ಮುಂಬೈ: ಸ್ಟಾರ್ ಇಂಡಿಯಾ ಟಿವಿ ಮಾಜಿ ಸಿಇಓ ಪೀಟರ್ ಮುಖರ್ಜಿ ಪತ್ನಿ ಇಂದ್ರಾಣಿ ಮುಖರ್ಜಿ ಕೊಲೆ ಮಾಡಿಸಿರುವುದು ಸಹೋದರಿಯನ್ನಲ್ಲ, ಸ್ವಂತ ಮಗಳನ್ನೇ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ತಮ್ಮ ಕಾರು ಚಾಲಕನ ಮೂಲಕ ಹತ್ಯೆ ಮಾಡಿಸಿದ್ದಾರೆಂಬ ಅಂಶ ಬಯಲಾಗಿದೆ.
ಇಂದ್ರಾಣಿ ಮುಖರ್ಜಿ ಪುತ್ರ ಮಿಖಿಲ್ ಬೋರಾ ಮಾಧ್ಯಮದ ಮುಂದೆ ಈ ವಿಷಯವನ್ನು ಖಚಿತಪಡಿಸಿದ್ದಾರೆ. ತಾವು ಹಾಗೂ ಶೀನಾ ಬೋರಾ ಇಂದ್ರಾಣಿ ಮುಖರ್ಜಿಯವರ ಮಕ್ಕಳಾಗಿದ್ದು, ತಮ್ಮ ಸಹೋದರಿ ಶೀನಾ ಬೋರಾರನ್ನು ತಮ್ಮ ತಾಯಿಯೇ ಕೊಲೆ ಮಾಡಿಸಿದ್ದಾರೆಂದು ಆರೋಪಿಸಿದ್ದಾರೆ, ಸಹೋದರಿ ಕುರಿತಂತೆ ತಾಯಿಯ ಬಳಿ ವಿಚಾರಿಸಿದಾಗಲೆಲ್ಲಾ ಆಕೆ ವಿದೇಶದಲ್ಲಿದ್ದಾಳೆಂದು ತಮ್ಮ ಬಳಿ ಸುಳ್ಳು ಹೇಳಿದ್ದಾಗಿ ಆತ ತಿಳಿಸಿದ್ದಾರೆ.
ಶೀನಾ ಬೋರಾ ಹೊಂದಿದ್ದ ಪ್ರೇಮ ಸಂಬಂಧವೇ ಕೊಲೆಗೆ ಕಾರಣವೆಂದು ಹೇಳಲಾಗಿದ್ದು, ಹೀಗಾಗಿ ಇಂದ್ರಾಣಿ ಮುಖರ್ಜಿ ತಮ್ಮ ಚಾಲಕನ ನೆರವಿನಿಂದ ಮೂರು ವರ್ಷಗಳ ಹಿಂದೆ ಆಕೆಯ ಕೊಲೆ ಮಾಡಿಸಿದ್ದರೆನ್ನಲಾಗಿದೆ. ಕೊಲೆ ಬಳಿಕ ಚಾಲಕ, ಶೀನಾ ಬೋರಾಳ ದೇಹವನ್ನು ಮುಂಬೈನಿಂದ 84 ಕಿ.ಮೀ. ದೂರದಲ್ಲಿರುವ ರಾಯಘಡ ಅರಣ್ಯ ಪ್ರದೇಶದಲ್ಲಿ ಬಿಸಾಡಿದ್ದನೆಂದು ಹೇಳಲಾಗಿದೆ ಇತ್ತೀಚೆಗೆ ಪೊಲೀಸ್ ಬಾತ್ಮೀದಾರನೊಬ್ಬ ನೀಡಿದ ಮಾಹಿತಿ ಮೇರೆಗೆ ಇಂದ್ರಾಣಿ ಮುಖರ್ಜಿಯವರ ಕಾರು ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ ವೇಳೆ ಕೊಲೆ ವಿಚಾರ ಬೆಳಕಿಗೆ ಬಂದಿತ್ತು. ಆಸ್ತಿ ವ್ಯಾಜ್ಯ ಸಂಬಂಧ ಇಂದ್ರಾಣಿ ಮುಖರ್ಜಿ ತಮ್ಮ ಸಹೋದರಿಯನ್ನು ಕೊಲೆ ಮಾಡಿಸಿದ್ದಾರೆಂದು ಮೊದಲಿಗೆ ಹೇಳಲಾಗಿತ್ತಾದರೂ ಈಗ ಆಕೆಯ ಮಗನ ಹೇಳಿಕೆಯಿಂದ ಕೊಲೆಯಾಗಿರುವುದು ಇಂದ್ರಾಣಿ ಮುಖರ್ಜಿಯವರ ಪುತ್ರಿಯೆಂಬ ಸತ್ಯ ಬಯಲಾಗಿದೆ.
ಇಂದ್ರಾಣಿ ಮುಖರ್ಜಿ ಮಾಧ್ಯಮ ಕ್ಷೇತ್ರದಲ್ಲಿ ಪ್ರಭಾವಿ ಮಹಿಳೆಯಾಗಿದ್ದ ಕಾರಣ ಪೊಲೀಸರು ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಅಂತಿಮವಾಗಿ ಇಂದ್ರಾಣಿ ಮುಖರ್ಜಿಯವರನ್ನು ಬಂಧಿಸಿದ್ದು, ಆಗಸ್ಟ್ 31 ರವರೆಗೆ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ. ಇನ್ನು ಶೀನಾ ಬೋರಾ ಪೀಟರ್ ಮುಖರ್ಜಿ ಯ ಮೊದಲ ಹೆಂಡತಿ ಮಗನೊಂದಿಗೆ ಸಂಬಂಧ ಹೊಂದಿದ್ದು ಇದು, ಇಂದ್ರಾಣಿ ಮುಖರ್ಜಿ ಗೆ ಇಷ್ಟ ವಿರಲಿಲ್ಲ. ಈ ಸಂಬಂಧ ಮಗಳಿಗೆ ಎಷ್ಟೇ ಬುದ್ದಿ ಹೇಳಿದರೂ ಕೇಳಿಲ್ಲ ವಾದ್ದರಿಂದ ಆಕೆಯನ್ನು ಕೊಲೆ ಮಾಡಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಸದ್ಯ ಮುಂಬಯಿ ಪೊಲೀಸರ ವಶದಲ್ಲಿರುವ ಇಂದ್ರಾಣಿ ಮುಖರ್ಜಿ ವಿಚಾರಣೆ ನಂತರವಷ್ಟೇ ಪೂರ್ಣ ಮಾಹಿತಿ ಬಹಿರಂಗವಾಗಬೇಕಿದೆ.