ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಲೋಕಾಯುಕ್ತ ನಾಯಮೂರ್ತಿ ವೈ.ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಅವರ ಜಾಮೀನು ಅರ್ಜಿಯನ್ನು ಲೋಕಾಯುಕ್ತ ವಿಶೇಷ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಪ್ರಕರಣದ ಮೊದಲನೇ ಆರೋಪಿ ಅಶ್ವಿನ್ ರಾವ್ ಪರ ವಕೀಲ ಸಂದೀಪ್ ಪಾಟೀಲ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.
ಇಂದು ಜಾಮೀನು ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿರುವ ಕೋರ್ಟ್, ಅಶ್ವಿನ್ ರಾವ್ ಹಾಗೂ ಪ್ರಕರಣದ ಮತ್ತೊಬ್ಬ ಆರೋಪಿ ವಿ.ಭಾಸ್ಕರ್‌ಗೆ ಆಗಸ್ಟ್ 27ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್ ಕೃಷ್ಣಮೂರ್ತಿ ಎಂಬುವರು ದಾಖಲಿಸಿದ್ದ ದೂರಿನಲ್ಲಿ ಆರೋಪಿಯಾಗಿರುವ ಅಶ್ವಿನ್‍ರಾವ್ ಅವರನ್ನು ವಿಶೇಷ ತನಿಖಾ ತಂಡ ಬಂಧಿಸಿ ವಿಚಾರಣೆ ನಡೆಸುತ್ತಿದೆ.