ಪ್ರಧಾನ ಸುದ್ದಿ

ರಾಜಭವನ ನವೀಕರಣಕ್ಕೆ ರಾಜ್ಯಪಾಲರಿಂದ 2.4 ಕೋಟಿ ಖರ್ಚು!

Lingaraj Badiger

ಬೆಂಗಳೂರು: ಒಂಬತ್ತು ತಿಂಗಳ ಹಿಂದಷ್ಟೇ ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬಂದ ಗುಜರಾತ್ ವಿಧಾನಸಭೆಯ ಮಾಜಿ ಸ್ಪೀಕರ್ ವಜುಭಾಯಿ ರುಡಾಭಾಯಿ ವಾಲಾ ಅವರು ಪ್ರಸಕ್ತ ಸಾಲಿನಲ್ಲೇ ರಾಜಭವನ ನವೀಕರಣಕ್ಕಾಗಿ ಬರೋಬ್ಬರಿ ಎರಡು ಕೋಟಿ ರುಪಾಯಿ ಖರ್ಚು ಮಾಡಿ ಭಾರಿ ಚರ್ಚೆಗೆ ಕಾರಣವಾಗಿದ್ದಾರೆ.

ವಜುಭಾಯಿ ವಾಲಾ ಅವರ ದುಂದುವೆಚ್ಚ ರಾಜಭವನ ನವೀಕರಣಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಮಾನ ಪ್ರಯಾಣದಲ್ಲೂ ನಮ್ಮ ಗವರ್ನರ್ ಐಶಾರಾಮಿಯಾಗಿದ್ದು, ವಿಶೇಷ ವಿಮಾನಯಾನಕ್ಕಾಗಿ ಬರೋಬ್ಬರಿ 1.03 ಕೋಟಿ ರುಪಾಯಿ ವೆಚ್ಚ ಮಾಡಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಮಹೇಶ್ ಚೇವರ್ ಎಂಬುವರು ಕೇಳಿದ್ದ ಮಾಹಿತಿಗೆ ಲೋಕೋಪಯೋಗಿ ಇಲಾಖೆ ಈ ಮಾಹಿತಿ ನೀಡಿದ್ದು, ರಾಜಭವನದ ನವೀಕರಣಕ್ಕಾಗಿ ಹಾಗೂ ವಿಮಾನ ಪ್ರಯಾಣಕ್ಕಾಗಿ ಕೋಟಿ ಕೋಟಿ ಖರ್ಚು ಮಾಡಲಾಗಿದೆ.

ಯಾವುದಕ್ಕೆ ಎಷ್ಟು ಖರ್ಚು?

  • ರಾಜಭವನದ ಗಾಜಿನ ಮನೆ ಮತ್ತು ಬ್ಯಾಂಕ್ವೆಟ್ ಶೌಚಾಲಯ ಬ್ಲಾಕ್ ನಿರ್ಮಾಣ, ವಾಹನ ನಿಲ್ದಾಣ ಮೇಲ್ಚಾವಣಿ ನವೀಕರಣಕ್ಕೆ 50 ಲಕ್ಷ ರೂಪಾಯಿ.
  • ಟೆಲಿಫೋನ್ ಎಕ್ಸ್ ಚೇಂಜ್, ಔಷಧಾಲಯ, ಎಡಿಎಂ ಬ್ಲಾಕ್, ಕಂಪ್ಯೂಟರ್ ವಿಭಾಗ ಮತ್ತು ವಿವಿ ವಿಭಾಗಕ್ಕೆ 25 ಲಕ್ಷ ರೂಪಾಯಿ ಖರ್ಚು.
  • ರಾಜ್ಯಪಾಲರಿಗಾಗಿ 15 ಲಕ್ಷ ರೂಪಾಯಿಯ ಎಲ್‌ಜಿ ಆಲ್ಟ್ರಾ ಎಚ್‌ಡಿ 3ಡಿ ಟಿವಿ ‌ಖರೀದಿಸಲಾಗಿದೆ.
  • ರಾಜ್ಯಪಾಲರ ನಿವಾಸದ ಅಡುಗೆ ಮನೆ, ಊಟದ ಕೋಣೆ, ಸ್ನಾನ ಗೃಹ ದುರಸ್ತಿಗೆ 50 ಲಕ್ಷ ರೂ. ಖರ್ಚು.
  • ಮುಖ್ಯ ಕಟ್ಟಡದ ಹಿಂದಿನ ಪಾದಚಾರಿ ದಾರಿ ವಿಸ್ತರಣೆ, ಲಾಂಡ್ರಿ, ಔಷಧಾಲಯ ಮಳಿಗೆ ಮಾರ್ಪಾಡಿಗಾಗಿ 50 ಲಕ್ಷ ರೂಪಾಯಿ ಖರ್ಚು.
  • ರಾಜ್ಯಪಾಲರ ಕೊಠಡಿ, ಎಡಿಸಿ ಕಚೇರಿ ಒಳಾಂಗಣ ದುರಸ್ತಿಗಾಗಿ 40 ಲಕ್ಷ ರೂಪಾಯಿ ಖರ್ಚು.
  • ವಿಶೇಷಾಧಿಕಾರಿ, ಆಪ್ತ ಕಾರ್ಯದರ್ಶಿ ಕೊಠಡಿ ಮತ್ತು ಮೊಗಸಾಲೆಗಾಗಿ 30 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.
SCROLL FOR NEXT