ಮುಂಬೈ: ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಮುಂದುವರಿಯುತ್ತಿದ್ದಂತೆ, ಶಿವಸೇನಾ ನಾಯಕ ಅನಿಲ್ ದೇಸಾಯಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಅನಿಲ್ ದೇಸಾಯಿ ಅವರು ದೆಹಲಿಗೆ ಪ್ರಯಾಣ ಬೆಳೆಸಿರುವ ಕಾರಣ, ಮೋದಿ ಸಚಿವ ಸಂಪುಟದಲ್ಲಿ ಅವರಿಗೆ ಸ್ಥಾನ ಲಭಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಯಾವುದೇ ಸ್ಪಷ್ಟ ವಿವರಗಳು ಲಭಿಸಿಲ್ಲ.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಇಂದು ಬೆಳಗ್ಗೆ ದೆಹಲಿಗೆ ಪ್ರಯಾಣಿಸಿದ್ದು, ದೆಹಲಿಯಲ್ಲಿ ಶಿವಸೇನೆ ಮತ್ತು ಬಿಜೆಪಿ ನಡುವಿನ ಮಾತುಕತೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಆದಾಗ್ಯೂ, ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಿ ಶಿವಸೇನೆ ಸಾಥ್ ನೀಡುವುದರ ಬಗ್ಗೆ ಸದ್ಯ ತೀರ್ಮಾನವಾಗಿಲ್ಲ.
ಭಾನುವಾರ ಬೆಳಗ್ಗೆ ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಪಕ್ಷದ ಸಭೆ ಕರೆದಿದ್ದು, ಮಹಾ ಸರ್ಕಾರದ ವಿಶ್ವಾಸಮತದ ವೇಳೆ ಬಿಜೆಪಿಗೆ ಬೆಂಬಲ ನೀಡಬೇಕೋ ಇಲ್ಲವೋ ಎಂಬುದರ ಬಗ್ಗೆ ಚರ್ಚೆ ನಡೆಸಿದೆ.
ಏತನ್ಮಧ್ಯೆ, ಮಹಾ ಸರ್ಕಾರ ರಚಿಸಲು ಬಿಜೆಪಿ ಎನ್‌ಸಿಪಿ ಜತೆ ಮೈತ್ರಿ ಮಾಡಿಕೊಳ್ಳುವುದಾದರೆ, ಶಿವಸೇನೆ ತಮ್ಮ ನಿರ್ಧಾರವನ್ನು ಸ್ವತಂತ್ರವಾಗಿ ತೆಗೆದುಕೊಳ್ಳಲಿದೆ ಎಂದು ಉದ್ದವ್ ಠಾಕ್ರೆ ಹೇಳಿರುವುದಾಗಿ ಬಲ್ಲಮೂಲವೊಂದು ವರದಿ ಮಾಡಿದೆ.