1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ, ಉಗ್ರ ಯಾಕುಬ್ ಮೆಮನ್‌ಗೆ ಗಲ್ಲು ಶಿಕ್ಷೆ ಜಾರಿಗೊಳಿಸಿದ್ದಕ್ಕೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಲಗೈ ಬಂಟ ಛೋಟಾ ಶಕೀಲ್ ಬೆದರಿಕೆ ಹಾಕಿದ್ದಾನೆ.
ಯಾಕೂಬ್‌ನನ್ನು ಗಲ್ಲಿಗೇರಿಸಿದ ಬಳಿಕ ಪ್ರಮುಖ ಆಂಗ್ಲ ದಿನಪತ್ರಿಕೆಯೊಂದಕ್ಕೆ ಕರೆ ಮಾಡಿ ತನ್ನ ಆಕ್ರೋಶ ವ್ಯಕ್ತಪಡಿಸಿರುವ ಛೋಟಾ ಶಕೀಲ್, ಅದಕ್ಕೆ ತಕ್ಕ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದಿದ್ದಾನೆ.
ಯಾಕೂಬ್ ಮೆಮನ್ ಸಾವು 'ಕಾನೂನಿನ ಕೊಲೆ' ಎಂದಿರುವ ಭೂಗತ ಪಾತಕಿ, ದಾವೂದ್ ಆಗಲಿ ಅಥವಾ ಇತರೆ ಪರಾರಿಯಾಗಿರುವ ಆರೋಪಿಗಳು ಯಾವುದೇ ಕಾರಣಕ್ಕೂ ಭಾರತಕ್ಕೆ ಮರಳುವುದಿಲ್ಲ ಎಂದಿದ್ದಾನೆ.
ಭಾರತ ಸರ್ಕಾರದ ಭರವಸೆಗಳನ್ನು ನಂಬಿ ದಾವೂದ್ ಏನಾದರೂ ಭಾರತಕ್ಕೆ ಬಂದಿದ್ದರೇ ಆತನಿಗೂ ಯಾಕೂಬ್ ಮೆಮನ್‌ಗೆ ಆದ ಗತಿಯೇ ಆಗುತ್ತಿತ್ತು ಎಂಬುದು ಈಗ ಸ್ಪಷ್ಟವಾಗಿದೆ ಎಂದು ಛೋಟಾ ಶಕೀಲ್ ಹೇಳಿದ್ದಾನೆ.
ಭಾರತ ಸರ್ಕಾರ ಯಾಕೂಬ್ ಮೆಮನ್‌ನನ್ನು ಗಲ್ಲಿಗೆ ಹಾಕುವ ಮೂಲಕ ಯಾವ ಸಂದೇಶ ರವಾನಿಸಿದೆ? ಆತನ ಸಹೋದರನ ಕೃತ್ಯಕ್ಕಾಗಿ ಒಬ್ಬ ಮುಗ್ದ ವ್ಯಕ್ತಿಗೆ ನೀವು ಶಿಕ್ಷೆ ನೀಡಿದ್ದೀರಿ. ನಮ್ಮ ಕಂಪನಿ ಇದನ್ನು ಖಂಡಿಸುತ್ತದೆ. ಅದೊಂದು ಕಾನೂನಿನ ಹತ್ಯೆ... ಇದರ ಪರಿಣಾಮ ನೀವು ಎದುರಿಸಬೇಕಾಗುತ್ತದೆ ಎಂದು ಶಕೀಲ್ ಬೆದರಿಕೆ ಹಾಕಿದ್ದಾನೆ.