ನವದೆಹಲಿ: ಕಳೆದ ವರ್ಷ ಡಿಸೆಂಬರ್ 5 ರಂದು ಯೂಬರ್ ಕ್ಯಾಬ್‌ನಲ್ಲಿ 27ರ ಹರೆಯದ ಮಹಿಳೆಯೊಬ್ಬಳನ್ನು ಅತ್ಯಾಚಾರಗೈದ ಟ್ಯಾಕ್ಸಿ ಚಾಲಕ ಶಿವ ಕುಮಾರ್ ಯಾದವ್ (32)ಶಾಲಾದಿನಗಳಿಂದಲೇ ಕಾಮಾತುರನಾಗಿದ್ದನಂತೆ!
ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಶಿವಕುಮಾರ್‌ನ್ನು ವಿಚಾರಣೆಗೊಳಪಡಿಸಿದ್ದು, ಈ ವೇಳೆ ಆರೋಪಿ ನಾನು ಶಾಲಾದಿನಗಳಲ್ಲಿಯೇ ಕಾಮಾತುರನಾಗಿದ್ದೆ ಎಂಬ ವಿಷಯವನ್ನು ಹೇಳಿದ್ದಾನೆ.
ಆರೋಪಿ ಶಿವಕುಮಾರ್ 2003ರಲ್ಲಿ ಅಸಭ್ಯ ವರ್ತನೆ ಹಾಗು 2013ರಲ್ಲಿ ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ನಡೆದ ಅತ್ಯಾಚಾರ ಪ್ರಕರಣವೊಂದಲ್ಲಿ ಭಾಗಿಯಾಗಿದ್ದನು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಪಟ್ಟಿ ಸಲ್ಲಿಸಿದ್ದು, ಇದೀಗ ಈತ ಜಾಮೀನು ಪಡೆದು ಹೊರಗೆ ಬಂದಿದ್ದಾನೆ. ಅದೇ ವೇಳೆ 2011ರಲ್ಲಿ ನಡೆದ ಅತ್ಯಾಚಾರ ಪ್ರಕರಣವೊಂದರಲ್ಲಿಯೂ ಈತ ಭಾಗಿಯಾಗಿದ್ದಾನೆ.
ಉತ್ತರ ಪ್ರದೇಶದ ಗೂಂಡಾಕಾಯ್ದೆಯಡಿಯಲ್ಲಿ 2 ಪ್ರಕರಣಗಳು ಸೇರಿದಂತೆ ಯಾದವ್ ಕನಿಷ್ಠ 5 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆದಾಗ್ಯೂ, ಡಿಸೆಂಬರ್ 5 , 2014ರಂದು ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ವಿವರಿಸಿದ ಶಿವಕುಮಾರ್, ನನ್ನ ಟ್ಯಾಕ್ಸಿಗೆ ಹತ್ತಿದ ಹುಡುಗಿ ಹಿಂದಿನ ಸೀಟಿನಲ್ಲಿ ಕುಳಿತು ನಿದ್ದೆ ಮಾಡುತ್ತಿದ್ದಳು. ಆಕೆ ಒಬ್ಬಳೇ ಇದ್ದುದನ್ನು ನೋಡಿ ನನ್ನ ಮನಸ್ಸು ಚಂಚಲವಾಯಿತು. ಆಗ ನಾನು ನನ್ನ ವಾಹನವನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದೆ.
ನಾನು ನೈನಿತಾಲ್‌ನಲ್ಲಿ 2 ನೇ ತರಗತಿಯವರೆಗೆ ಓದಿದ್ದು, ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮಥುರಾಗೆ ಬಂದೆ. ನಾನು ಓದಿನಲ್ಲಿ ತುಂಬಾ ಹಿಂದೆ ಇದ್ದೆ. 1999ರಲ್ಲಿ ಹೊಟ್ಟೆ ಪಾಡಿಗಾಗಿ ಕೃಷಿ ಮಾಡಿದೆ. 2005ರಲ್ಲಿ ದೆಹಲಿಯಲ್ಲಿ ಕಾಲ್ ಸೆಂಟರ್‌ವೊಂದರ ಕ್ಯಾಬ್ ಡ್ರೈವರ್ ಆಗಿ ಕೆಲಸಕ್ಕೆ ಸೇರಿದೆ. ಅನಂತರ ನಾನು ಸ್ವಿಫ್ಟ್ ಡಿಸೈರ್ ಕಾರು ಖರೀದಿಸಿ ಯೂಬರ್ ಕಂಪನಿಯ ಸೇವೆಯಲ್ಲಿ ತೊಡಗಿದೆ ಎಂದು ಶಿವಕುಮಾರ್ ತನ್ನ ಜೀವನದ ಕತೆಯನ್ನು ಹೇಳಿದ್ದಾರೆ.
ಮಹಿಳೆಯನ್ನು ಅತ್ಯಾಚಾರಗೈದ ಆರೋಪದಲ್ಲಿ ಶಿವಕುಮಾರ್ ವಿರುದ್ದ ಭಾರತೀಯ ದಂಡ ಸಂಹಿತೆ ಸೆಕ್ಷನ್ 376 (ಅತ್ಯಾಚಾರ), 366 (ಮಹಿಳೆಯ ಅಪಹರಣ), 506 (ಅಪರಾಧ) ಮತ್ತು 323 (ನೋವುಂಟು ಮಾಡಿರುವುದಕ್ಕೆ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.