ಗಾಂಧಿನಗರ: 7ನೇ ಜಾಗತಿಕ ಹೂಡಿಕೆದಾರರ ಸಮಾವೇಶ (ವೈಬ್ರಂಟ್ ಗುಜರಾತ್)ಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದ್ದಾರೆ.
ಭಾರತವೀಗ ಜಾಗತಿಕ ಹೂಡಿಕೆ ತಾಣವಾಗಿ ಬೆಳೆಯುತ್ತಿದ್ದು, ಹೂಡಿಕೆಗೆ ಇದ್ದ ಎಲ್ಲ ಪ್ರತಿಬಂಧಗಳನ್ನು ತೆಗೆದು ಹಾಕಲಾಗಿದೆ. ಇಲ್ಲಿ ಸ್ಥಿರವಾದ ತೆರಿಗೆ ವ್ಯವಸ್ಥೆ ಜಾರಿಯಲ್ಲಿದ್ದು, ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಲಾಗಿದೆ. ಅದೇ ವೇಳೆ ಸರಳ ಮತ್ತು ಪಾರದರ್ಶಕ ಹೂಡಿಕೆ ನೀತಿಯನ್ನು ಜಾರಿಗೆ ತರಲಾಗಿದೆ ಎಂದು ಸಮ್ಮೇಳನಕ್ಕೆ ಚಾಲನೆ ನೀಡಿದ ಪ್ರಧಾನಿ ಹೇಳಿದ್ದಾರೆ.
ಏಳು ತಿಂಗಳಲ್ಲಿ ನಾವು ಇಲ್ಲಿನ ವಾತಾವರಣವನ್ನೇ ಬದಲಿಸಿದ್ದೇವೆ. ನಾನು ಅಧಿಕಾರಕ್ಕೇರಿದ ಮೊದಲ ದಿನದಿಂದಲೇ ನಮ್ಮ ಸರ್ಕಾರ ಆರ್ಥಿಕತೆಯನ್ನು ಉತ್ತಮ ಪಡಿಸುವುದಕ್ಕಾಗಿ ಕಾರ್ಯಗತವಾಗಿದ್ದೇವೆ ಎಂದು ಹೇಳಿದ್ದಾರೆ.
ಇದೀಗ ಇತರ ದೇಶಗಳು ನಮ್ಮೊಂದಿಗೆ ಕೆಲಸ ಮಾಡಲು ಮುಂದೆ ಬರುತ್ತಿವೆ. ಇಂದು ಭಾರತ ಅವಕಾಶಗಳನ್ನು ಕಲ್ಪಿಸುವ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಮೋದಿ ಹೇಳಿದ್ದಾರೆ.
ಪ್ರಸ್ತುತ ಸಮಾವೇಶದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ, ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಂಗ್ ಕಿಮ್ ಸೇರಿದಂತೆ 100 ದೇಶಗಳ ಕಾರ್ಪೊರೇಟ್ ನಾಯಕರು, ಸಚಿವರುಗಳು ಭಾಗವಹಿಸಿದ್ದಾರೆ.
ಭಾರತದ ಅಭಿವೃದ್ಧಿಯ ಭಾಗವಾಗುವಂತೆ ಎಲ್ಲರೂ ಸಹಕರಿಸಬೇಕೆಂದು ಇತರ ದೇಶಗಳ ವ್ಯಾಪಾರ ಮತ್ತು ಹೂಡಿಕೆದಾರರಿಗೆ ಮೋದಿ ಮನವಿ ಮಾಡಿದ್ದಾರೆ.
ವೈಬ್ರೆಂಟ್ ಗುಜರಾತ್ ಹೂಡಿಕೆದಾರರ ಸಮಾವೇಶ ಮೂರು ದಿನ (ಜ.13ರವರೆಗೆ) ನಡೆಯಲಿದೆ.