಾನ ತ್ಯಾಗ ಮಾಡುವ ಸಾಧ್ಯತೆಯೂ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಸಂಭಾವ್ಯ ಸಚಿವರ ಪಟ್ಟಿ
-ಪ್ರಕಾಶ್ ಹುಕ್ಕೇರಿ ಬೆಳಗಾವಿ
-ಸತೀಶ್ ಜಾರಕಿಹೊಳಿ ಬೆಳಗಾವಿ
-ಶ್ಯಾಮನೂರು ಶಿವಶಂಕರಪ್ಪ ದಾವಣಗೆರೆ
-ಸಿ.ಎಸ್. ನಾಡಗೌಡ ವಿಜಾಪುರ
-ಎಂ.ಬಿ. ಪಾಟೀಲ್ ವಿಜಾಪುರ
-ಖಮರುಲ್ ಇಸ್ಲಾಂ ಗುಲ್ಬರ್ಗ
-ಡಾ. ಶರಣ್‌ಪ್ರಕಾಶ್ ಪಾಟೀಲ್ ಗುಲ್ಬರ್ಗ
-ರಮಾನಾಥ ರೈ ಮಂಗಳೂರು
-ಆರ್.ವಿ. ದೇಶಪಾಂಡೆ ಉತ್ತರ ಕನ್ನಡ
-ಎಚ್.ಕೆ. ಪಾಟೀಲ್ ಗದಗ
-ರಾಮಲಿಂಗಾ ರೆಡ್ಡಿ ಬೆಂಗಳೂರು
-ಕೆ.ಜೆ. ಜಾರ್ಜ್ ಬೆಂಗಳೂರು
-ಕೃಷ್ಣಭೈರೇಗೌಡ ಬೆಂಗಳೂರು
-ದಿನೇಶ್ ಗುಂಡೂರಾವ್ ಬೆಂಗಳೂರು
-ಮಹಾದೇವಪ್ರಸಾದ್ ಚಾಮರಾಜನಗರ
-ಎಚ್.ಸಿ. ಮಹಾದೇವಪ್ಪ ಮೈಸೂರು
-ಶ್ರೀನಿವಾಸಪ್ರಸಾದ್ ಮೈಸೂರು
-ಪರಮೇಶ್ವರ ನಾಯಕ್ ಬಳ್ಳಾರಿ
-ಉಮಾಶ್ರೀ ಬಾಗಲಕೋಟೆ
-ಆಂಜನೇಯ ಚಿತ್ರದುರ್ಗ
-ಟಿ.ಬಿ. ಜಯಚಂದ್ರ ತುಮಕೂರು
-ಅಂಬರೀಷ್ ಮಂಡ್ಯ
-ಬಾಬುರಾವ್ ಚಿಂಚನಸೂರ್ ಯಾದಗಿರಿ
-ವೆಂಕಟೇಶ್ ನಾಯಕ್ ರಾಯಚೂರು
-ರಾಜಶೇಖರ್ ಪಾಟೀಲ್ ಹುಮ್ನಾಬಾದ್
-ರಮೇಶ್‌ಕುಮಾರ್ ಕೋಲಾರ
-ಎ. ಮಂಜು ಹಾಸನ
-ಎಚ್.ವೈ. ಮೇಟಿ ಬಾಗಲಕೋಟೆ
-ಶಿವರಾಜ ತಂಗಡಗಿ ಕೊಪ್ಪಳ
ಪರಮೇಶ್ವರ ಮುಂದುವರಿಕೆ
ಸಂಪುಟ ಸೇರದೇ ಇರಲು ನಿರ್ಧರಿಸಿರುವ ಡಾ.ಜಿ. ಪರಮೇಶ್ವರ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯಲು ನಿರ್ಧರಿಸಿದ್ದಾರೆ. ಉಪಮುಖ್ಯಮಂತ್ರಿ ಹುದ್ದೆ ಜತೆಗೆ ಗೃಹ ಹಾಗೂ ಇಂಧನ ಇಲಾಖೆಯನ್ನು ಪರಮೇಶ್ವರ ಬಯಸುತ್ತಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿತ್ತು. ಆದರೆ ಇದನ್ನು ಅಲ್ಲಗಳೆದಿರುವ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯುವುದಾಗಿ ಹೇಳಿದ್ದಾರೆ. ಸಂಪುಟ ಸೇರುವುದಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮುಕ್ತ ಅವಕಾಶ ಕಲ್ಪಿಸಿದ್ದರು. ಆದರೆ ನಾನು ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿದು ಪಕ್ಷ ಸಂಘಟನೆ ಮಾಡುವುದಾಗಿ ಪರಮೇಶ್ವರ ತಿಳಿಸಿದ್ದಾರೆ.
ಡಿಕೆಶಿ, ಬೇಗ್‌ಗೆ ಸಚಿವ ಸ್ಥಾನವಿಲ್ಲ
ಕಾಂಗ್ರೆಸ್ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ಹಾಗೂ ರೋಷನ್ ಬೇಗ್ ಅವರಿಗೆ ಸಚಿವ ಸ್ಥಾನ ನೀಡದೇ ಇರಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಕಳಂಕಿತರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂಬ ಬೇಡಿಕೆಗೆ ಸ್ಪಂದಿಸಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಶುಕ್ರವಾರ ತಡರಾತ್ರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೊನೆಯ ಕ್ಷಣದವರೆಗೂ ಸಚಿವ ಸಂಪುಟ ಸೇರುವುದಕ್ಕೆ ದೆಹಲಿಯಲ್ಲೇ ವಾಸ್ತವ್ಯ ಹೂಡಿದ್ದ ಶಿವಕುಮಾರ್ ಹಾಗೂ ಬೇಗ್ ಸಚಿವ ಸ್ಥಾನಕ್ಕೆ ಹರಸಾಹಸ ನಡೆಸಿದ್ದರು.
ಮೋಟಮ್ಮಗೆ ಸ್ಥಾನವಿಲ್ಲ
ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಅವರಿಗೆ ಸಂಪುಟದಲ್ಲಿ ಅವಕಾಶ ನೀಡಿಲ್ಲ ಎಂದು ತಿಳಿದು ಬಂದಿದೆ. ಅವರ ಬದಲಾಗಿ ತೇರದಾಳ ಶಾಸಕಿ ಉಮಾಶ್ರೀ ಅವರಿಗೆ ಮಹಿಳಾ ಕೋಟಾದಲ್ಲಿ ಸಚಿವ ಪದವಿ ಒಲಿದು ಬಂದಿದೆ.