ಪ್ರಧಾನ ಸುದ್ದಿ

ಬಸ್‌ಗೆ ತೈಲ ಟ್ಯಾಂಕರ್ ಡಿಕ್ಕಿ ; 59 ಸಾವು

Rashmi Kasaragodu

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಭಾನುವಾರ ಬಸ್‌ಗೆ ತೈಲ ಟ್ಯಾಂಕರ್ ಡಿಕ್ಕಿ ಹೊಡೆದಿದ್ದು, 59 ಜನರು ಮೃತಪಟ್ಟ ಘಟನೆ ವರದಿಯಾಗಿದೆ.

ಇಲ್ಲಿನ ಸೂಪರ್ ಹೈವೇಯಲ್ಲಿ ಕರಾಚಿಯಿಂದ ಶಿಕಾರ್‌ಪುರ್‌ಗೆ ಹೋಗುತ್ತಿದ್ದ ಬಸ್ ಭಾನುವಾರ ಬೆಳಗ್ಗೆ ತೈಲ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ ಎಂದು ಕರಾಚಿ ಕಮಿಷನರ್ ಶೊಯಾಬ್ ಸಿದ್ಧಿಖಿ ಹೇಳಿದ್ದಾರೆ.

ಬಸ್‌ನಲ್ಲಿ ಜನರ ಸಂಖ್ಯೆ ಮಿತಿ ಮೀರಿತ್ತು. ಕೆಲವು ಪ್ರಯಾಣಿಕರು ಬಸ್ಸಿನ ಮೇಲೆ ಕುಳಿತು ಪ್ರಯಾಣಿಸುತ್ತಿದ್ದರು. ಬಸ್ ಚಾಲಕ ಮತ್ತು ತೈಲ ಟ್ಯಾಂಕರ್ ಚಾಲಕ ಮಿತಿಮೀರಿದ ವೇಗದಲ್ಲಿ ವಾಹನ ಚಲಾಯಿಸಿದ್ದರಿಂದ ಎರಡೂ ವಾಹನಗಳು ಮುಖಾಮುಖಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ಸಿದ್ದಿಖಿ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಸಂಭವಿಸಿದ ಅತೀ ದೊಡ್ಡ ರಸ್ತೆ ಅಪಘಾತ ಇದಾಗಿದೆ. ಪ್ರಸ್ತುತ ಅಪಘಾತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 59 ಜನರ ಮೃತಪಟ್ಟಿದ್ದು, ಗಾಯಗೊಂಡ ನಾಲ್ವರನ್ನು ಜಿನ್ನಾ ಆಸ್ಪತ್ರೆಗೆ ದಾಖಲಿಸಲಾಗಿದೆ,

ಬಸ್ಸಿನಲ್ಲಿ 60ರಿಂದ 70 ಜನ ಪ್ರಯಾಣಿಕರಿದ್ದು, ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಬೆಂಕಿ ಕಾಣಿಸಿಕೊಂಡಾಗ ಹಿಂದಿನ ಸೀಟಿನಲ್ಲಿ ಕುಳಿತ ಪ್ರಯಾಣಿಕರು ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದುರ್ಮರಣಕ್ಕೀಡಾದ 59 ಮಂದಿಯಲ್ಲಿ 40 ಮಂದಿ ಸಜೀವ ದಹನವಾಗಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿದೆ.

ಬಸ್ ಮಿತಿ ಮೀರಿದ ವೇಗದಲ್ಲಿ ಓಡುತ್ತಿತ್ತು. ಆವೇಳೆ ತೈಲ ಟ್ಯಾಂಕರ್ ವಿರುದ್ಧ ದಿಶೆಯಲ್ಲಿ ಇನ್ನಷ್ಟು ವೇಗದಿಂದ ಮುನ್ನುಗ್ಗುತ್ತಿತ್ತು. ಭಯದಿಂದ ಚಾಲಕ ನಿಯಂತ್ರಣ ತಪ್ಪಿದ್ದು ಈ ಅಪಘಾತಕ್ಕೆ ಕಾರಣವಾಯಿತು ಎಂದು ಅಪಘಾತದಿಂದ ಪಾರಾದ ಪ್ರಯಾಣಿಕರೊಬ್ಬರು ಹೇಳಿದ್ದಾರೆ

SCROLL FOR NEXT