ನವದೆಹಲಿ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್(ಎಸ್‌ಪಿಪಿ) ಭವಾನಿಸಿಂಗ್ ಅವರ ನೇಮಕವನ್ನು ಸುಪ್ರೀಂ ಕೋರ್ಟ್ ವಿಸ್ತೃತ ಪೀಠ ಸೋಮವಾರ ಅಸಿಂಧುಗೊಳಿಸಿದೆ. ಆದರೆ ಪ್ರಕರಣದ ತೀರ್ಪಿಗೆ ತಡೆ ನೀಡಲು ನಿರಾಕರಿಸಿದೆ.
ಎಸ್‌ಪಿಪಿ ಭವಾನಿಸಿಂಗ್ ನೇಮಕವನ್ನು ಪ್ರಶ್ನಿಸಿ ಡಿಎಂಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಜಯಲಲಿತಾ ಅವರ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅನ್ನು ನೇಮಿಸುವ ಅಧಿಕಾರ ತಮಿಳುನಾಡು ಸರ್ಕಾರಕ್ಕೆ ಇಲ್ಲ. ಕರ್ನಾಟಕ ಸರ್ಕಾರವೇ ಎಸ್‌ಪಿಪಿ ನೇಮಕ ಮಾಡಬೇಕಿತ್ತು ಎಂದು ಹೇಳಿದೆ. ಅಲ್ಲದೆ ಭವಾನಿ ಸಿಂಗ್ ಬದಲಾಗಿ ಮತ್ತೊಬ್ಬ ಎಸ್ ಪಿಪಿಯನ್ನು ನೇಮಕ ಮಾಡದೇ ಇದ್ದದ್ದು ಮತ್ತು ಈ ಬಗ್ಗೆ ಯಾವುದೇ ಉತ್ತರ ಸಲ್ಲಿಸದೇ ಇದ್ದ ಕರ್ನಾಟಕ ಸರ್ಕಾರದ ಧೋರಣೆಯನ್ನೂ ಸುಪ್ರೀಂಕೋರ್ಟ್ ಟೀಕಿಸಿದೆ.
ಈ ಸಂಬಂಧ ಡಿಎಂಕೆ ನಾಯಕ ಕೆ. ಅನ್ಬುಗನ್ ಮತ್ತು ಕರ್ನಾಟಕ ಸರ್ಕಾರ ಏಪ್ರಿಲ್ 28ರೊಳಗೆ ಹೊಸದಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ಲಿಖಿತ ವಾದ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವಿಚಾರಣೆ ನಡೆಸುವ ಅಗತ್ಯ ಇಲ್ಲ ಎಂದಿರುವ ಕೋರ್ಟ್, ಕರ್ನಾಟಕ ಹೈಕೋರ್ಟ್ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಪ್ರಕಟಿಸಬಹುದು ಎಂದು ನಿರ್ದೇಶನ ನೀಡಿದೆ.
''ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಪ್ರಕರಣವನ್ನು ನಿಷ್ಪಕ್ಷಪಾತವಾಗಿ ಪರಿಗಣಿಸುತ್ತಿಲ್ಲ ಎಂಬ ಆರೋಪವಿದ್ದು, ಅವರನ್ನು ಕೈ ಬಿಡಬೇಕು,'' ಎಂದು ಡಿಎಂಕೆ ಪ್ರಧಾನ ಕಾರ‌್ಯದರ್ಶಿ ಕೆ ಅನ್ಬುಗನ್ ಕೋರಿದ್ದರು.