ನವದೆಹಲಿ: 'ಹಿಂದೂಗಳನ್ನು ಹತ್ಯೆ ಮಾಡುವುದು ಮಜಾ ಕೊಡುತ್ತೆ' ಎಂದಿದ್ದ ಬಂಧಿತ ಪಾಕಿಸ್ತಾನದ ಉಗ್ರ ಮೊಹಮ್ಮದ್ ನಾವೇದ್ ಯಾಕೂಬ್, ಈಗ ತನ್ನನ್ನು ಭಾರತಕ್ಕೆ ಕಳುಹಿಸಿದ ಪಾಕಿಸ್ತಾನದಲ್ಲಿರುವ ಲಷ್ಕರ್-ಇ-ತೋಯಿಬಾ ಉಗ್ರ ಸಂಘಟನೆಯ ನಾಯಕರನ್ನೇ ಹತ್ಯೆ ಮಾಡಬೇಕು ಎಂದು ಹೇಳಿದ್ದಾನೆ.
ಹಿಂದೂಸ್ಥಾನ ಟೈಮ್ಸ್ ವರದಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಉಧಾಂಪುರ ದಾಳಿಯ ವೇಳೆ ಜೀವಂತವಾಗಿ ಸೇರೆ ಸಿಕ್ಕ ನಾವೇದ್ ವಿಚಾರಣೆ ವೇಳೆ, ಫೈಸಲಾಬಾದ್‌ನಲ್ಲಿ ತನಗೆ ತರಬೇತಿ ನೀಡಿದ ಮೌಲ್ವಿ ಬಶಿರ್ ಹಾಗೂ ಇತರರನ್ನು ಹತ್ಯೆ ಮಾಡಬೇಕು ಎಂದು ಹೇಳಿದ್ದಾನೆ.
ಉಗ್ರ ನಾವೇದ್‌ಗೆ ಮೂರು ಹಂತಗಳಲ್ಲಿ ತರಬೇತಿ ನೀಡಲಾಗಿದ್ದು, ಮೊದಲ ಹಂತದಲ್ಲಿ ದೈಹಿಕ ಸಾಮರ್ಥ್ಯ, ಎರಡನೇ ಹಂತದಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸುವ ಬಗ್ಗೆ ಹಾಗೂ ಮೂರನೇ ಹಂತದಲ್ಲಿ ಆತ್ಮಹುತಿ ದಾಳಿ ನಡೆಸುವ ಬಗ್ಗೆ ತರಬೇತಿ ನೀಡಲಾಗಿದೆ ಎಂದು ಉಗ್ರ ಹೇಳಿಕೊಂಡಿದ್ದಾನೆ.
ತನ್ನೊಂದಿಗೆ ಮೊದಲ ಹಂತದಲ್ಲಿ ಸುಮಾರು 180 ಯುವಕರು ತರಬೇತಿ ಪಡೆಯುತ್ತಿದ್ದರು. ಆದರೆ ಎರಡನೇ ಹಾಗೂ ಮೂರನೇ ಹಂತದಲ್ಲಿ ಆ ಸಂಖ್ಯೆ 40ರಿಂದ 50ಕ್ಕೆ ಕ್ಷೀಣಿಸಿತು ಎಂದು ಉಗ್ರ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.
ತಾನು ಈಗ ವಾಪಸ್ ಪಾಕಿಸ್ತಾನಕ್ಕೆ ಹೋಗಬೇಕು ಎಂದಿರುವ ಉಗ್ರ ನಾವೇದ್, 'ದಯವಿಟ್ಟು ನನಗೆ ವಾಪಸ್ ಹೋಗಲು ಅವಕಾಶ ಕೊಡಿ, ನನ್ನನ್ನು ಕಾಶ್ಮೀರಕ್ಕೆ ಕಳುಹಿಸಿದವರನ್ನು ನಾನು ಕೊಲೆ ಮಾಡಬೇಕು' ಎಂದು ತನಿಖಾಧಿಕಾರಿಗೆ ಕೇಳಿಕೊಂಡಿದ್ದಾನೆ.