ಪ್ರಧಾನ ಸುದ್ದಿ

ಬಿಜೆಪಿ ಶಾಸಕ ಆನಂದ್ ಸಿಂಗ್‌ಗೆ ಜಾಮೀನು

Lingaraj Badiger

ಬೆಂಗಳೂರು: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ವಿಜಯನಗರ ಬಿಜೆಪಿ ಶಾಸಕ ಆನಂದ್ ಸಿಂಗ್ ಅವರಿಗೆ ಲೋಕಾಯುಕ್ತ ಕೋರ್ಟ್ ಶುಕ್ರವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಆನಂದ್ ಸಿಂಗ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, 5 ಲಕ್ಷ ರುಪಾಯಿ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಮೇಲೆ ಷರತ್ತುಬದ್ಧ ಜಾಮೀನು ನೀಡಿದೆ. ಅಲ್ಲದೆ ದೇಶಬಿಟ್ಟು ಹೋಗದಂತೆ ಮತ್ತು ಸಾಕ್ಷ್ಯ ನಾಶಪಡಿಸುವಂತಿಲ್ಲ ಎಂದು ಕೋರ್ಟ್ ಸೂಚಿಸಿದೆ.

ಏಪ್ರಿಲ್ 9ರಂದು ಲೋಕಾಯುಕ್ತ ವಿಶೇಷ ತನಿಖಾ ತಂಡ ಆನಂದ್ ಸಿಂಗ್ ಅವರನ್ನು ಬಂಧಿಸಿ, ಬೆಂಗಳೂರಿನ ಲೋಕಾಯುಕ್ತ ಕೋರ್ಟ್‌ಗೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಆನಂದ್ ಸಿಂಗ್ ಅವರನ್ನು ಏಪ್ರಿಲ್ 17ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು.

ಈ ಮಧ್ಯೆ, ಜೈಲಿನಲ್ಲಿ ಇದ್ದು ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜಿನಾಮೆ ನೀಡಿದ್ದರು. ಆದರೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಆನಂದ್ ಸಿಂಗ್ ಅವರ ರಾಜಿನಾಮೆಯನ್ನು ಇನ್ನು ಅಂಗೀಕರಿಸಿಲ್ಲ ಮತ್ತು ಸ್ವತಃ ಶಾಸಕರೇ ಬಂದು ರಾಜಿನಾಮೆ ನೀಡಿದರೆ ಮಾತ್ರ ಅಂಗೀಕರಿಸುವುದಾಗಿ ಹೇಳಿದ್ದಾರೆ.

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಆನಂದ್ ಸಿಂಗ್ ವಿರುದ್ಧ ಒಟ್ಟು ಮೂರು ಪ್ರಕರಣಗಳು ದಾಖಲಾಗಿದ್ದು, ಕಳೆದ 2013 ಅಕ್ಟೋಬರ್ 17ರಂದು ಶಾಸಕ ಆನಂದ್ ಸಿಂಗ್ ಅವರನ್ನು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

SCROLL FOR NEXT