ಪ್ರಧಾನ ಸುದ್ದಿ

ಮಳೆ ಬರದಿದ್ರೆ ಕಾದಿದೆ ಕಗ್ಗತ್ತಲು

Srinivasamurthy VN

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಭೀಕರ ಬರದ ಫಲವಾಗಿ ಜಲಾಶಯಗಳು ಬರಿದಾಗುತ್ತಿದ್ದು, ಭವಿಷ್ಯದಲ್ಲಿ ಭಾರಿ ವಿದ್ಯುತ್ ಕ್ಷಾಮ ತಲೆದೋರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗ ಸಂಗ್ರಹವಿರುವ ನೀರನ್ನು ಜಲವಿದ್ಯುತ್ ಉತ್ಪಾದನೆಗೆ ಬಳಸಿಕೊಂಡರೆ ರಾಜ್ಯದ ಅಗತ್ಯಗಳನ್ನು ಕೇವಲ 45 ದಿನಗಳವರೆಗೆ ಮಾತ್ರ ಪೂರೈಸಲು ಸಾಧ್ಯ. ಇದು ಇಂಧನ ಇಲಾಖೆ  ಅಧಿಕಾರಿಗಳ ತಲೆಬಿಸಿಗೆ ಕಾರಣವಾಗಿದ್ದು, ಮಳೆ ಬಾರದೇ ಇದ್ದರೆ ವ್ಯಾಪಕ ಪ್ರಮಾಣದಲ್ಲಿ ವಿದ್ಯುತ್ ಖರೀದಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ರಾಜ್ಯದ ಆರ್ಥಿಕ ವ್ಯವಸ್ಥೆ ಮೇಲೆ ದೊಡ್ಡ ಹೊರೆಯಾಗುವ ಸಂಭವವಿದೆ.

ಇಂಧನ ಇಲಾಖೆ ಮೂಲಗಳ ಪ್ರಕಾರ ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಸುಮಾರು 4000 ಮೆಗಾ ವ್ಯಾಟ್ ಕೊರತೆ ಇದೆ. ವಿದ್ಯುತ್ ಖರೀದಿಗೆ ಸರ್ಕಾರ ಈಗಾಗಲೇ ನಿರ್ಧರಿಸಿದ್ದರೂ ಕೇವಲ  732 ಮೆಗಾ ವ್ಯಾಟ್ ಖರೀದಿ ಮಾಡುವುದಕ್ಕೆ ಮಾತ್ರ ಕೆಇಆರ್‍ಸಿ ಅನುಮತಿ ನೀಡಿದೆ. ಪ್ರತಿ ಯೂನಿಟ್‍ಗೆ ರು.5.80 ದರದಲ್ಲಿ ಖರೀದಿಸುವುದಕ್ಕೆ ಒಪ್ಪಿಗೆ ನೀಡಿದೆ. ಆದರೆ ದಕ್ಷಿಣ ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಈಗ ಬರದ ಛಾಯೆ ಇದೆ. ಪರಿಣಾಮವಾಗಿ ಎಲ್ಲ ಕಡೆ ವಿದ್ಯುತ್ ಅಭಾವ ಸೃಷ್ಟಿಯಾಗುತ್ತಿದೆ. ಹೀಗಾಗಿ ಮಾರುಕಟ್ಟೆ ದರಕ್ಕೂ ಕೆಇಆರ್‍ಸಿ ನಿಗದಿ ಮಾಡಿದ ಮಿತಿಗೂ ಭಾರಿ ಅಂತರವಿದೆ.

ರಾಜ್ಯದ ಜಲಾಶಯಗಳು ಶೇ.40ರಷ್ಟೂ ತುಂಬಿಲ್ಲ. ಮಳೆ ಬಾರದಿದ್ದರೆ ಈ ವರ್ಷ ಮತ್ತು ಮುಂದಿನ ವರ್ಷವೂ ವಿದ್ಯುತ್ ಸಮಸ್ಯೆ ನಿರ್ವಹಣೆ ಮಾಡುವ ದೊಡ್ಡ ಜವಾಬ್ದಾರಿ ರಾಜ್ಯ ಸರ್ಕಾರದ  ಮೇಲಿದೆ. ನೀರಿನ ಸಂರಕ್ಷಣೆ ತೀರಾ ಅಗತ್ಯವಾಗಿದ್ದು, ಬೆಳೆ ಪದ್ಧತಿ ಬದಲಾಯಿಸಿಕೊಳ್ಳುವಂತೆ ರೈತರಲ್ಲಿ ಮನವಿ ಮಾಡಿಕೊಳ್ಳಲಾಗುತ್ತಿದೆ.
-ಡಿ ಕೆ ಶಿವಕುಮಾರ್ ಇಂಧನ ಸಚಿವ

SCROLL FOR NEXT