ವೆಲ್ಲೂರು: ಡಿಎಂಕೆ ಪಕ್ಷದ ಮಹಿಳಾ ವಿಭಾಗದ ಕಾರ್ಯದರ್ಶಿ ಹಾಗೂ ಲೋಕಸಭಾ ಸದಸ್ಯೆ ಕನಿಮೋಳಿ, ಮತ್ತೊಂದು ಹಿಂದಿ ವಿರೋಧಿ ಚಳವಳಿಗೆ ಅವಕಾಶ ನೀಡುವಂತಹ ಪ್ರಚೋದನೆಗೆ ಬೇಡ ಎಂದು ಬಿಜೆಪಿ ನಾಯಕತ್ವದ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅಣ್ಣ ಸಲೈನಲ್ಲಿ ಹಿಂದಿ ವಿರೋಧಿ ಚಳವಳಿಯ ಹುತಾತ್ಮರಿಗೆ ಗೌರವ ಸಲ್ಲಿಸಲು ಸೇರಿದ್ದ ಸಭೆಯಲ್ಲಿ ಮಾತನಾಡಿದ ಅವರು, "ಬಿಜೆಪಿ ಸರ್ಕಾರ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಹಿಂದಿ ಭಾಷೆಯನ್ನು ಅಧಿಕೃತ ಸಂಪರ್ಕ ಭಾಷೆಯಾಗಿ ಬಳಸಲು ಸೂಚನೆ ನೀಡಲಾಗಿದೆ. ಇದನ್ನು ಡಿಎಂಕೆ ಮತ್ತು ಇತರ ಪಕ್ಷಗಳು ವಿರೋಧಿಸಿದ್ದವು. ನಾವು ಯಾವುದೇ ಭಾಷೆಯ ವಿರೋಧಿಗಳಲ್ಲ. ತಮಿಳುನಾಡಿನ ಜನ ಯಾವ ಭಾಷೆಯನ್ನಾದರೂ ಕಲಿಯಬಹುದು ಆದರೆ ಅವರನ್ನು ಇಂತಹ ನಿರ್ಧಿಷ್ಟ ಭಾಷೆಯನ್ನು ಕಲಿಯುವಂತೆ ಒತ್ತಾಯಿಸಬಾರದು" ಎಂದಿದ್ದಾರೆ. ನಮಗೆ ಬಿಜೆಪಿ ಪಕ್ಷದ ಜೊತೆ ತೊಂದರೆಯೇನಿಲ್ಲ ಆದರೆ ಆ ಪಕ್ಷ ಧರ್ಮ ಮತ್ತು ಭಾಷೆಯ ಮೇಲೆ ರಾಜಕೀಯ ಮಾಡಿದರೆ ಡಿಎಂಕೆ ಸುಮ್ಮನೆ ನೋಡಿ ಕುಳಿತುಕೊಳ್ಳುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಇತಿಹಾಸವನ್ನು ಉದಾಹರಿಸಿದ ಅವರು "೧೯೨೭ ರಲ್ಲಿ ಸರೋಜಿನಿ ನಾಯ್ಡು ಅವರು ಮದ್ರಾಸಿನಲ್ಲಿ ಸಭೆಯನ್ನುದ್ದೇಶಿಸಿ ಹಿಂದಿಯ ಪ್ರಚಾರದ ಬಗ್ಗೆ ಮತ್ತು ಅದರ ಉಪಯೋಗದ ಬಗ್ಗೆ ಮಾತನಾಡಿದ್ದರು. ರಾಜಾಜಿ ಕೂಡ ಹಿಂಡಿ ವಿರೋಧಿ ಪ್ರತಿಭಟನಕಾರರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದರು. ಆದರೆ ದ್ರಾವಿಡ ಚಳುವಳಿ ಇವ್ಯಾವುದಕ್ಕೂ ಬಗ್ಗಲಿಲ್ಲ. ಪೆರಿಯಾರ್ ಮತ್ತು ಅವರ ಸಹಚರರು ಹಿಂದಿ ವಿರೋಧಿ ಚಳವಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ" ಎಂದಿದ್ದಾರೆ. "ತಮಿಳುನಾಡನ್ನು ಉದಾಸೀನ ಮಾಡುವಂತಿಲ್ಲ ಹಾಗೂ ನಮ್ಮ ಬೇಡಿಕೆಯನ್ನು ತಳ್ಳಿಹಾಕುವಂತಿಲ್ಲ ಎಂದು ನಂತರ ಕೆಂದ್ರ ಸರ್ಕಾರಕ್ಕೆ ಮನವರಿಕೆಯಾಯಿತು" ಎಂದು ಕೂಡ ತಿಳಿಸಿದ್ದಾರೆ.
ತಮಿಳು ಭಾಷೆಯ ಹುತಾತ್ಮರಿಗೆ ಗೌರವ ಸೂಚಿಸುತ್ತ "ಈ ದಿನ (ಜನವರಿ ೨೫) ತಿರುಚಿಯಲ್ಲಿ ಹಿಂದಿ ವಿರೋಧಿ ಪ್ರತಿಭಟನೆಯಲ್ಲಿ ಚಿನ್ನಸ್ವಾಮಿಯವರು ತಮ್ಮನ್ನು ಬೆಂಕಿಗೆ ಆಹುತಿ ಕೊಟ್ಟರು. ನಾವು ಈ ಹುತಾತ್ಮನಿಗೆ ವಂದನೆ ಮತ್ತು ಗೌರವ ಸಲ್ಲಿಸುತ್ತಿದ್ದೇವೆ" ಎಂದಿದ್ದಾರೆ.