ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣ ಸಂಬಂಧ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಸೋಮವಾರ ಸಂಜೆ ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿದ್ದಾರೆ.
ಲೋಕಾಯುಕ್ತ ಕಾಯ್ದೆಯ ಬಗ್ಗೆ ಸುಮಾರು 15 ನಿಮಿಷಗಳ ಕಾಲ ಸ್ಪೀಕರ್ ಜತೆ ಚರ್ಚಿಸಿದ ನ್ಯಾ.ಸಂತೋಷ್ ಹೆಗ್ಡೆ ಅವರು, ಸೆಕ್ಷನ್ 6ರ ಪ್ರಕಾರ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಅವರ ವಿರುದ್ಧ ಕ್ರಮಕೈಗೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.
1984ರಲ್ಲಿ ರಾಮಕೃಷ್ಣ ಹೆಗ್ಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟರನ್ನು ಸದೆಬಡಿಯಲು ಲೋಕಾಯುಕ್ತ ಸಂಸ್ಥೆ ರಚನೆಯಾಯಿತು. ಆದರೆ ಲೋಕಾಯುಕ್ತ ಸಂಸ್ಥೆಯಲ್ಲೇ ಭ್ರಷ್ಟಾಚಾರ ನಡೆದರೆ, ಸೆಕ್ಷನ್ 6ರ ಪ್ರಕಾರ ಲೋಕಾಯುಕ್ತರ ವಿರುದ್ಧ ಕ್ರಮಕೈಗೊಳ್ಳುವ ಹಕ್ಕು ಶಾಸನಸಭೆಗೆ ಇದೆ. ಹಕ್ಕು ಚಲಾಯಿಸುವ ಮೂಲಕ ಲೋಕಾಯುಕ್ತರನ್ನು ಪದಚ್ಯುತಗೊಳಿಸಬಹುದು ಎಂದು ಸಂತೋಷ್ ಹೆಗ್ಡೆ ಅವರು ಕಾಗೋಡು ತಿಮ್ಮಪ್ಪ ಅವರಿಗೆ ಮನವರಿಗೆ ಮಾಡಿಕೊಟ್ಟಿದ್ದಾರೆ.