ನವದೆಹಲಿ: ಕರ್ನಾಟಕ ಸರ್ಕಾರ ಬಯಸಿದರೆ ಖ್ಯಾತ ವಿಮರ್ಶಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಕೇಂದ್ರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಕರ್ನಾಟಕ ಸರ್ಕಾರ ಸಿಐಡಿ ತನಿಖೆ ನಡೆಸುತ್ತಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸ ಬಯಸಿ, ಕೇಂದ್ರಕ್ಕೆ ಮನವಿ ಸಲ್ಲಿಸಿದರೆ ಮಾತ್ರ ನಾವು ಮುಂದುವರಿಯುತ್ತೇವೆ ಎಂದರು. ಅಸಹಿಷ್ಣುತೆ ಕುರಿತ ಚರ್ಚೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ ಅವರು ಮಾಡಿದ ಮೌಖಿಕ ಮನವಿಗೆ ಸ್ಪಂದಿಸಿ ಗೃಹ ಸಚಿವ ರಾಜನಾಥ್ ಸಿಂಗ್ ಈ ಭರವಸೆ ನೀಡಿದರು. ಇದಕ್ಕೂ ಮುನ್ನ ಮಾತನಾಡಿದ ಪ್ರಹ್ಲಾದ ಜೋಷಿ ಅವರು, ``ಕರ್ನಾಟಕ ಸರ್ಕಾರ ತನಿಖೆ ಸರಿಯಾಗಿ ನಡೆಸುತ್ತಿಲ್ಲ. ಈ ಪ್ರಕರಣದಲ್ಲಿ ಬಲಪಂಥೀಯರ ಕೈವಾಡ ಇದೆ ಎಂದು ಇಡೀ ದೇಶದ ಹಾದಿ ತಪ್ಪಿಸಲಾಗುತ್ತಿದೆ. ಗೃಹ ಸಚಿವರೇ ನಾನು ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ದಯವಿಟ್ಟು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ'' ಎಂದು ಮನವಿ ಮಾಡಿದರು.
ಅಸಹಿಷ್ಣುತೆ ಕುರಿತ ಚರ್ಚೆಯಲ್ಲಿ ಭಾಗಿಯಾಗಿದ್ದ ಅವರು, ``ಕರ್ನಾಟಕ ಸರ್ಕಾರ ಕೊಲೆಗಾರರನ್ನು ಪತ್ತೆ ಮಾಡಲು ವಿಫಲವಾಗಿದೆ. 93 ದಿನ ಕಳೆದರೂ ಸಿಐಡಿಗೆ ಯಾವುದೇ ಸುಳಿವು ಸಿಕ್ಕಿಲ್ಲ. ಆದರೂ, ಬಲಪಂಥೀಯರು ಈ ಹತ್ಯೆ ಮಾಡಿದ್ದಾರೆಂದು ದೇಶಕ್ಕೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ವಾಸ್ತವವಾಗಿ ಸಿಐಡಿ ತನಿಖೆ ಸ್ಥಗಿತಗೊಳಿಸಿದೆ. ರಾಜ್ಯ ಸರ್ಕಾರ ತನಿಖೆಗೆ ಅನುದಾನ ನೀಡಿಲ್ಲ. ಹಣವಿಲ್ಲದೇ ತನಿಖೆ ಸ್ಥಗಿತಗೊಳಿಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. ಕಲಬುರ್ಗಿ ಹತ್ಯೆ ಖಂಡನೀಯ. ಅವರ ಹತ್ಯೆಯನ್ನು ಬಲಪಂಥೀಯರು ಮಾಡಿದ್ದಾರೆಂದು ಆರೋಪಿಸುತ್ತಿರುವುದು ಸರಿಯಲ್ಲ.
ಹಿಂದಿನಿಂದಲೂ ಏನೇ ನಡೆದರೂ ಅದನ್ನು ಆರ್‍ಎಸ್‍ಎಸ್ ತಲೆಗೆ ಕಟ್ಟುವ ಸಂಪ್ರದಾಯ ಇದೆ. ಗಾಂಧಿ ಹತ್ಯೆಯಿಂದ ಇಂದಿನವರೆಗೂ ಅದು ನಡೆದುಕೊಂಡು ಬಂದಿದೆ'' ಎಂದು ಪ್ರಹ್ಲಾದ್ ಜೋಶಿ ವಿವರಿಸಿದರು. ``ದಾದ್ರಿ ಹತ್ಯೆ ನಡೆದ 12 ದಿನಗಳ ನಂತರ ಮೂಡಬಿದರೆಯಲ್ಲಿ ಪ್ರಶಾಂತ್ ಪೂಜಾರಿ ಎಂಬಾತನ ಕೊಲೆ ಆಯಿತು. ನಿಯಮಬಾಹಿರವಾಗಿ ದನ ಕಡಿಯುವುದನ್ನು ವಿರೋಧಿಸಿದ್ದಕ್ಕೆ ಮತ್ತು ಚಳವಳಿ ನಡೆಸಿದ್ದಕ್ಕೆ ಕೊಲೆ ಮಾಡಲಾಯಿತು. ಚಳವಳಿ ನಡೆಸುವುದನ್ನು ಕೈಬಿಡುವಂತೆ, ಬಿಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು. ಆತ ಪ್ರತಿಭಟನೆ ನಡೆಸಿದ್ದರಿಂದ ಕೊಲೆ ಮಾಡಲಾಯಿತು. ಈತ ಭಜರಂಗದಳ ಸಕ್ರಿಯ ಕಾರ್ಯಕರ್ತ ಆಗಿರಲಿಲ್ಲ. ಸಚಿವರಾದ ಅಭಯ್ ಚಂದ್ರ ಜೈನ್, ಖಾದರ್ ಯಾರೂ ಮೃತನ ಮನೆಗೆ ತೆರಳಿ ಸಾಂತ್ವನ ಹೇಳಲಿಲ್ಲ. ಆತನ ವಿರುದ್ಧ ಹಲವು ಪ್ರಕರಣಗಳಿದ್ದವು. ಆ ಕಾರಣಕ್ಕೆ ಕೊಲೆಯಾದ. ಪೊಲೀಸ್ ಆಯುಕ್ತರೂ ಕೂಡ ಮನೆಗೆ ತೆರಳಿ ಸಾಂತ್ವನ ಹೇಳದಂತೆ ಸೂಚಿಸಲಾಗಿತ್ತು. ಇದುವರೆಗೆ ಸಿಐಡಿ ತನಿಖೆಯಿಂದ ಯಾವ ಪ್ರಗತಿಯೂ ಆಗಲಿಲ್ಲ. ಹೀಗಾಗಿ ಅದನ್ನು ಸಿಬಿಐ ತನಿಖೆಗೆ ವಹಿಸಿ'' ಎಂದು ಜೋಶಿ ಒತ್ತಾಯಿಸಿದರು.
ಖರ್ಗೆ-ಜೋಶಿ ಜಟಾಪಟಿ: 2000ನೇ ಇಸ್ವಿಯಲ್ಲಿ ಕರ್ನಾಟಕಕದಲ್ಲಿ ಚರ್ಚ್ ದಾಳಿ ಸಂಬಂಧ ಪ್ರಹ್ಲಾದ ಜೋಷಿ ನೀಡಿದ ಹೇಳಿಕೆ ಕುರಿತಂತೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕೆಂಡಮಂಡಲರಾಗಿ ಮಾತಿನ ಚಕಮಕಿ ನಡೆಸಿದ ಘಟನೆ ನಡೆಯಿತು. ಪ್ರಹ್ಲಾದ ಜೋಷಿ ಅವರು, ``2000ದಲ್ಲಿ ಚರ್ಚ್ ಮೇಲೆ ಬಾಂಬ್ ದಾಳಿ ನಡೆದಾಗ ಮಲ್ಲಿಕಾರ್ಜುನ ಖರ್ಗೆ ಗೃಹ ಸಚಿವರಾಗಿದ್ದರು. ಆಗ ಕಾಂಗ್ರೆಸ್‍ನ ಎಲ್ಲ ನಾಯಕರು ಇದರಲ್ಲಿ ಆರ್‍ಎಸ್‍ಎಸ್ ಕೈವಾಡ ಇದೆ ಎಂದು ಆರೋಪಿಸಿದ್ದರು. ತನಿಖೆ ನಡೆದಾಗ ಬಾಂಬ್ ದಾಳಿ ನಡೆಸಿದ್ದು ದೀನ್‍ದಾರ್ ಅಂಜುಮಾನ್ ಸಂಘಟನೆ ಎನ್ನುವುದು ದೃಢಪಟ್ಟಿತ್ತು. ಆರೋಪಿಗಳಿಗೆ ಶಿಕ್ಷೆಯೂ ಆಯಿತು. ಆಗ ನಾನು ಸಂಸದನಾಗಿದ್ದೆ. ಆರ್‍ಎಸ್‍ಎಸ್ ಮೇಲೆ ಆರೋಪ ಮಾಡಿದ ಕಾಂಗ್ರೆಸ್ ನಾಯಕರ ಕ್ಷಮೆಗೆ ಒತ್ತಾಯಿಸಿದೆ. ಯಾರೂ ಕ್ಷಮೆ ಕೇಳಲಿಲ್ಲ. ಹೀಗೆ ಎಲ್ಲದಕ್ಕೂ ಆರ್‍ಎಸ್‍ಎಸ್ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ'' ಎಂದು ಜೋಶಿ ದೂರಿದರು.
ಜೋಷಿ ಮಾತು ಮುಗಿಸಿದ ನಂತರ ಎದ್ದು ನಿಂತ ಖರ್ಗೆ ``ನೀವು ಕರ್ನಾಟಕದಲ್ಲಿ ಮಾಡಿದ್ದನ್ನು ಇಲ್ಲಿ ಸಮರ್ಥಿಸಿಕೊಳ್ಳುತ್ತಿದ್ದೀರಾ? ಆರ್‍ಎಸ್‍ಎಸ್ ಕೈವಾಡ ಇದೆ ಎಂದು ನಾನು ಯಾವಾಗ ಹೇಳಿದ್ದೆ ತಿಳಿಸಿ'' ಎಂದು ಆಕ್ರೋಶದಿಂದ ಹೇಳಿದರು. ಏನೇನೋ ಮನಸ್ಸಿಗೆ ಬಂದಂತೆ ಮಾತನಾಡಬೇಡಿ ಎಂದು ಏರಿದ ದನಿಯಲ್ಲಿ ಮಾತನಾಡಿದರು. ಇದಕ್ಕೆ ಪ್ರತಿಯಾಗಿ ಪ್ರಹ್ಲಾದ ಜೋಷಿ ತಮ್ಮ ಮಾತನ್ನು ಸಮರ್ಥಿಸಿಕೊಳ್ಳಲೆತ್ನಿಸಿದರು. ಈ ಹಂತದಲ್ಲಿ ಯಾರು ಏನು ಹೇಳುತ್ತಿದ್ದಾರೆಂದು ಗೊತ್ತಾಗದ ಪರಿಸ್ಥಿತಿ ತಲೆದೋರಿತು. ಸ್ಪೀಕರ್ ಸುಮಿತ್ರಾ ಮಹಾಜನ್ `` ನೀವು ಆರ್‍ಎಸ್‍ಎಸ್ ವಿರುದ್ಧ ಆರೋಪ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದೀರಿ. ಅದು ದಾಖಲಾಗಿದೆ. ಮಾತು ನಿಲ್ಲಿಸಿ'' ಎಂದರು. ಆದರೂ ಖರ್ಗೆ ಪ್ರಹ್ಲಾದ ಜೋಷಿ ವಿರುದ್ಧ ವಾಗ್ದಾಳಿ ನಿಲ್ಲಿಸಲಿಲ್ಲ. ``ನಿಮ್ಮಂತಹ ಸಾಕಷ್ಟು ಜನರನ್ನು ನೋಡಿ ನೋಡಿದ್ದೇನೆ. ಇಲ್ಲ ಸಲ್ಲದ ಆರೋಪವನ್ನು ಸದನದಲ್ಲಿ ಮಾಡುತ್ತೀರಿ'' ಎಂದರು.
ಜಿಎಸ್‍ಟಿಗೆ ಬೆಂಬಲ: ಬಿಎಸ್ಪಿ ಬಳಿಕ ಜೆಡಿಯು ಕೂಡ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಇದೇ ವೇಳೆ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ತನ್ನ ಸಂಸದರಿಗೆ ಬಿಜೆಪಿ ಸೂಚನೆ ನೀಡಿದೆ. ಮಂಗಳವಾರ ಬೆಳಗ್ಗೆ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ.
ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೋಮುಗಲಭೆಗಳ ಸಂಖ್ಯೆ ಕಡಿಮೆಯಾಗಿದೆ. ದೇಶದಲ್ಲಿ ಅಸಹಿಷ್ಣುತೆಯ ಕೃತಕ ವಾತಾವರಣವನ್ನು ನಿರ್ಮಿಸಲಾಗಿದೆ.
-ಕಿರಣ್ ರಿಜಿಜು
ಗೃಹ ಖಾತೆ ಸಹಾಯಕ ಸಚಿವ
ಸಂವಿಧಾನದ ಮೂಲ ಆಶಯಗಳನ್ನು ಎತ್ತಿಹಿಡಿಯಬೇಕಾದ್ದು ಎಲ್ಲರ ಕರ್ತವ್ಯ. ಕಾನೂನನ್ನು ಜಾರಿ ಮಾಡಬೇಕಾದ ಸರ್ಕಾರವೇ ಹಕ್ಕುಗಳನ್ನು ಉಲ್ಲಂಘಿಸಿದ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ.
-ರಾಜೀವ್ ಚಂದ್ರಶೇಖರ್ ರಾಜ್ಯಸಭೆ ಸದಸ್ಯ
ಇಲ್ಲಿ ಮುಸ್ಲಿಮನಾಗಿರುವುದಕ್ಕಿಂತ ಗೋವು ಆಗಿರುವುದೇ ಉತ್ತಮ. ದೇಶದಲ್ಲಿ ನಡೆಯುತ್ತಿರುವ ಹೇಟ್ ಇನ್ ಇಂಡಿಯಾವನ್ನು ತಡೆಯದಿದ್ದರೆ, ವಿದೇಶಗಳಲ್ಲಿ ಮೇಕ್ ಇನ್ ಇಂಡಿಯಾ ಉತ್ತೇಜನ ಅಸಾಧ್ಯ.
-ಶಶಿ ತರೂರ್ ಕಾಂಗ್ರೆಸ್ ಸಂಸದ
ದೇಶವು ಕಾಂಗ್ರೆಸ್‍ನ 65 ವರ್ಷಗಳ ದುರಾಡಳಿತವನ್ನೇ ಸಹಿಸಿಕೊಂಡಿದೆ. ಕಾಂಗ್ರೆಸ್ ಈಗ ಮುಸ್ಲಿಮರನ್ನು ಬಲಿಪಶುಗಳೆಂದು ಬಿಂಬಿಸಿ, ಮತ ಬ್ಯಾಂಕ್ ರಾಜಕೀಯ ಮಾಡುತ್ತಿದೆ.
-ಕಿರಣ್ ಖೇರ್ ಬಿಜೆಪಿ ಸಂಸದೆ
ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನ್‍ನನ್ನು ವಿರೋಧಿಸಲಾಗುತ್ತದೆ. ಆದರೆ ಬಹುರಾಷ್ಟ್ರೀಯ ಕಂಪನಿಗಳಿಗೆ ಕೆಂಪುಹಾಸು ಹಾಕಿ ಸ್ವಾಗತಿಸಲಾಗುತ್ತದೆ. ಇದೆಂಥಾ ವಿಪರ್ಯಾಸ? .
-ಟಿ ಕೆ ರಂಗರಾಜನ್ ಸಿಪಿಎಂ ಸದಸ್ಯ