ಪ್ಯಾರಿಸ್: ಚಾರ್ಲಿ ಹೆಬ್ಡೋ ಪತ್ರಿಕೆ ಮೇಲೆ ದಾಳಿ ಮಾಡಿ 10 ಮಂದಿಯನ್ನು ಹತ್ಯೆ ಮಾಡಿದ್ದ ಉಗ್ರರು ಗುರುವಾರ ಮತ್ತೆ ದಕ್ಷಿಣ ಪ್ಯಾರಿಸ್‌ನಲ್ಲಿ ಶೂಟೌಟ್ ನಡೆಸಿದ್ದು, ಘಟನೆಯಲ್ಲಿ ಗಾಯಗೊಂಡ ಮಹಿಳಾ ಪೊಲೀಸ್ ಅಧಿಕಾರಿ ಯೊಬ್ಬರು ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಪೊಲೀಸ್ ಪೇದೆಗೆ ಗಂಭೀರ ಗಾಯಗಳಾಗಿವೆ.
ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ ೫೨ರ ಹರೆಯದ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಪತ್ರಕರ್ತರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದ ಉಗ್ರರು, ಇಂದು ಪೊಲೀಸರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡು ನಿರೋಧಕ ಜ್ಯಾಕೆಟ್ ಧರಿಸಿದ್ದ ಇಬ್ಬರು ಆಗಂತುಕರು , ಏಕಾಏಕಿ ಪೊಲೀಸರ ಮೇಲೆ ದಾಳಿ ಮಾಡಿ, ಮೆಟ್ರೋ ರೈಲಿನಲ್ಲಿ ಪರಾರಿಯಾಗಿದ್ದಾರೆ.
ಏತನ್ಮಧ್ಯೆ ನಿನ್ನೆ ಪತ್ರಿಕಾ ಕಚೇರಿ ಮೇಲಿನ ದಾಳಿಗೆ ಸಂಬಂಧಿಸಿದಂತೆ ಪ್ಯಾರಿಸ್ ಪೊಲೀಸರು 7 ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಇಸಿಸ್ ಮುಖ್ಯಸ್ಥನ ಕುರಿತಂತೆ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವ್ಯಂಗ್ಯಚಿತ್ರವನ್ನು ವಿರೋಧಿಸಿ ನಿನ್ನೆ ಬೆಳಗ್ಗೆ ಪ್ಯಾರಿಸ್‌ನ ಪ್ರಮುಖ ವಾರ ಪತ್ರಿಕೆ 'ಚಾರ್ಲಿ ಹೆಬ್ಡೋ' ಮೇಲೆ ಇಬ್ಬರು ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಪತ್ರಿಕೆಯ ಮುಖ್ಯ ಸಂಪಾದಕ, 4 ಪ್ರಮುಖ ಕಾರ್ಟೂನಿಸ್ಟ್‌ಗಳು, ಕಚೇರಿಯ ಭದ್ರತಾ ಸಿಬ್ಬಂದಿ ಮತ್ತು ಇಬ್ಬರು ಪೊಲೀಸರು ಸೇರಿದಂತೆ ಒಟ್ಟು 12 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು.