ಉಫಾ : ರಷ್ಯಾದ ಉಫಾ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ನಿಗದಿಯಾಗಿದ್ದ ಸಮಯವನ್ನು ಮೀರಿ ಒಟ್ಟು ಒಂದು ಗಂಟೆಗೂ ಅಧಿಕ ಕಾಲ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.
ಎಸ್ ಸಿ ಒ ಶೃಂಗಸಭೆ ಸಂದರ್ಭದಲ್ಲಿ ನಡೆದ ಮಾತುಕತೆಯಲ್ಲಿ ಭಯೋತ್ಪಾದನೆ ವಿಷಯ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಪಾಕ್ ಪ್ರಧಾನಿ ನವಾಜ್ ಷರೀಫ್ ಗೆ ಖಡಕ್ ಪ್ರಶ್ನೆಗಳನ್ನು ಕೇಳಿದ್ದು, ಪಾಕಿಸ್ತಾನ ನಡೆದುಕೊಳ್ಳುತ್ತಿರುವ ರೀತಿಗೆ ಅಸಮಾಧಾನ ವ್ಯಕಪಡಿಸಿದ್ದಾರೆ. ಮುಂಬೈ ದಾಳಿ ಪ್ರಕರಣದಲ್ಲಿ ಪಾಕಿಸ್ತಾನದ ಮೃದು ಧೋರಣೆಗೆ ಆಕ್ಷೇಪ ವ್ಯಕ್ತಪಡಿಸಿರುವ ಪ್ರಧಾನಿ, 26 /11 ರ ಮುಂಬೈ ದಾಳಿಯ ರೂವಾರಿ ಲಖ್ವಿ ವಿರುದ್ಧ ಪಾಕಿಸ್ತಾನದ ಮುಂದಿನ ಕ್ರಮ ಏನು ಎಂದು ಪ್ರಶ್ನಿಸಿದ್ದಾರೆ. ಪಾಕಿಸ್ತಾನದ ಸೈನಿಕರು ಪದೇ ಪದೇ ಗಡಿ ನಿಯಮ ಉಲ್ಲಂಘನೆ ಮಾಡುತ್ತಿರುವುದು ಹಾಗೂ ಭಯೋತ್ಪಾದಕರು ಭಾರತದೊಳಗೆ ನುಸುಳುತ್ತಿರುವುದನ್ನು ಪಾಕ್ ಸರ್ಕಾರ ಗಮನಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಈ ವಿಷಯಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿ ಮೋದಿ ನವಾಜ್ ಷರೀಫ್ ಅವರನ್ನು ಒತ್ತಾಯಿಸಿದ್ದಾರೆ.
ಪ್ರಧಾನಿ ಮೋದಿ ಅವರ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿರುವ ನವಾಜ್ ಷರೀಫ್ ಮುಂಬೈ ದಾಳಿ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ಮೋದಿ ಪ್ರಸ್ತಾಪಿಸಿರುವ ಎಲ್ಲಾ ವಿಷಯಗಳ ಬಗ್ಗೆ ಸೂಕ್ತ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪಾಕಿಸ್ತಾನ ಹಾಗೂ ಭಾರತ ವಿದೇಶಾಂಗ ಕಾರ್ಯದರ್ಶಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ನವಾಜ್ ಷರೀಫ್ ಮೋದಿಗೆ ಆಹ್ವಾನ ನೀಡಿದ್ದು ಮೋದಿ 2016 ರಲ್ಲಿ ಇಸ್ಲಾಮಾಬಾದ್ ನಲ್ಲಿ ನಡೆಯಲಿರುವ ಸಾರ್ಕ್ ಸಮ್ಮೇಳನದಲ್ಲಿ ಭಾಗಿಯಾಗುವುದಾಗಿ ಭರವಸೆ ನೀಡಿದ್ದಾರೆ ಎಂದು ಉಭಯ ದೇಶದ ವಿದೇಶಾಂಗ ಕಾರ್ಯದರ್ಶಿಗಳು ಸ್ಪಷ್ಟಪಡಿಸಿದ್ದಾರೆ.
ಮಾತುಕತೆ ವೇಳೆ, 15 ದಿನಗಳಲ್ಲಿ ಉಭಯ ದೇಶದ ಮೀನುಗಾರರನ್ನು ಬಿಡುಗಡೆ ಮಾಡುವುದಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಧಾರ್ಮಿಕ ಪ್ರವಾಸೋದ್ಯಮಕ್ಕೆ ಉಭಯ ದೇಶಗಳಲ್ಲೂ ಸೌಲಭ್ಯ ಒದಗಿಸುವುದರ ಬಗ್ಗೆ ಚರ್ಚೆ ನಡೆಸಲಾಗಿದೆ.