ಪ್ರಧಾನ ಸುದ್ದಿ

ಜಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: 2,15,000 ಪುಟಗಳ ದಾಖಲೆ ಸಲ್ಲಿಕೆ

Lakshmi R

ಬೆಂಗಳೂರು: ಜಯಲಲಿತಾ ಅಕ್ರಮ ಆಸ್ತಿಗಳಿಕೆ ಪ್ರಕರಣದ ವಿಶೇಷ ಕೋರ್ಟ್ನ ತೀರ್ಪು ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಕಡತಗಳನ್ನು ಇಂದು ಕರ್ನಾಟಕ ಹೈಕೋರ್ಟ್ನಲ್ಲಿ ಸಲ್ಲಿಸಲಾಯಿತು.

18 ವರ್ಷಗಳಿಂದ ನಡೆಯುತ್ತಿರುವ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಅಣ್ಣ ದ್ರಾವಿಡ ಮುನ್ನಟ್ರ ಕಳಗಂ ಪಕ್ಷದ ಕಾರ್ಯದರ್ಶಿಯಾಗಿರುವ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ, ಬೆಂಗಳೂರು ವಿಶೇಷ ನ್ಯಾಯಾಲಯ 4 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ, 100 ಕೋಟಿ ದಂಡವನ್ನು ವಿಧಿಸಿತ್ತು.

ಈ ಸಂಬಂಧ ಜಯಲಲಿತಾ ಅವರಿಗೆ ರಾಜ್ಯ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಜಯಲಲಿತಾ ಅವರಿಗೆ ಜಾಮೀನು ನೀಡಿತ್ತು. ಈ ಸಂದರ್ಭ ಮೇಲ್ಮನವಿ ಅರ್ಜಿ ಸಲ್ಲಿಕೆಗೆ ಸಂಬಂಧಿತ ದಾಖಲೆಗಳನ್ನು ರಾಜ್ಯ ಹೈಕೋರ್ಟ್ಗೆ 3 ತಿಂಗಳಿನೊಳಗಾಗಿ ಸಂಬಂಧಿತ ದಾಖಲೆಗಳನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್, ಜಯಲಲಿತಾ ಪರ ವಕೀಲರಿಗೆ ಆದೇಶ ಹೊರಡಿಸಿತ್ತು.

ಅದರಂತೆ ಇಂದು ರಾಜ್ಯ ಹೈಕೋರ್ಟ್ನಲ್ಲಿ ಮೇಲ್ಮನವಿಗಾಗಿ ಸಂಬಂಧಿತ ದಾಖಲೆ ಹಾಗೂ ಕಡತಗಳನ್ನು ಜಯ ಪರ ವಕೀಲರು ಸಲ್ಲಿಸಿದ್ದಾರೆ. ಪೇಪರ್ ಬುಕ್ ರೂಪದಲ್ಲಿ ದಾಖಲೆಗಳನ್ನು ತಯಾರಿಸಲಾಗಿದೆ.

ಕಳೆದ 2 ತಿಂಗಳಿನಿಂದ ಜಯಲಲಿತಾ ಸೇರಿದಂತೆ 4 ಮಂದಿ ಆರೋಪಿಗಳ ಹಿರಿಯ ವಕೀಲರಾದ ಕುಮಾರ್, ಸೆಂಥಿಲ್, ಅಶೋಕನ್, ಆರ್.ಅನ್ಬುಕರಸು, ದಿವಾಕರ್, ಸೆಲ್ವಕುಮಾರು ಒಳಗೊಂಡ ತಂಡ ಈ ಕಡತಗಳ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದರು ಎನ್ನಲಾಗಿದೆ.

ಇಂದು ಹೈಕೋರ್ಟ್ನಲ್ಲಿ ಸಲ್ಲಿಸಲಾಗಿರುವ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿ, ಅವುಗಳಿಗೆ ನಿಗಧಿತ ಸಂಖ್ಯೆಗಳನ್ನು ನೀಡಲು 2 ದಿನಗಳು ಆಗಬಹುದೆಂದು ಮೂಲಗಳು ತಿಳಿಸಿವೆ. ಇದರಿಂಗಾಗಿ ಮುಂಬರುವ 17ನೇ ತಾರಿಖಿನಿಂದ ಜಯಲಲಿತಾ  ಸೇರಿದಂತೆ 4 ಮಂದಿ ಆರೋಪಿಗಳ ಮೇಲ್ಮನವಿ ಅರ್ಜಿ ಸಂಬಂಧಿತ ವಿಚಾರಣೆ ಪ್ರಾರಂಭವಾಗುವ ಸಾಧ್ಯತೆಗಳಿವೆ.

SCROLL FOR NEXT