ನವದೆಹಲಿ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವ ಗಣರಾಜ್ಯೋತ್ಸವ ಪರೇಡ್‌ಗೆ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಆಹ್ವಾನವಿಲ್ಲ!
ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆಯುವ ವಿಶೇಷ ಪರೇಡ್‌ಗೆ ದೆಹಲಿ ಮಾಜಿ ಮುಖ್ಯಮಂತ್ರಿಯವರನ್ನೇ ಕರೆಯದೆ ಸರ್ಕಾರ ರಾಜತಾಂತ್ರಿಕ ಮರ್ಯಾದೆಯನ್ನೂ ಕೂಡಾ ಕಡೆಗಣಿಸಿದೆ ಎಂದು ಆಮ್ ಆದ್ಮಿ ಪಕ್ಷ ಅಭಿಪ್ರಾಯಪಟ್ಟಿದೆ.
ಪರೇಡ್‌ನಲ್ಲಿ ಭಾಗವಹಿಸಲು ಕೇಜ್ರಿವಾಲ್ ಉತ್ಸುಕರಾಗಿದ್ದು, ತಮಗೆ ಆಹ್ವಾನ ಕಳಿಸದೇ ಇರುವ ಮೋದಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾನು ದೆಹಲಿಯ ಮಾಜಿ ಮುಖ್ಯ.ಮಂತ್ರಿ ಮತ್ತು ಎಂಎಲ್‌ಎ ಆಗಿದ್ದರೂ ತನಗೆ ಆಹ್ವಾನ ಕಳಿಸದೇ, ಕಡೆಗಣಿಸಿದ್ದು ಸರಿಯಲ್ಲ ಎಂದು ಕೇಜ್ರಿವಾಲ್ ನುಡಿದಿದ್ದಾರೆ.
ಒಬಾಮ ಭೇಟಿಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮಾತ್ರವಲ್ಲದೆ ಜೈಪುರ್, ಆಗ್ರಾದಲ್ಲಿಯೂ ಹೆಚ್ಚಿನ ಭದ್ರತೆ ಏರ್ಪಡಿಸಲಾಗಿದೆ.
ಕೇಜ್ರಿವಾಲ್‌ರನ್ನು ಮೋದಿ ಕಡೆಗಣಿಸಿರುವುದು ಇದೇ ಮೊದಲ ಬಾರಿಯೇನೂ ಅಲ್ಲ. ಇತ್ತೀಚೆಗೆ ದೆಹಲಿಯಲ್ಲಿ ರ್ಯಾಲಿ ನಡೆಸಿದ ಮೋದಿ, ಅರಾಜಕತಾವಾದಿಯಾಗಿರುವ ಕೇಜ್ರಿವಾಲ್ ಕಾಡಿಗೆ ಹೋಗಿ ನಕ್ಸಲ್ ಜತೆಗೆ ಸೇರಲಿ ಎಂದು ಹೇಳಿದ್ದರು. ಇದಕ್ಕೆ ಉತ್ತರಿಸಿದ ಕೇಜ್ರಿವಾಲ್ ದೆಹಲಿ ಚುನಾವಣೆ ಬಗ್ಗೆ ಬಿಜೆಪಿಗೆ ಭಯವಿರುವ ಕಾರಣವೇ ಅವರು ವೈಯಕ್ತಿಕ ದಾಳಿ ಮಾಡುತ್ತಿದ್ದಾರೆ ಎಂದಿದ್ದರು.