ನವದೆಹಲಿ: ಮುಂಬರುವ ಮಾನ್ಸೂನ್ ಮುಂಗಾರುಮಳೆ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಬೀಳಲಿದೆ ಎಂಬ ಹವಾಮಾನ ಇಲಾಖೆ ಮುನ್ಸೂಚನೆಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು "ಸವಾಲನ್ನು ಅವಕಾಶವಾಗಿ ಪರಿವರ್ತಿಸಿ" ಎಂದು ಕರೆ ನೀಡಿದ್ದಾರೆ.
ಮಳೆ ಪ್ರಮಾಣ ಕಡಿಮೆಯಾಗುವುದರಿಂದ ಕೃಷಿಗೆ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ಇತರೆ ನೀರಾವರಿ ಮಾರ್ಗಗಳನ್ನು ಅಳವಡಿಸಿಕೊಳ್ಳುವ ಮೂಲಕ ಸವಾಲನ್ನು ಅವಕಾಶಗಳಾಗಿ ಪರಿವರ್ತಿಸಿಕೊಳ್ಳಬೇಕು. ತಾತ್ಕಾಲಿರ ಕೃಷಿ ಹೊಂಡಗಳ ನಿರ್ಮಾಣದ ಮೂಲಕ ಕೃಷಿಗೆ ಅಗತ್ಯವಾದ ನೀರನ್ನು ಸಂಗ್ರಹಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ "ಪ್ರಧಾನ ಮಂತ್ರಿ ಕೃಷಿ ಸಿಂಚಾಯ್ ಯೋಜನೆ ಕುರಿತ ಸಭೆಯಲ್ಲಿ "ಮಾನ್ಸೂನ್ ಮಳೆ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ರೈತರು ಪರ್ಯಾಯ ನೀರಾವರಿ ಮೂಲಗಳ ಕುರಿತು ಚಿಂತಿಸಬೇಕು. ವಿಶೇಷವಾಗಿ ಕೃಷಿ ಹೊಂಡಗಳ ನಿರ್ಮಾಣ, ಬದುಗಳ ನಿರ್ಮಾಣಕ್ಕೆ ರೈತರು ಒತ್ತು ನೀಡಬೇಕು. ವಿವಿಧ ನೀರಾವರಿ ಮೂಲಗಳ ಬಳಕೆ ಮಾಡುವ ಕುರಿತು ವಿಶೇಷ ಆಸಕ್ತಿ ನೀಡಬೇಕು ಎಂದು ಮೋದಿ ಹೇಳಿದರು.
"ಕಡಿಮೆ ಮಳೆಯಾಗುವ ಸವಾಲನ್ನು ರೈತರು ಸ್ವೀಕರಿಸಿ ಅದನ್ನು ಅವಕಾಶವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸಬೇಕು. ನೀರಾವರಿ ಯೋಜನೆಗಳ ಕುರಿತು ಜಿಲ್ಲಾ ಮಟ್ಟದಲ್ಲಿ ಚರ್ಚೆ ನಡೆದು, ಜಿಲ್ಲಾ ಮಟ್ಟದಲ್ಲೇ ಸಮರ್ಥ ನೀರಾವರಿ ವ್ಯವಸ್ಥೆ ರೂಪಿಸಲು ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಹನಿ ನೀರಾವರಿ, ಸಿಂಚನ ನೀರಾವರಿ ಮತ್ತು ಸೂಕ್ಷ್ಮ ನೀರಾವರಿಯಂತಹ ಆಧುನಿಕ ನೀರಾವರಿ ತಂತ್ರಜ್ಞಾನಗಳ ಅನುಷ್ಠಾನಕ್ಕೆ ಸ್ಥಳೀಯ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು ಎಂದು ಮೋದಿ ಸಲಹೆ ನೀಡಿದರು.
ಈ ಹಿಂದೆ ಪ್ರಸಕ್ತ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಲಿದ್ದು, ಬರಗಾಲ ಎದುರಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ವರದಿ ನೀಡಿತ್ತು. ಈ ಬಗ್ಗೆ ಮಾತನಾಡಿದ್ದ ಕೇಂದ್ರ ಭೂವಿಜ್ಞಾನ ಸಚಿವ ಹರ್ಷವರ್ಧನ್ ಅವರು, ಹವಾಮಾನ ಇಲಾಖೆಯು ಈ ವರ್ಷದ ಮಳೆಯ ಮುನ್ಸೂಚನೆಯನ್ನು ಪರಿಷ್ಕೃರಿಸಿದ್ದು, ಈ ಬಾರಿ ದೀರ್ಘಾವಧಿ ಸರಾಸರಿ (ಎಲ್ ಪಿಎ)ಯ ಶೇ.93ರ ಬದಲಾಗಿ ಶೇ.88 ಮಳೆ ಬೀಳಲಿದೆ ಎಂದು ಹೇಳಿದೆ. ಜತೆಗೆ, ಮಳೆ ಕೊರತೆ ಪರಿಣಾಮ ಬರಗಾಲ ಎದುರಾಗುವ ಸಾಧ್ಯತೆಯೂ ಇದ್ದು, ದೇಶದ ವಾಯವ್ಯ ಭಾಗ ತೀವ್ರ ಸಮಸ್ಯೆ ಎದುರಿಸಲಿದೆ ಎಂದೂ ಹೇಳಿದೆ ಎಂದು ಹೇಳಿದ್ದರು.