ಪ್ರಧಾನ ಸುದ್ದಿ

ಮಲದಗುಂಡಿಯ ವಿಷಕ್ಕೆ ಮೂರು ಕಾರ್ಮಿಕರ ಸಾವು

Mainashree
ಬೆಂಗಳೂರು: ದೇಶದಲ್ಲಿ ಮಲ ಹೊರುವ ಪದ್ಧತಿ ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ್ದರೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ಪದ್ಧತಿ ಜೀವಂತವಾಗಿದೆ ಎಂಬುದಕ್ಕೆ ನಗರದಲ್ಲಿ ಸೋಮವಾರ ನಡೆದಿರುವ ಘಟನೆಯೇ ಸಾಕ್ಷಿ. 
ಮಲದ ಗುಂಡಿ ಸ್ವಚ್ಛ ಮಾಡಲು ಹೋಗಿದ್ದ ಮೂವರು ಕೂಲಿ ಕಾರ್ಮಿಕರು ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಬೇಗೂರಿನ ಅರಾಟ್ ರಾಯಲ್ ಸಿಟಾಡಲ್ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ. 
ನೇಪಾಳ ಮೂಲದ ಜಗದೀಶ್ (23),ಕೆಆರ್ ನಗರದ ಮಹೇಶ್(22), ಹಾಗೂ ಒಡಿಶಾ ಮೂಲದ ರಂಜನ್(22) ಮೃತ ಕಾರ್ಮಿಕರು. 
ಮೂವರು ಕಾರ್ಮಿಕರು ಬೇಗೂರಿನಲ್ಲಿ ವಾಸವಾಗಿದ್ದು,  ಖಾಸಗಿ ಒಳಚರಂಡಿ ಸಂಸ್ಕರಣಾ ಘಟಕದಲ್ಲಿ (ಎಸ್‍ಟಿಪಿ) ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅಪಾರ್ಟ್‍ಮೆಂಟ್‍ನ ಗುತ್ತಿಗೆದಾರ ಉಮೇಶ್ ಇಂತಹ ಕಾರ್ಯಕ್ಕೆ ಹೊರಗಡೆಯಿಂದ ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸುತ್ತಿದ್ದರು. ಸೋಮವಾರ ಸಂಜೆ ಶೌಚಾಲಯದ ಘಟಕ ಸ್ವಚ್ಛ ಮಾಡಲು ಒಳಗಡೆ ಇಳಿದಾಗ ಆಮ್ಲಜನಕ ಸಿಗದೆ ಮೂವರು ಮೃತಪಟ್ಟಿದ್ದಾರೆ. 
ಘಟನೆ: ಗುತ್ತಿಗೆದಾರ ಉಮೇಶ್ ಜೊತೆ ಮೃತ ಮೂವರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.ಅಪಾರ್ಟ್‍ಮೆಂಟ್‍ನಲ್ಲಿ ಶೌಚಾಲಯ ಗುಂಡಿ ಸ್ವಚ್ಛ ಮಾಡಲು ಮೊದಲು ರಂಜನ್ ಹಾಗೂ ಜಗದೀಶ್ ಮ್ಯಾನ್‍ಹೋಲ್‍ನಲ್ಲಿ ಇಳಿದಿದ್ದರು. 
ಮಹೇಶ್ ಮೇಲೆಯೇ ನಿಂತು ಸಹಾಯ ಮಾಡುತ್ತಿದ್ದ. ಕೆಲ ಹೊತ್ತಿನ ನಂತರ ಜಗದೀಶ್ ಹಾಗೂ ರಂಜನ್‍ರಿಂದ ಪ್ರತಿಕ್ರಿಯೆ ಸಿಗದಿದ್ದಾಗ ಅನುಮಾನಗೊಂಡ ಮಹೇಶ್ ಮ್ಯಾನ್ ಹೋಲ್ ನಲ್ಲಿ ಇಳಿದು ಪರಿಶೀಲಿಸಿದ್ದಾನೆ. 
ಅಷ್ಟರಲ್ಲಾಗಲೇ ಜಗದೀಶ್ ಹಾಗೂ ರಂಜನ್ ಮೃತಪಟ್ಟಿದ್ದರು, ಆಮ್ಲಜನಕದ ಕೊರತೆಯಿಂದ ಮಹೇಶ್ ಕೂಡ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಗುತ್ತಿಗೆದಾರ ಉಮೇಶ್‍ನನ್ನು ವಶಕ್ಕೆ ಪಡೆದಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
SCROLL FOR NEXT