ಪ್ರಧಾನ ಸುದ್ದಿ

ಹೊಸ ಡೈನೋಸಾರ್ ಪ್ರಭೇದದ ಪಳೆಯುಳಿಕೆ ಪತ್ತೆ

Sumana Upadhyaya

ವೇಲ್ : ದೈತ್ಯ ಟಿರನೋಸಾರ್ ರೆಕ್ಸ್ ಡೈನೋಸಾರ್ ಗುಂಪಿಗೆ  ಸೇರಿದ ನಾಯಿ ಗಾತ್ರದ ಡೈನೋಸಾರ್ ಪ್ರಭೇದದ ಪಳೆಯುಳಿಕೆ  ಪತ್ತೆಯಾಗಿದೆ.

ವೇಲ್ಸ್ ನಲ್ಲಿ 200 ದಶಲಕ್ಷ ವರ್ಷಗಳ ಹಿಂದೆ ಜುರಾಸಿಕ್ ಕಾಲದಲ್ಲಿ ಈ ಹೊಸ ಡೈನೋಸರ್ ಇದ್ದಿರಬಹುದು ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ನಾಯಿ ಗಾತ್ರದ ಈ ಡೈನೋಸಾರ್ ಜುರಾಸಿಕ್ ಕಾಲದಲ್ಲಿ ಕಂಡುಬಂದ ಭೂಮಿಗೆ ಪ್ರವೇಶಿಸಿದ ಮೊದಲ ಪ್ರಭೇದವಾಗಿದೆ.

ಇದು, ವೇಲ್ ನ ಪೆನರ್ತ್ ಬಳಿ ಲ್ಯಾವರ್ನೋಕ್ ಸಮುದ್ರದ ಹತ್ತಿರ ಇಬ್ಬರು  ಪಳೆಯುಳಿಕೆ ಶೋಧಕ ಸಹೋದರರಾದ ನಿಕ್ ಮತ್ತು ರಾಬ್ ಹನಿಗನ್  ಅವರಿಗೆ ಕಳೆದ ವರ್ಷ ಚಳಿಗಾಲದ ಸಮಯದಲ್ಲಿ ಸಿಕ್ಕಿದೆ. ಡೈನೋಸಾರ್ ನ ಅಸ್ಥಿಪಂಜರ, ಕಾಲು, ಹಲ್ಲು ಮತ್ತು ಉಗುರುಗಳು ಸಿಕ್ಕಿವೆ. ಮ್ಯಾಂಚೆಸ್ಟರ್, ಪೋರ್ಟ್ಸ್ ಮೌತ್ ಮತ್ತು ವೇಲ್ಸ್ ನ ರಾಷ್ಟ್ರೀಯ ಮ್ಯೂಸಿಯಂನ ತಜ್ಞರು ಈ ಬಗ್ಗೆ ಸಂಶೋಧನೆ ನಡೆಸಿ, 201 ದಶಲಕ್ಷ ವರ್ಷಗಳ ಹಿಂದೆ ಈ ಪ್ರಭೇದ ನೆಲೆಸಿದ್ದಿರಬಹುದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಈ ಡೈನೋಸಾರ್ ಪಳೆಯುಳಿಕೆ ಪತ್ತೆಯಿಂದ ಡೈನೋಸಾರ್ ಗಳ ಬಗ್ಗೆ, ಅವುಗಳ ವಿಕಾಸದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಉಪನ್ಯಾಸಕರು ಅಭಿಪ್ರಾಯಪಟ್ಟಿದ್ದಾರೆ. ಈಗ ಸಿಕ್ಕಿರುವ ಅವಶೇಷ ಎಳೆ ವಯಸ್ಸಿನ ಪ್ರಾಣಿಯದ್ದಾಗಿರಬಹುದು ಎಂದು ಹೇಳಿರುವ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದು, ಇದರ ಹೆಸರನ್ನು ಇನ್ನು ಕೆಲವೇ ತಿಂಗಳಲ್ಲಿ ಬಹಿರಂಗಪಡಿಸುತ್ತಾರಂತೆ.

ಈ ಪಳೆಯುಳಿಕೆಗಳನ್ನು ವೇಲ್ ನ ಕಾರ್ಡಿಫ್ ನ ರಾಷ್ಟ್ರೀಯ ಮ್ಯೂಸಿಯಂನಲ್ಲಿ ಸೆಪ್ಜೆಂಬರ್ 6ರವರೆಗೆ ಪ್ರದರ್ಶನಕ್ಕೆ ಇಡಲಾಗಿದೆ.

SCROLL FOR NEXT