ನವದೆಹಲಿ: ಎಎಪಿ ಪಕ್ಷದ ಭಿನ್ನಮತೀಯರ ಸಭೆ ನಾಳೆ ಅಂಬೇಡ್ಕರ್ ಜಯಂತಿಯಂದು ನಡೆಯಲಿದ್ದು, ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರು ಕರೆದಿರುವ ಈ ಸಭೆಯಲ್ಲಿ ಪಾಲ್ಗೊಂಡವರಿಗೆ ಏನು ಕ್ರಮ ತೆಗೆದುಕೊಳ್ಳಬೇಕು ಎಂದು ಪಕ್ಷ ಉನ್ನತ ನಿರ್ಧಾರ ಸಮಿತಿಗಳು ನಿರ್ಣಯಿಸಲಿವೆ ಎಂದು ಪಕ್ಷ ಎಚ್ಚರಿಸಿದೆ.
ನಾಳೆ ಗುರಗಾಂವ್ ನಲ್ಲಿ ನಡೆಯಲಿರುವ ಸ್ವರಾಜ್ ಸಂವಾದ ಸಭೆಯ ನಂತರ ಮುಂದಿನ ನಡೆ ಏನೆಂಬುದನ್ನು ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ನಿರ್ಧರಿಸಲಿದೆ ಎಂದು ಪಕ್ಷದ ಹಿರಿಯ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ.
"ಸ್ವರಾಜ್ ಸಂವಾದ ಪಕ್ಷದ ಕಾರ್ಯಕ್ರಮವಲ್ಲ. ಈ ಸಭೆಯ ನಂತರ ಮುದಿನ ಕ್ರಮದ ಬಗ್ಗೆ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ನಿರ್ದರಿಸಲಿದೆ" ಎಂದು ಸಿಂಗ್ ವರದಿಗಾರರಿಗೆ ತಿಳಿಸಿದ್ದಾರೆ.
ರಾಷ್ಟ್ರೀಯ ಕಾರ್ಯಕಾರಿಣಿ ಕಳೆದ ಸಭೆಯಲ್ಲಿ ಪಕ್ಷದ ವಿರುದ್ಧ ವ್ಯತಿರಿಕ್ತ ಹೇಳಿಕೆ ನೀಡುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ರಾಜಕೀಯ ವ್ಯವಹಾರಗಳ ಸಮಿತಿಗೆ ಅಧಿಕಾರ ನೀಡಿದೆ.
ಪಕ್ಷದ ಎರಡು ಪ್ರಬಲ ಸಮಿತಿಗಳಿಂದ ಉಚ್ಛಾಟಿತಗೊಂಡ ಭೂಷಣ್ ಮತ್ತು ಯಾದವ್ ನಾಳೆ ಸಭೆಯ ಕಾರ್ಯಸೂಚಿ ಸಿದ್ಧಪಡಿಸಲು ಇಂದು ಜಂಗ್ಪುರದಲ್ಲಿ ಸಭೆ ನಡೆಸಿದ್ದಾರೆ. ವಿವಿಧ ರಾಜ್ಯದ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಆಪ್ ಪಕ್ಷದ ತಿಮಾರ್ಪುರ್ ಶಾಸಕ ಪಂಕಜ್ ಪುಷ್ಕರ್, ಪಕ್ಷದ ಮಾಜಿ ನಾಯಕಿ ಹಾಗು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್, ಬುಡಕಟ್ಟು ಸಮಾಜದ ಕಾರ್ಯಕರ್ತೆ ಸೋನಿ ಸೂರಿ, ಹಕ್ಕುಗಳ ಕಾರ್ಯಕರ್ತೆ ಅರುಣಾ ರಾಯ್ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಎಎಪಿ ಪಕ್ಷದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ೧೦೦ ಕ್ಕು ಹೆಚ್ಚು ಜನ ಅಭ್ಯರ್ಥಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಭಿನ್ನಮತೀಯರ ಬಣ ತಿಳಿಸಿದೆ.