ನವದೆಹಲಿ: ೭, ರೇಸ್ ಕೋರ್ಸ್ ರಸ್ತೆ, ಪ್ರಧಾನಮಂತ್ರಿ ಅವರ ಅಧಿಕೃತ ನಿವಾಸದಲ್ಲಿ ಇಂದು ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ದೆಹಲಿಯ ವಿಧಾನಸಭಾ ಚುನಾವಣೆಯ ಅಭೂತಪೂರ್ವ ಗೆಲುವಿನ ನಂತರ ಇದು ಪ್ರಧಾನಿಯವರ ಜೊತೆಗಿನ ಮೊದಲ ಸೌಹಾರ್ದಯುತ ಭೇಟಿ. ಈ ಭೇಟಿಯಲ್ಲಿ ದೆಹಲಿಯ ಉಪಮುಖ್ಯಮಂತ್ರಿ ನಾಮಾಂಕಿತ ಮನೀಶ್ ಸಿಸೋದಿಯಾ ಅರವಿಂದ್ ಕೇಜ್ರಿವಾಲ್ ಅವರ ಜೊತೆಗಿದ್ದರು ಎಂದು ತಿಳಿದುಬಂದಿದೆ.
ಫೆಬ್ರವರಿ ೧೪ ರ ಪ್ರಮಾಣವಚನ ಸಮಾರಂಭಕ್ಕೆ ಪ್ರಧಾನಿ ಅವರಿಗೆ ಆಹ್ವಾನ ನೀಡಿದ್ದರೂ, ಹಿಂದಿನ ನಿಗದಿತ ಕಾರ್ಯಕ್ರಮಗಳು ಮತ್ತು ಭದ್ರತೆಯ ಸಲುವಾಗಿ ಪ್ರಧಾನಿ ಅವರು ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿದುಬಂದಿದೆ.
ಭೇಟಿಯ ನಂತರ ವರದಿಗಾಗರೊಂದಿಗೆ ಮಾತನಾಡಿದ ಮನೀಶ್ ಸಿಸೋದಿಯಾ, ಪ್ರಧಾನಿ ಅವರು ಫೆಬ್ರವರಿ ೧೪ ರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರುತ್ತಿಲ್ಲ ಎಂದು ತಿಳಿಸಿದ್ದಾರೆ. ನಾವು ದೆಹಲಿಗೆ ರಾಜ್ಯ ಸ್ಥಾನಮಾನ ನಿಡುವ ಬೇಡಿಕೆಯನ್ನು ಇಟ್ಟಿದ್ದೇವೆ. ಇದರ ಬಗ್ಗೆ ಚಿಂತಿಸುವುದಾಗಿ ಮೋದಿ ತಿಳಿಸಿದ್ದಾರೆ ಎಂದಿದ್ದಾರೆ.