ನವದೆಹಲಿ: ಉಗ್ರರನ್ನು ಜಮ್ಮು ಕಾಶ್ಮೀರಕ್ಕೆ ಕಳುಹಿಸಲು ಪಾಕಿಸ್ತಾನ ಯತ್ನಿಸುತ್ತಿದೆ ಎಂದು ಗೃಹ ಸಚಿವ ರಾಜ್‌ನಾಥ್ ಸಿಂಗ್ ಆರೋಪಿಸಿದ್ದಾರೆ.
ಗಡಿಭಾಗದಲ್ಲಿ ಪಾಕ್ ಆಗ್ಗಾಗ್ಗೆ ಗುಂಡಿನ ದಾಳಿ ನಡೆಸುತ್ತಿರುವ ಬಗ್ಗೆ ಮಾತನಾಡಿದ ಅವರು ಪಾಕ್ ಈ ರೀತಿಯ ಕುತಂತ್ರಗಳನ್ನು ಮಾಡುತ್ತಿದೆ ಎಂಬುದರಲ್ಲಿ ಸಂಶಯವೇ ಇಲ್ಲ ಎಂದು ಹೇಳಿದ್ದಾರೆ.
ಜಮ್ಮು ಪ್ರದೇಶದ ಅಂತಾರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಬಿಎಸ್‌ಎಫ್ ತಕ್ಕ ಉತ್ತರ ನೀಡಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಆದಾಗ್ಯೂ, ಭಾರತ ಪಾಕ್ ಮೇಲೆ ಗುಂಡಿನ ದಾಳಿ ಮಾಡುತ್ತಿದೆ ಎಂದು ಇಸ್ಲಾಮಾಬಾದ್‌ನಲ್ಲಿ ಪ್ರತಿಭಟನೆ ನಡೆಯುತ್ತಿರುವ ಬಗ್ಗೆ ರಾಜ್‌ನಾಥ್ ಅವರಲ್ಲಿ ಕೇಳಿದಾಗ, ಕಾದಾಟ ಆರಂಭ ಮಾಡಿದ್ದು ಪಾಕಿಸ್ತಾನ. ಅದಕ್ಕೆ ಉತ್ತರವನ್ನು ನಾವು ನೀಡುತ್ತಿದ್ದೇವೆ ಅಷ್ಟೇ ಎಂದಿದ್ದಾರೆ.
ನಿನ್ನೆ ಪಾಕಿಸ್ತಾನ ಸಾಂಬಾ ಸೆಕ್ಟರ್‌ನಲ್ಲಿರುವ 12 ಔಟ್‌ಪೋಸ್ಟ್‌ಗಳ ಮೇಲೆ ದಾಳಿ ನಡೆಸಿತ್ತು. ಪಾಕಿಸ್ತಾನ ನಮ್ಮ ಮೇಲೆ ಅಪ್ರಚೋದಿತ ದಾಳಿ ನಡೆಸುತ್ತಿದೆ, ಇದು ಸರಿಯಲ್ಲ ಎಂದು ರಾಜ್‌ನಾಥ್ ಹೇಳಿದರೆ, ಪಾಕ್ ಇನ್ನೂ ಬುದ್ಧಿ ಕಲಿತಿಲ್ಲ ಎಂದು ರಕ್ಷಣಾ ಸಚಿವ ಮನೋಹರ್ ಪರೀಕ್ಕರ್ ಹೇಳಿದ್ದಾರೆ.