ನವದೆಹಲಿ: ಹೀನ ಕೃತ್ಯಗಳಲ್ಲಿ ಭಾಗಿಯಾದ 16 ವರ್ಷದಿಂದ 18 ವರ್ಷದೊಳಗಿನ ಮಕ್ಕಳನ್ನೂ ವಯಸ್ಕರೆಂದು ಪರಿಗಣಿಸಿ ವಿಚಾರಣೆ ನಡೆಸುವ ಬಾಲಾಪರಾಧ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಮಸೂದೆಯನ್ನು ಸಂಸತ್ತು ಮಂಗಳವಾರ ಅಂಗೀಕರಿಸಿದೆ.
ಈ ಮಸೂದೆಗೆ ಲೋಕಸಭೆ ಆಗಸ್ಟ್ ನಲ್ಲೇ ಅಂಗೀಕಾರ ನೀಡದ್ದರೆ, ರಾಜ್ಯಸಭೆ ಮಂಗಳವಾರ ಒಪ್ಪಿಗೆ ನೀಡಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಆರಂಭವಾದ ಮಸೂದೆ ಕುರಿತ ಚರ್ಚೆ ಮುಗಿದದ್ದು ಸಂಜೆ 7 ಗಂಟೆಗೆ. ಸಿಪಿಎಂ ಸದಸ್ಯರ ಸಭಾತ್ಯಾಗದ ನಡುವೆಯೂ ರಾಜ್ಯಸ ಭೆಯಲ್ಲಿ ಧ್ವನಿಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು.
ಮಸೂದೆ ಏನು ಹೇಳುತ್ತದೆ?
1 ಅತ್ಯಾಚಾರದಂಥ ಹೇಯ ಅಪರಾಧ ಕೃತ್ಯದಲ್ಲಿ ಭಾಗಿಯಾದ 16-18 ವರ್ಷದ ಆರೋಪಿಗಳನ್ನು ವಯಸ್ಕರೆಂದು ಪರಿಗಣಿಸುವುದು.
2 ಇನ್ನುಳಿದ ಅಪರಾಧ ಪ್ರಕರಣಗಳಲ್ಲಿ 21 ವರ್ಷ ವಯೋಮಾನ ಮತ್ತು ನಂತರ ಬಂಧನವಾದಲ್ಲಿ ಅವರನ್ನು ವಯಸ್ಕರೆಂದು ಪರಿಗಣಿಸುವುದು.
3 ದೇಶಾದ್ಯಂತ ಪ್ರತಿ ಜಿಲ್ಲೆಯಲ್ಲೂ ಬಾಲ ನ್ಯಾಯ ಮಂಡಳಿ ಹಾಗೂ ಮಕ್ಕಳ ಕಲ್ಯಾಣ ಸಮಿತಿ ರಚನೆ.
4 ಬಾಲಾಪರಾಧಿಯನ್ನು ವೀಕ್ಷಣಾಲಯಕ್ಕೆ ಕಳಿಸುವುದೇ ಅಥವಾ ವಯಸ್ಕನೆಂದು ಪರಿಗಣಿಸಿ ವಿಚಾರಣೆಗೊಳಪಡಿಸುವುದೇ ಎಂಬುದನ್ನು ನಿರ್ಧರಿಸುವ ಅಧಿಕಾರ ಬಾಲ ನ್ಯಾಯ ಮಂಡಳಿಗೆ.
5 ಮಕ್ಕಳ ವಿರುದ್ಧದ ಹಿಂಸಾಚಾರ, ಮಾದಕ ವಸ್ತು ನೀಡುವುದು, ಬೆದರಿಕೆ, ಮಕ್ಕಳ ಮಾರಾಟ ಪ್ರಕರಣಗಳ ಶಿಕ್ಷೆ ಪ್ರಮಾಣ ಪರಿಷ್ಕರಣೆ. ಮಕ್ಕಳ ದತ್ತು ಸ್ವೀಕಾರಹಾಗೂ ದತ್ತು ಪಡೆಯುವ ಅರ್ಹತಾ ಮಾನದಂಡ ಪರಿಷ್ಕರಣೆ.