ಬೆಂಗಳೂರು: ವಿವಾದಾತ್ಮ 'ಢುಂಢಿ' ಕಾದಂಬರಿಯ ಲೇಖಕ ಯೋಗೀಶ್ ಮಾಸ್ಟರ್ ಕೂಡ ಮೂಲಭೂತವಾದಿಗಳ ಗುರಿಯಾಗಿದ್ದಾರೆ? ಲೇಖಕರೆ ಹೇಳುವ ಪ್ರಕಾರ ಹಿರಿಯ ಲೇಖಕ ಎಂ ಎಂ ಕಲ್ಬುರ್ಗಿ ಅವರನ್ನು ಭಾನುವಾರ ಗುಂಡಿಟ್ಟು ಕೊಲ್ಲುವುದಕ್ಕೂ ಎರಡು ವಾರದ ಮುಂಚಿತವಾಗಿ ಇಬ್ಬರು ಬಂಧೂಕುಧಾರಿಗಳು ಯೋಗೀಶ್ ಅವರ ಮನೆಗೆ ಹೋಗಿದ್ದರಂತೆ.
"ಇಬ್ಬರು ನಮ್ಮ ಮನೆ ಹೊಕ್ಕಲು ಪ್ರಯತ್ನಿಸಿದರು. ನನಗೆ ಸಂಶಯ ಮೂಡಿ ನಾನು ಬಾಗಿಲು ತೆರಯಲಿಲ್ಲ. ಈಗ ಅವರು ಕಲ್ಬುರ್ಗಿಯವರನ್ನು ಗುರಿಯಾಗಿಸಿ ಕೊಂದಿರುವುದು ದುರದೃಷ್ಟಕರ" ಎಂದು ಯೋಗೀಶ್ ಹೇಳಿದ್ದಾರೆ.
ಆದರೆ ಶಂಕಿತರನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದಿರುವ ಅವರು, ಕಲ್ಬುರ್ಗಿಯವರ ಕೊಲೆಯ ನಂತರ ತಮ್ಮ ಮನೆಗೆ ಸರ್ಕಾರ ಪೊಲೀಸ್ ರಕ್ಷಣೆ ನೀಡಿದೆ ಎಂದು ತಿಳಿಸಿದ್ದಾರೆ.
"ಮೊದಲ ಬಾರಿಗೆ ಆಹ್ವಾನ ನಿಡುವ ನೆಪದಲ್ಲಿ ಬೈಕಿನ ಮೇಲೆ ಇಬ್ಬರು ಬಂದಿದ್ದರು. ಎರಡನೇ ಬಾರಿ ಬಂದಾಗ ಹಿರೇಮಠ್ ಪುಸ್ತಕ ಕಳುಹಿಸಿದ್ದಾರೆ ಎಂದು ಹೇಳಿಕೊಂಡು ಬಂದಿದ್ದರು" ಎಂದು ತಿಳಿಸಿದ ಅವರು ಯಾವ ಹಿರೇಮಠ್ ಎಂದು ಸ್ಪಷ್ಟವಾಗಲಿಲ್ಲ. ಅವರಲ್ಲಿ ಒಬ್ಬ ಮಂಜುನಾಥ್ ಬಿಜಾಪುರದ ನಿವಾಸಿ ಎಂದು ತಿಳಿಸಿದ. "ನಾನು ಒಳಗೆ ಕರೆದಾಗ ಅವನಿಗೆ ಭಯವಾಗಿತ್ತು. ಅವನು ಬೆವರುತ್ತಿದ್ದನ್ನು ನಾನು ಗಮನಿಸಿದೆ" ಎಂದು ಅವರು ಹೇಳಿದ್ದಾರೆ.
ಇದೇ ಜೋಡಿ ನಾಲ್ಕು ಬಾರಿಗೆ ಅವರ ಮನೆ ಹುಡುಕಿ ಬಂದಿದ್ದರಂತೆ. "ಒಮ್ಮೆ ನನ್ನ ಪತ್ನಿ ಮನೆ ಬಿಟ್ಟ ನಂತರ ಬಂದಿದ್ದರು. ಅವರಲ್ಲಿ ಒಬ್ಬ ಹೆಲ್ಮೆಟ್ ಧರಿಸಿದ್ದ. ಹಿಂದೆ ಕೂತಿದ್ದವ ಚಿನ್ನದ ಬಣ್ಣದ ವಿಗ್ ಧರಿಸಿದ್ದ ಮತ್ತು ಕೈನಲ್ಲಿ ಬಂಧೂಕು ಹಿಡಿದಿದ್ದ" ಎಂದು ತಿಳಿಸಿದ ಅವರು ಪೊಲೀಸರಿಗೂ ಇದರ ಬಗ್ಗೆ ತಿಳಿಸಿದ್ದೆ ಎಂದು ಕೂಡ ಹೇಳಿದ್ದಾರೆ.
ಇವರ ಢುಂಢಿ ಕಾದಂಬರಿ ಧಾರ್ಮಿಕ ಭಾವನೆಗಳಿಗೆ ಅಡ್ಡಿ ಮಾಡುತ್ತದೆ ಎಂದು ಕೆಲವು ಹಿಂದೂ ಸಂಘಟನೆಗಳು ಕೆಲವು ತಿಂಗಳ ಹಿಂದೆ ಪ್ರತಿಭಟನೆ ನಡೆಸಿದ್ದವು. ಆಗ ಯೋಗೀಶ್ ಅವರನ್ನು ಪೊಲೀಸರು ಬಂಧಿಸಿದ್ದರು ಕೂಡ.