ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣದ ಮತ್ತೊಬ್ಬ ಆರೋಪಿ, ಲೋಕಾಯುಕ್ತರ ಪುತ್ರ ಅಶ್ವಿನ್ ರಾವ್ ಅವರ ಸ್ವಯಂಘೋಷಿತ ಆಪ್ತ ವಿ.ಭಾಸ್ಕರ್ ಅಲಿಯಾಸ್ 420 ಭಾಸ್ಕರ್‌ನನ್ನು ಕಡೆಗೂ ವಿಶೇಷ ತನಿಖಾ ತಂಡ(ಎಸ್‌ಐಟಿ) ಬುಧವಾರ ಬಂಧಿಸಿದೆ.
ಕಳೆದ ಒಂದು ವಾರದಿಂದ ಭಾಸ್ಕರ್‌ನ ಬಂಧನಕ್ಕೆ ಎಸ್‌ಐಟಿ ಪೊಲೀಸರು ಹರಸಾಹಸ ಪಡುತ್ತಿದ್ದರು. ಆತನಿಗಾಗಿ ಹೊರ ರಾಜ್ಯಗಳಲ್ಲೂ ಶೋಧ ನಡೆಸಿದ್ದ ಎಸ್‌ಐಟಿ ತಂಡ ಇಂದು 420 ಭಾಸ್ಕರ್‌ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಎಸ್‌ಐಟಿ ಅಧಿಕಾರಿಗಳು ಇಂದು ಸಂಜೆ ಭಾಸ್ಕರ್‌ನನ್ನು ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
420 ಭಾಸ್ಕರ್ ಲೋಕಾಯುಕ್ತರೊಂದಿಗಿನ ತನ್ನ ನಂಟಿನ ಬಗ್ಗೆ ಮಾಧ್ಯಮಗಳ ಮುಂದೆ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದ. ಅಲ್ಲದೇ ವಕೀಲರೊಂದಿಗಿನ ಚರ್ಚೆ ಸಂದರ್ಭದಲ್ಲಿ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ. ಈ ಹಿನ್ನೆಲೆಯಲ್ಲಿ ಸೋನಿಯಾ ನಾರಂಗ್ ಅವರು ಲೋಕಾಯುಕ್ತ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಮತ್ತೊಂದೆಡೆ ಲೋಕಾಯುಕ್ತ ಕಚೇರಿ ಲಂಚ ಹಗರಣದಲ್ಲಿ ಆರೋಪಿ ಭಾಗಿಯಾಗಿರುವ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
`ಹಳೇ ಕಾರುಗಳ ಡೀಲರ್ ಆಗಿರುವ ಅಶ್ವಿನ್‍ರಾವ್ ಹಾಗೂ ನನ್ನ ನಡುವೆ ತುಂಬಾ ಆತ್ಮೀಯ ಸಂಬಂಧ ಇತ್ತು. ಅವರಿಗೆ ಪಾಸ್ ಪೋರ್ಟ್ ಮಾಡಿಸಿಕೊಡುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ. ಅವರು ಕೂಡಾ ಯಾವುದಾದರೂ ಕಾರಿನ ವ್ಯವಹಾರ ಇದ್ದರೆ ನನಗೆ ಹೇಳುತ್ತಿದ್ದರು. ಲೋಕಾಯುಕ್ತ ಸಂಸ್ಥೆಯಲ್ಲಿ ಜವಾನನಿಂದ ದಿವಾನನವರೆಗೆ ಭ್ರಷ್ಟರಿದ್ದಾರೆ. ಹಣ ನೀಡಿದರೆ, ಯಾರ ಕಚೇರಿ ಮೇಲೆ ಬೇಕಾದರೂ ದಾಳಿ ಮಾಡುತ್ತಾರೆ. ಲೋಕಾಯುಕ್ತದಲ್ಲಿರುವ ಎಸ್ಪಿ, ಡಿವೈಎಸ್ಪಿಗಳು, ಸರ್ಕಾರಿ ಅಧಿಕಾರಿಗಳು ಇರುವ ಜಾಗಕ್ಕೆ ತೆರಳಿ ಬಂಧಿ ಸುತ್ತಾರೆ. ಅಥವಾ ಬೇಕೆಂದ ಭ್ರಷ್ಟ ಅಧಿಕಾರಿಗಳನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಮಾತುಕತೆ ನಡೆಸುತ್ತಾರೆ' ಎಂದು ಭಾಸ್ಕರ ಹೇಳಿಕೊಂಡಿದ್ದ.